ಉಪ್ಪಿನಂಗಡಿ | ಫ್ಲೈ ಓವರ್ ಹೆದ್ದಾರಿ ಸಂಚಾರಕ್ಕೆ ಮುಕ್ತ
ಉಪ್ಪಿನಂಗಡಿ: ಅಲ್ಲಲ್ಲಿ ಉಂಟಾಗುತ್ತಿರುವ ವಾಹನ ದಟ್ಟನೆಯನ್ನು ನಿವಾರಿಸಲು ಫ್ಲೈ ಓವರ್ ರಾಷ್ಟ್ರೀಯ ಹೆದ್ದಾರಿ ಮೇಲಿನ ಸಂಚಾರಕ್ಕೆ ಪ್ರಾಯೋಗಿಕ ನೆಲೆಯಲ್ಲಿ ಗುರುವಾರದಂದು ಚಾಲನೆ ನೀಡಲಾಗಿದ್ದು, ಉಪ್ಪಿನಂಗಡಿ ಪೇಟೆಗೆ ಆಗಮಿಸದೆ ಸಂಚರಿಸುವ ವಾಹನಗಳು ನೇರವಾಗಿ ಸಂಚರಿಸಲು ಅವಕಾಶ ಪ್ರಾಪ್ತಿಯಾಗಿದೆ.
ಫ್ಲೈ ಓವರ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಇನ್ನು ಮುಂದಕ್ಕೆ ಹಿರೇಬಂಡಾಡಿ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಸುತ್ತು ಬಳಸಿ ಅಥವ ಉಪ್ಪಿನಂಗಡಿಯ ಅಂಡರ್ ಪಾಸ್ ಬಳಸಿ ಸಂಚಾರವನ್ನು ಮುಂದುವರೆಸಬೇಕಾಗಿದೆ. ಅಕಾಲಿಕ ಮಳೆಯಿಂದಾಗಿ ಸರ್ವೀಸ್ ರಸ್ತೆಯಲ್ಲಿ ಉಂಟಾಗಿರುವ ದೊಡ್ಡ ದೊಡ್ಡ ಹೊಂಡಗಳು ಸುಗಮ ವಾಹನ ಸಂಚಾರಕ್ಕೆ ತಡೆಯೊಡ್ಡುತ್ತಿದ್ದು, ಗುರುವಾರವೂ ಅನಗತ್ಯ ವಾಹನ ದಟ್ಟನೆಯುಂಟಾಗಿ ಕೆಲ ತಾಸು ವಾಹನಗಳು ಸರತಿ ಸಾಲಿನಲ್ಲಿ ನಿಲ್ಲುವಂತಾಗಿತ್ತು.
ಫ್ಲೈ ಓವರ್ ರಸ್ತೆಯನ್ನು ಬಳಕೆಗೆ ಮುಕ್ತಗೊಳಿಸಲಾಗಿದೆಯಾದರೂ ಉಪ್ಪಿನಂಗಡಿಯಲ್ಲಿ ಫ್ಲೈ ಓವರ್ ರಸ್ತೆಯ ಎರಡೂ ಪಾಶ್ರ್ವಗಳಲ್ಲಿ ಕಾಂಕ್ರೀಟ್ ತಡೆ ಗೋಡೆಯ ರಚನೆ ಬಾಕಿ ಇದ್ದು, ವಾಹನ ಸಂಚಾರದ ವೇಳೆ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಸಂಭವಿಸುವ ಭೀತಿ ಉಂಟಾಗಿದೆ. ಸದ್ಯ ಪ್ಲಾಸ್ಟಿಕ್ ಡ್ರಮ್‍ಗಳನ್ನಿರಿಸಿ ವಾಹನ ಚಾಲಕರು ಎಚ್ಚರ ವಹಿಸುವಂತೆ ಕ್ರಮ ಕೈಗೊಳ್ಳಲಾಗಿದೆ.