×
Ad

ಉಪ್ಪಿನಂಗಡಿ | ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ತಡೆಗೋಡೆಯಲ್ಲಿ ಬಿರುಕು

Update: 2025-05-29 23:05 IST

ಉಪ್ಪಿನಂಗಡಿ : ಚತುಷ್ಫಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ನಿಮಿತ್ತ ನಿರ್ಮಿಸಲಾದ ತಡೆಗೋಡೆಯ ಗುಣಮಟ್ಟವನ್ನು ಪ್ರಶ್ನಿಸುವಂತೆ ಉಪ್ಪಿನಂಗಡಿಯಲ್ಲಿ ತಡೆಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಭೀತಿ ಮೂಡಲು ಕಾರಣವಾಗಿದೆ.

ಹದಿನೈದು ಅಡಿಗಿಂತಲೂ ಎತ್ತರವಾದ ತಡೆಗೋಡೆ ನಿರ್ಮಾಣದ ಸಮಯದಲ್ಲಿಯೇ ಸ್ಥಳೀಯ ಜಾಗೃತ ನಾಗರಿಕರು ತಡೆಗೋಡೆಯ ಗುಣಮಟ್ಟದ ಬಗ್ಗೆ ಸಂದೇಹವನ್ನು ವ್ಯಕ್ತಪಡಿಸಿ ಇಲಾಖಾಧಿಕಾರಿಗಳ ಗಮನ ಸೆಳೆದಿದ್ದರು. ಆ ವೇಳೆ ತಂತ್ರಜ್ಞರಿಂದ ಅನುಮೋದನೆ ಪಡೆದ ರೀತಿಯಲ್ಲೇ ತಡೆಗೋಡೆಗಳ ನಿರ್ಮಾಣ ಕಾರ್ಯ ಮಾಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಲಾಗಿತ್ತು.

ಇದೀಗ ಕಾಮಗಾರಿ ನಡೆದು ವರ್ಷವೇ ಕಳೆದಿಲ್ಲ. ಅದಾಗಲೇ ತಡೆಗೋಡೆಯ ಮಧ್ಯ ಭಾಗದಲ್ಲೇ ಗುರುತರವಾದ ಬಿರುಕು ಕಾಣಿಸಿಕೊಂಡಿದ್ದು, ಇದು ಸುರಕ್ಷತೆಯನ್ನು ಸಂಶಯಿಸುವಂತೆ ಮಾಡಿದೆ.

ಇದೇ ಭಾಗದ ಹೆದ್ದಾರಿಯ ಇನ್ನೊಂದು ಪಾರ್ಶ್ವದಲ್ಲಿ ಇದೇ ರೀತಿ ನಿರ್ಮಾಣವಾದ ತಡೆಗೋಡೆಯು ಎರಡು ವರ್ಷಗಳ ಹಿಂದೆ ಬುಡದಿಂದಲೇ ಮಗುಚಿ ಬಿದ್ದಿದ್ದು, ಮಗುಚಿ ಬಿದ್ದ ಸ್ಥಳವು ಜನ ಸಂಚಾರವಿಲ್ಲದ ಸ್ಥಳವಾಗಿದ್ದರಿಂದ ಮತ್ತು ಅದು ಕೃಷಿ ಭೂಮಿಯಾಗಿದ್ದರಿಂದ ಅಲ್ಲಿ ಯಾವುದೇ ಜೀವ ಹಾನಿಯುಂಟಾಗಿರಲಿಲ್ಲ. ಆದರೆ ಇದೀಗ ಬಿರುಕು ಕಾಣಿಸಿಕೊಂಡ ತಡೆಗೋಡೆಯು ಶಾಲಾ ರಸ್ತೆಯ ಹತ್ತಿರದಲ್ಲಿರುವುದರಿಂದ ಮತ್ತೆ ಅದೇ ರೀತಿ ಮಗುಚಿ ಬಿದ್ದರೆ ಊಹಿಸಲು ಅಸಾಧ್ಯವಾದ ಅನಾಹುತ ಸಂಭವಿಸಬಹುದಾಗಿದೆ. ಈ ಕಾರಣದಿಂದ ಈ ರೀತಿ ಬಿರುಕು ಮೂಡಲು ಕಾರಣವಾದ ಕಾಮಗಾರಿಯ ಗುಣಮಟ್ಟದ ಬಗ್ಗೆ ಸಂಬಂಧಿತ ಇಲಾಖೆ ನಿಗಾವಹಿಸಬೇಕಾಗಿದೆ.

