ಕೊರಗ ಸಮುದಾಯದ ಭೂದಾಖಲೆಗಳ ಅಲಭ್ಯತೆಯ ಹಿಂದೆ ವ್ಯವಸ್ಥಿತ ವಂಚನಾ ಜಾಲ: ಸಿಪಿಎಂ ಮುಂದಾಳು ಯಾದವ ಶೆಟ್ಟಿ ಆರೋಪ
ಮಂಗಳೂರು: ತಾಲೂಕು ಕಚೇರಿ ವ್ಯಾಪ್ತಿಯ ನಾಲ್ಕು ಕೊರಗ ಕುಟುಂಬಗಳ ತಮ್ಮ ಪಾರಂಪರಿಕ ಭೂಮಿಯ ದಾಖಲೆಗಳು ಅಲಭ್ಯವಾಗಿದೆ ಎಂದು ತಹಶೀಲ್ದಾರ ಕಚೇರಿಯ ಹಿಂಬರಹದ ಹಿಂದೆ ವ್ಯವಸ್ಥಿತ ವಂಚನಾ ಜಾಲ ಕಾರ್ಯಾಚರಿಸುತ್ತಿದೆ. ಇದಕ್ಕೆ ಕಚೇರಿಯ ಆಡಳಿತ ವ್ಯವಸ್ಥೆ ಸಹಕರಿಸಿದೆ. ಆದುದರಿಂದ ಸಮಗ್ರ ತನಿಖೆ ನಡೆಯಲೇಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ದ.ಕ.ಜಿಲ್ಲಾಧ್ಯಕ್ಷ ಕೆ.ಯಾದವ ಶೆಟ್ಟಿ ಒತ್ತಾಯಿಸಿದರು.
ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಬಜಪೆ ವಲಯ ಸಮಿತಿಯ ನೇತೃತ್ವದಲ್ಲಿ ನಡೆದ ಪ್ರತಿಭಟನಾ ರ್ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ದ.ಕ.ಜಿಲ್ಲೆಯ ಕೊರಗ ಸಮುದಾಯದ ಕಾನೂನುಬದ್ಧ ಹಕ್ಕುಗಳಿಗಾಗಿ ಪ್ರತೀ ಸಂದರ್ಭ ಹೋರಾಡಬೇಕಾದ ಅವಶ್ಯಕತೆ ನಿರ್ಮಾಣವಾಗಿರುವುದು ಜಿಲ್ಲೆಯ ಅರ್ಥವ್ಯವಸ್ಥೆ ಮತ್ತು ಜನಪ್ರತಿನಿಧಿಗಳ ಇಚ್ಛಾ ಶಕ್ತಿಯ ಕೊರತೆಯ ಪ್ರತೀಕ ಎಂದು ಅವರು ಆಪಾದಿಸಿದರು.
ರಾಜ್ಯ ಸಮಿತಿಯ ನಾಯಕರಾದ ಡಾ.ಕೃಷ್ಣಪ್ಪಕೊಂಚಾಡಿ, ಕೃಷ್ಣಾ ಇನ್ನಾ, ಬಜಪೆ ವಲಯ ಕಾರ್ಯದರ್ಶಿ ಕಿರಣ್ ಕತ್ತಲ್‌ಸಾರ್ ಮಾತನಾಡಿದರು. ಬಜಪೆ ವಲಯದ ಅಧ್ಯಕ್ಷ ನಿತೇಶ್ ಸ್ವಾಗತಿಸಿದರು.
ಮಂಗಳೂರು ತಾಲೂಕು ಕಚೇರಿಯಲ್ಲಿ ವಿವಿಧ ಗ್ರಾಮಗಳಿಗೆ ಸಂಬಂಧಿಸಿದ 4 ಭೂದಾಖಲೆಗಳ ಕಣ್ಮರೆಯ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಲು ಒತ್ತಾಯಿಸುವ ಮನವಿಯನ್ನು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಸಹಾಯಕ ಕಮಿಷನ್ ಮೂಲಕ ಸಲ್ಲಿಸಲಾಯಿತು.
ಪ್ರತಿಭಟನೆಯ ನೇತೃತ್ವವನ್ನು ವಿಕಾಸ್ ವಾಮಂಜೂರು, ಯೋಗೀಶ್ ಕೆ, ಬೃಜೇಶ್, ದಿನೇಶ್, ಸುಂದರ, ಅನುಷಾ, ಕೃಷ್ಣ ಕತ್ತಲ್‌ಸಾರ್ ವಹಿಸಿದ್ದರು. ಜಿಲ್ಲಾ ನಾಯಕಿ ರಶ್ಮಿ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರು.