ಜೂ 20- 22: ತುಳುಕೂಟ ಬಂಟ್ವಾಳ ಆಶ್ರಯದಲ್ಲಿ “ತುಳುವೆರೆನ ತುಳುನಾಡ ಸಂತೆ”
ಬಂಟ್ವಾಳ : ತುಳುಕೂಟ ಬಂಟ್ವಾಳ ಇದರ ಆಶ್ರಯದಲ್ಲಿ ನಡೆಯುವ “ತುಳುವೆರೆನ ತುಳುನಾಡ ಸಂತೆ” ಕುಕ್ಕು ಪೆಲಕಾಯಿದ ಒಟ್ಟು ತುಳು ಸಾಹಿತ್ಯ ಸಾಂಸ್ಕೃತಿಕ ರಂಗ್ ಕಾರ್ಯಕ್ರಮ ಜೂನ್ 20 ರಿಂದ 22 ರ ತನಕ ಮೂರು ದಿನಗಳ ಕಾಲ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಲಿದೆ ಎಂದು ತುಳು ಕೂಟದ ಅಧ್ಯಕ್ಷ ಸುದರ್ಶನ ಜೈನ್ ಹೇಳಿದರು.
ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ. ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆಗಾಲದ ವಿಶೇಷ ಕಾರ್ಯಕ್ರಮವಾಗಿ ಕೃಷಿಗೆ ಪ್ರಾಧಾನ್ಯತೆ, ಸಾಹಿತ್ಯಕ್ಕೆ ಒತ್ತು, ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮ ಇದಾಗಿದ್ದು ಜೂನ್ 20 ರಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನ್ಯಾಕ್ ಉಳಿಪ್ಪಾಡಿ ಸಂತೆಯನ್ನು ಹಾಗೂ ಮಾಜಿ ಸಚಿವ ಬಿ. ರಮಾನಾಥ ರೈ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸುವರು, ವಿವಿಧ ಗಣ್ಯರು ಭಾಗವಹಿಸಲಿದ್ದಾರೆ. ಅದೇ ದಿನ ತುಳು ಭಾಷಾ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವ, ಸಾಂಸ್ಕೃತಿಕ ರಂಗ್, ತುಳು ಪದರಂಗಿತ, ಬಲೆ ತೆಲಿಪಾಲೆ ಮತ್ತು ಬಲೆ ಬುಲಿಪಾಲೆ ನಾಟಕ ನಡೆಯಲಿದೆ ಎಂದರು.
ಜೂ.21 ರಂದು ಹಣ್ಣು ಹಂಪಲುಗಳ ಕೃಷಿ ಮತ್ತು ವಿವಿಧ ಉತ್ಪನ್ನಗಳ ತಯಾರಿಕೆ ಹಾಗೂ ಮಾಹಿತಿ ವಿಚಾರಗೋಷ್ಠಿ, ತುಳುವೆರೆ ಪದಗೊಂಚಿಲ್, ಹಲಸು, ಮಾವುಗಳಿಗೆ ಸಂಬಂಧಪಟ್ಟ ಒಳಾಂಗಣ ಸ್ಪರ್ಧೆ, 30 ಜನ ಕವಿಗಳಿಂದ ಬಹುಭಾಷಾ ಕವಿಗೋಷ್ಠಿ , ಯಕ್ಷಗಾನ ನೃತ್ಯ ವೈಭವ, ನೃತ್ಯ ಗಾನ ಸಂಭ್ರಮ ನಡೆಯಲಿರುವುದು.
ಜೂ. 22 ರಂದು ತುಳು ಕೂಟ ಬಂಟ್ವಾಳದ ಜೊತೆ ನೇತ್ರಾವತಿ ಕೃಷಿಕರ ಅಭಿವೃದ್ಧಿ ಒಕ್ಕೂಟ ಮತ್ತು ತೋಟಗಾರಿಕಾ ಇಲಾಖೆ ಬಂಟ್ವಾಳ ಇವರ ಸಹಕಾರದಲ್ಲಿ ಕೃಷಿ ಗೇನ, ಸಾಂಸ್ಕೃತಿಕ ಅಂಗಣ, ಹಿರಿಯ ಕೃಷಿಕರಾದ ಕೊರಗಪ್ಪ ಮೂಲ್ಯ ಮಣಿಹಳ್ಳ ಮತ್ತು ಸದಾಶಿವ ಶೆಟ್ಟಿಗಾರ್ ಅಣ್ಣಳಿಕೆ ಇವರಿಗೆ ಸನ್ಮಾನ, ನೃತ್ಯ ಸಿಂಚನ, ಮೋಕೆದ ಕಲಾವಿದೆರ್ (ರಿ.) ಬಂಟ್ವಾಳ ಇವರಿಂದ ತೆಲಿಪುವರಾ ಅತ್ತ್ ಬುಲಿಪುವರಾ ನಾಟಕ ಹಾಗೂ ಸಮಾರೋಪ ಸಮಾರಂಭ ನಡೆಯಲಿದ್ದು ವಿಧಾನಸಭಾ ಸಭಾಧ್ಯಕ್ಷ ಯು.ಟಿ. ಖಾದರ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ತುಳು ಕೂಟದ ಅಧ್ಯಕ್ಷ ಸುದರ್ಶನ್ ಜೈನ್ ವಿವರಿಸಿದರು.
ತುಳುಕೂಟದ ಕಾರ್ಯದರ್ಶಿ ಎಚ್ಕೆ ನಯನಾಡು, ಉಪಾಧ್ಯಕ್ಷ ಸೀತಾರಾಮ ಶೆಟ್ಟಿ, ಕೋಶಾಧಿಕಾರಿ ಸುಭಾಶ್ಚಂದ್ರ ಜೈನ್, ಪ್ರಮುಖರಾದ ಮಧುಸೂದನ್ ಶೆಣೈ, ಸುಕುಮಾರ್ ಬಂಟ್ವಾಳ, ರವೀಂದ್ರ ಕುಕ್ಕಾಜೆ, ದೇವಪ್ಪ ಕುಲಾಲ್, ನಾರಾಯಣ ಸಿ.ಪೆರ್ನೆ, ಮೋಹನ್ ಶೆಟ್ಟಿ, ಸದಾಶಿವ ಪುತ್ರನ್, ಮೋಹನ್ ಸಾಲಿಯಾನ್, ಮ್ಯಾಥ್ಯೂ ಮತ್ತಿತರರು ಉಪಸ್ಥಿತರಿದ್ದರು.