ಘಟನಾ ಸ್ಥಳಕ್ಕೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಯವರ ಸೂಚನೆಯ ಮೇರೆಗೆ ರಾಷ್ಟ್ರೀಯ ಹೆದ್ದಾರಿ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಲಘುವಾಗಿ ಪರಿಗಣಿಸದಿರಿ: ಅಶೋಕ್ ಕುಮಾರ್ ರೈ

ಹೆದ್ದಾರಿ ಕಾಮಗಾರಿಯಲ್ಲಿ ನಿರ್ಮಿತವಾದ ತಡೆಗೋಡೆಯಲ್ಲಿ ಗುರುತರ ಬಿರುಕು ಕಾಣಿಸಿಕೊಂಡ ಬಗ್ಗೆ ಕಳವಳ ವ್ಯಕ್ತಪಡಿಸಿದ ಶಾಸಕ ಅಶೋಕ್ ಕುಮಾರ್ ರೈಯವರು, ಕಾಮಗಾರಿ ನಡೆದ ಕೆಲ ತಿಂಗಳಲ್ಲೇ ಈ ರೀತಿಯ ಬಿರುಕು ಕಾಣಿಸಿರುವುದು ಕಾಮಗಾರಿಯ ಗುಣಮಟ್ಟವನ್ನು ಶಂಕಿಸುವಂತೆ ಮಾಡಿದೆ. ಮುಖ್ಯವಾಗಿ ಶಾಲಾ ಮಕ್ಕಳ ಸಂಚಾರದ ರಸ್ತೆಯಲ್ಲಿರುವ ಈ ತಡೆಗೋಡೆಯ ಬಿರುಕಿನ ಬಗ್ಗೆ ಸೂಕ್ತ ಪರಿಶೀಲನೆ ನಡೆಸಬೇಕು. ಜನರ ಸುರಕ್ಷತೆಯ ವಿಚಾರದಲ್ಲಿ ಯಾವುದನ್ನೂ ಲಘುವಾಗಿ ಪರಿಗಣಿಸಬೇಡಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಅಮೂಲಾಗ್ರ ಪರಿಶೀಲನೆ: ಮಹೇಂದ್ರ ಕೆ. ಸಿಂಗ್

ಬಿರುಕು ಕಾಣಿಸಿಕೊಂಡ ತಡೆಗೋಡೆಯನ್ನು ವೀಕ್ಷಿಸಿದ ಗುತ್ತಿಗೆದಾರ ಸಂಸ್ಥೆಯಾದ ಕೆಎನ್‍ಆರ್‌ನ ಯೋಜನಾಧಿಕಾರಿ ಮಹೇಂದ್ರ ಕುಮಾರ್ ಸಿಂಗ್, ಮೇಲ್ನೋಟಕ್ಕೆ ಈ ಬಿರುಕು ಅಪಾಯಕಾರಿ ಸ್ಥಿತಿಯಲ್ಲಿಲ್ಲ. ಇದು ತಡೆಗೋಡೆ ನಿರ್ಮಾಣ ಹಂತದಲ್ಲಿ ಹಲಗೆ ಅಳವಡಿಸುವ ಕಾರ್ಯದಲ್ಲಿ ಉಂಟಾದ ವ್ಯತ್ಯಯದಿಂದಾಗಿ ಈ ಬಿರುಕು ಮೂಡಿರಬಹುದಾಗಿದೆ. ಆದಾಗ್ಯೂ ಇಡೀ ಕಾಮಗಾರಿಯನ್ನು ಅಮೂಲಾಗ್ರ ಪರಿಶೀಲನೆಗೆ ಒಳಪಡಿಸಲಾಗುವುದೆಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News