×
Ad

ಜ.26ರಂದು ‘ಡೆನ್‌ಡೆನ್’ 3ನೇ ಆವೃತ್ತಿಯ ಸ್ಪರ್ಧೆ; ತಣ್ಣೀರುಬಾವಿ ಬೀಚ್‌ನಲ್ಲಿ ಅಂತಾರಾಷ್ಟ್ರೀಯ ಈಜಿಗೆ ಸಿದ್ಧತೆ

Update: 2026-01-07 19:52 IST

ಮಂಗಳೂರು, ಜ.8: ಸಮುದ್ರದಲ್ಲಿ ಈಜುವುದೆಂದರೆ ಅದೊಂದು ಸಾಹಸ. ಅಂತಹ ಸಾಹಸ ಕ್ರೀಡೆಯನ್ನು ಮಂಗಳೂರು ಸರ್ಫ್ ಕ್ಲಬ್ ವತಿಯಿಂದ ಕಳೆದ ಎರಡು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದ್ದು, 3ನೇ ಆವೃತ್ತಿಯ ರಾಷ್ಟ್ರಮಟ್ಟದ ‘ಡೆನ್ ಡೆನ್ ಈಜು’ ಸ್ಪರ್ಧೆ ಜ.26ರಂದು ನಡೆಯಲಿದೆ.

ಮಂಗಳೂರು ಸರ್ಫ್ ಕ್ಲಬ್ ವತಿಯಿಂದ ಈ ಸಾಹಸಮಯ ಈಜು ಸ್ಪರ್ಧೆಗೆ ಸಿದ್ಧತೆಗಳು ನಡೆದಿದ್ದು, ವರ್ಷದಿಂದ ವರ್ಷಕ್ಕೆ ಈ ಸ್ಪರ್ಧೆ ಹೆಚ್ಚಿನ ಈಜುಪಟುಗಳನ್ನು ಆಕರ್ಷಿಸುತ್ತಿದೆ. ಸರ್ಫ್ ಕ್ಲಬ್ ಬೀಚ್ (ತಣ್ಣೀರು ಬಾವಿ ಬೀಚ್-1)ನಲ್ಲಿ ತಣ್ಣೀರುಬಾವಿ ಬೀಚ್‌ನ ಸಮುದ್ರ ನೀರಿನಲ್ಲಿ ನಡೆಯಲಿರುವ ಈ ಸ್ಪರ್ಧೆಯಲ್ಲಿ ಭಾರತ ವಿವಿಧ ಕಡೆಗಳಿಂದ ರಾಷ್ಟ್ರ ಮಟ್ಟದ ಈಜುಗಾರರು ಭಾಗವಹಿಸಲಿದ್ದಾರೆ. ಕಳೆದ ವರ್ಷ ನಡೆದ 2ನೆ ಆವೃತ್ತಿಯ ಡೆನ್‌ಡೆನ್ ಈಜು ಸ್ಪರ್ಧೆಯಲ್ಲಿ 200 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು. ಈ ವರ್ಷ ಸುಮಾರು 400 ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎನ್ನುತ್ತಾರೆ ಮಂಗಳೂರು ಸರ್ಫ್‌ಕ್ಲಬ್‌ನ ಕಾರ್ಯದರ್ಶಿ ಕಾರ್ತಿಕ್ ನಾರಾಯಣ್.

ಲಂಡನ್‌ನಲ್ಲಿ ನಡೆದ ಈಜು ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಒಲಿಂಪಿಯನ್, ಮಂಗಳೂರು ಸರ್ಫ್ ಕ್ಲಬ್‌ನ ಗಗನ್ ಉಳ್ಳಾಲ್ ಅವರು ಈ ಸಾಲಿನ ಡೆನ್‌ಡೆನ್ ಈಜು ಸ್ಪರ್ಧೆಯ ತಾಂತ್ರಿಕ ಸಮಿತಿಯ ನೇತೃತ್ವವನ್ನು ವಹಿಸಿದ್ದಾರೆ.

ಈಜು ಸ್ಪರ್ಧೆಗೆ ಕೋರ್ಸ್ಟ್ ಗಾರ್ಡ್ ಸಹಕಾರ 

ತಣ್ಣೀರುಬಾವಿಯ ಸಮುದ್ರದಲ್ಲಿ ಈ ಅಂತಾರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆ ನಡೆಯುತ್ತಿರುವುದರಿಂದ ಕರಾವಳಿ ರಕ್ಷಣಾ ಪಡೆ (ಕೋಸ್ಟ್ ಗಾರ್ಡ್) ಪ್ರತಿ ವರ್ಷದಂತೆ ಈ ವರ್ಷವೂ ಸುರಕ್ಷಾ ಕಾರ್ಯದಲ್ಲಿ ಸಹಕರಿಸಲಿದೆ. ಸ್ಪರ್ಧಿಗಳ ಸುರಕ್ಷತೆಯ ಹಿನ್ನೆಲೆಯಲ್ಲಿ ಲೈಫ್ ಗಾರ್ಡ್ ಜತೆಗೆ ಸ್ಪರ್ಧೆಯ ಸಂದರ್ಭ ಸಮುದ್ರ ಯಾವುದೇ ರೀತಿಯ ದೋಣಿ ಅಥವಾ ಬೋಟ್‌ಗಳಿಂದ ತೊಂದರೆ ಆಗದಂತೆ ರಕ್ಷಣೆಯನ್ನು ಒದಗಿಸುವ ಕಾರ್ಯವನ್ನು ಕೋಸ್ಟ್ ಗಾರ್ಡ್ ನಿರ್ವಹಿಸಲಿದೆ.

ಡೆನ್‌ಡೆನ್ ಈಜು ಅಭಿಯಾನವು ಸಮುದ್ರ ನೀರಿನ ಸುರಕ್ಷತೆಯನ್ನು ಖಾತರಿ ಪಡಿಸುವ ಪ್ರಮುಖ ಉದ್ದೇಶದೊಂದಿಗೆ ನಡೆಸಲಾಗುತ್ತಿದೆ. ಬೆಳಗ್ಗೆ 6.30ಕ್ಕೆ ಈ ಸ್ಪರ್ಧೆ ಆರಂಭಗೊಂಡು ಬೆಳಗ್ಗೆ 9.30ಕ್ಕೆ ಕೊನೆಗೊಳ್ಳಲಿದೆ.

ಈ ಬಾರಿಯ ವಿಶೇಷತೆ

"ತಣ್ಣೀರುಬಾವಿ ಬೀಚ್‌ನ ಸಮುದ್ರ ಕಿನಾರೆಯಲ್ಲಿ ಕಳೆದ ವರ್ಷ 500 ಮೀಟರ್, 2 ಕಿ.ಮೀ., 4 ಕಿ.ಮೀ. ಹಾಗೂ 6 ಕಿ.ಮೀ. ಈಜು ಸ್ಪರ್ಧೆ ನಡೆದಿದ್ದರೆ, ಈ ವರ್ಷದ ವಿಶೇಷತೆಯಾಗಿ 8 ಕಿ.ಮೀ.ನ ಸ್ಪರ್ಧೆ ಸೇರ್ಪಡೆಗೊಂಡಿದೆ. ಕಳೆದ ವರ್ಷ 3 ಮಂದಿ ಅಂತರಾಷ್ಟ್ರೀಯ ಈಜುಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೆ, ಈ ಬಾರಿ 10 ಮಂದಿ ಭಾಗಹಿಸುವ ನಿರೀಕ್ಷೆ ಇದೆ".

-ಕಾರ್ತಿಕ್ ನಾರಾಯಣ್, ಕಾರ್ಯದರ್ಶಿ, ಮಂಗಳೂರು ಸರ್ಫ್ ಕ್ಲಬ್.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News