ಉಳ್ಳಾಲ | ಎ.29 ರಂದು ದೇರಳಕಟ್ಟೆ ಜಂಕ್ಷನ್‌ನಲ್ಲಿ ಹಕ್ಕೊತ್ತಾಯ ಸಮಾವೇಶ : ಸುನಿಲ್ ಕುಮಾರ್ ಬಜಾಲ್
ಉಳ್ಳಾಲ : ತಾಲೂಕಿನ ಸರ್ವಾಂಗೀಣ ಅಭಿವೃದ್ಧಿ ಹಾಗೂ ಜನರ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಎ.29ರಂದು ಬೆಳಿಗ್ಗೆ 10.30ಕ್ಕೆ ದೇರಳಕಟ್ಟೆ ಜಂಕ್ಷನ್‌ನಲ್ಲಿ ಸಿಪಿಎಂ ಉಳ್ಳಾಲ ವಲಯ ಸಮಿತಿ ವತಿಯಿಂದ ಹಕ್ಕೊತ್ತಾಯ ಸಮಾವೇಶವು ಜರುಗಲಿದೆ.
ಈ ಸಮಾವೇಶವನ್ನು ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಯಾದವ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಸಿಪಿಎಂ ಉಳ್ಳಾಲ ವಲಯ ಸಮಿತಿ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ತಿಳಿಸಿದ್ದಾರೆ.
ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದ ಪೂರ್ವಭಾವಿಯಾಗಿ ಎ.29 ರಂದು ಬೆಳಿಗ್ಗೆ 10ಕ್ಕೆ ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆ ಜಂಕ್ಷನ್ ಹಾಗೂ ನಾಟಿಕಲ್ ಜಂಕ್ಷನ್‌ನಿಂದ ಎರಡು ಬೃಹತ್ ರ್‍ಯಾಲಿಗಳು ಹೊರಡಲಿದೆ ಎಂದು ಹೇಳಿದರು.
ಉಳ್ಳಾಲ ತಾಲೂಕು ರಚನೆಯಾಗಿ ಐದು ವರ್ಷವಾದರೂ ಪ್ರಮುಖವಾಗಿ ಬೇಕಾದ ಸುಸಜ್ಜಿತವಾದ ಮಿನಿ ವಿಧಾನಸೌಧ, ಸಬ್ ರಿಜಿಸ್ಟ್ರಾರ್ ಕಚೇರಿ, ತಾಲೂಕು ಕಟ್ಟಡ ಕ್ರೀಡಾಂಗಣ, ವ್ಯವಸ್ಥಿತ ರಂಗ ಮಂದಿರ, ಪುರಭವನ, ತಾಲೂಕು ನ್ಯಾಯಾಲಯದ ವ್ಯವಸ್ಥೆ ಆಗಬೇಕು ಎಂಬ ಬೇಡಿಕೆ ಇಡಲಾಗುವುದು ಎಂದು ಹೇಳಿದರು.
ಹಕ್ಕೊತ್ತಾಯದ ಸಮಾವೇಶ ಸಂದೇಶವನ್ನು ಮನೆಮನೆಗೆ ತಲುಪಿಸಲು ಈಗಾಗಲೇ 150ರಷ್ಟು ತಂಡಗಳು ರಚಿಸಲಾಗಿದ್ದು ,ಎರಡು ದಿನಗಳ ಕಾಲ ಉಳ್ಳಾಲ ತಾಲೂಕಿನಾದ್ಯಂತ ವಾಹನ ಪ್ರಚಾರ ಜಾಥಾ ನಡೆಯಲಿದೆ .ಎ.21ರಂದು ಬೆಳಿಗ್ಗೆ 9.30ಕ್ಕೆ ಮುಡಿಪು ಜಂಕ್ಷನ್‌ನಲ್ಲಿ ಈ ಜಾಥಾ ವನ್ನು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಉದ್ಘಾಟಿಸಲಿದ್ದು, ಸಂಜೆ 6ಕ್ಕೆ ಹರೇಕಳ ಕಡವಿನ ಬಳಿಯಲ್ಲಿ ಸಮಾರೋಪ ನಡೆಯಲಿದೆ. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ.ಕೃಷ್ಣಪ್ಪ ಕೊಂಚಾಡಿ ಸಮಾರೋಪ ಭಾಷಣ ಮಾಡಲಿದ್ದಾರೆ.
ಎ.22ರ ಬೆಳಿಗ್ಗೆ 9.30ಕ್ಕೆ ಕುತ್ತಾರ್ ಜಂಕ್ಷನ್‌ನಲ್ಲಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಯಾದವ ಶೆಟ್ಟಿಯವರು ಉದ್ಘಾಟಿಸಲಿದ್ದು, ಸಂಜೆ 5.30ಕ್ಕೆ ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಸಂತೋಷ್ ಬಜಾಲ್ ಸಮಾರೋಪ ಭಾಷಣ ಮಾಡಲಿದ್ದಾರೆ. ಎರಡು ದಿನಗಳ ಕಾಲ ಸುಮಾರು 25ರಷ್ಟು ಸ್ಥಳಗಳಲ್ಲಿ ಜಾಥಾ ಕಾರ್ಯಕ್ರಮವು ಜರುಗಲಿದ್ದು, ಪಕ್ಷದ ಜಿಲ್ಲಾ ನಾಯಕರಾದ ಬಿ.ಎಂ.ಭಟ್, ಜಯಂತಿ ಶೆಟ್ಟಿ, ಬಿ.ಕೆ.ಇಮ್ತಿಯಾಝ್, ಯೋಗೀಶ್ ಜಪ್ಪಿನಮೊಗರು, ಮನೋಜ್ ವಾಮಂಜೂರು, ಜೆ. ಬಾಲಕೃಷ್ಣ ಶೆಟ್ಟಿ, ಈಶ್ವರೀ ಬೆಳ್ತಂಗಡಿಯವರು ಪ್ರಮುಖ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸುದ್ದಿ ಗೋಷ್ಠಿ ಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುಕುಮಾರ್ ತೊಕ್ಕೊಟ್ಟು, ಹಿರಿಯ ನಾಯಕ ಕೃಷ್ಣಪ್ಪ ಸಾಲ್ಯಾನ್ ಮುಡಿಪು ವಲಯ ಕಾರ್ಯದರ್ಶಿ ರಫೀಕ್ ಹರೇಕಳ , ದ.ಕ. ಜಿಲ್ಲಾ ಸಮಿತಿ ಸದಸ್ಯರಾದ ಶೇಖರ್ ಕುಂದರ್, ಮುಡಿಪು ವಲಯ ಸಮಿತಿ ಸದಸ್ಯರಿಝಾನ್ ಹರೇಕಳ ಉಪಸ್ಥಿತರಿದ್ದರು.