×
Ad

ಉಪ್ಪಿನಂಗಡಿ: ಫೋನ್ ಕರೆ ಸ್ವೀಕರಿಸಿದಾಗಲೇ ಖಾತೆಯಿಂದ ಹಣ ವರ್ಗಾವಣೆ!

Update: 2024-12-12 22:53 IST

ಉಪ್ಪಿನಂಗಡಿ: ಸೈಬರ್ ವಂಚನಾ ಜಾಲದ ಮೂಲಕ ಹಣ ದೋಚುವ ವಂಚಕರ ವಿರುದ್ಧ ಅದೆಷ್ಟು ಮುನ್ನೆಚ್ಚರಿಕೆ ವಹಿಸಿದರೂ, ಅವರು ಹೊಸ ಹೊಸ ವಂಚನಾ ಅವಿಷ್ಕಾರವನ್ನು ಮಾಡುತ್ತಲೇ ಇದ್ದಾರೆ. ಇಂತಹ ವಂಚಕರಿಂದಾಗಿ ಉಪ್ಪಿನಂಗಡಿಯ ವ್ಯಕ್ತಿಯೋರ್ವರು ಒಂದು ದೂರವಾಣಿ ಕರೆ ಸ್ವೀಕರಿಸಿದ ಕೂಡಲೇ ಅವರ ಖಾತೆಯಲ್ಲಿದ್ದ ಹಣ ವರ್ಗಾವಣೆಗೆ ಒಳಗಾಗಿರುವ ಪ್ರಕರಣ ನಡೆದಿದೆ.

ಇಲ್ಲಿನ ಮಾಧ್ಯಮ ಪ್ರತಿನಿಧಿಯೋರ್ವರಿಗೆ ಗುರುವಾರ ಬೆಳಗ್ಗೆ ಫೋನ್ ಕರೆಯೊಂದು ಬಂದಿದ್ದು, ಕರೆಯನ್ನು ಸ್ವೀಕರಿಸಿದಾಗ ಯಾವುದೇ ಮಾತುಕತೆ ಮಾಡದೆ ಫೋನ್ ಕರೆ ಕಡಿತಗೊಂಡಿತ್ತು. ಈ ವೇಳೆ ಇದು ಯಾರ ನಂಬರ್ ಎಂದು ಅವರು ಟ್ರೂ ಕಾಲರ್ ಮೂಲಕ ಕರೆಯ ಮೂಲವನ್ನು ಶೋಧಿಸಿದಾಗ ಅಲ್ಲಿ `ಲೈಕ್‍ಲೀ ಫ್ರಾಡ್' ಎಂಬುದು ಕಂಡು ಬಂದಿದೆ. ತಕ್ಷಣವೇ ವಂಚನೆಯ ಸಂಶಯಪಟ್ಟ ಅವರು ತನ್ನ ಫೋನ್‍ನ ಸಂದೇಶ ಪರಿಶೀಲಿಸಿದಾಗ ಆ ಫೋನ್ ನಂಬರ್ ಲಿಂಕ್ ಆಗಿದ್ದ ಐಪಿಪಿಬಿ ಖಾತೆಯಿಂದ 161 ರೂ. ಹಾಗೂ 14839 ರೂ. ಅಟೋ ಪೇ ಆಗಿದೆ ಎಂಬ ಸಂದೇಶ ಬಂದಿತ್ತು. ಕಳವಳಕ್ಕೀಡಾದ ಅವರು, ಐಪಿಪಿಬಿ ಖಾತೆಯ ಬಗ್ಗೆ ಇಲಾಖಾಧಿಕಾರಿಗಳಲ್ಲಿ ದೂರು ಸಲ್ಲಿಸಿದಾಗ ಸದ್ರಿ ಅಟೋ ಪೇ ಯಲ್ಲಿ 161 ರೂ. ವರ್ಗಾವಣೆಗೊಂಡಿದ್ದು, 14839 ರೂ. ಸಮರ್ಪಕ ಬ್ಯಾಲೆನ್ಸ್ ಇಲ್ಲದ ಕಾರಣಕ್ಕೆ ತಡೆಹಿಡಿಯಲ್ಪಟ್ಟಿದೆ ಎಂಬ ಮಾಹಿತಿ ದೊರಕಿತು. ಇದೇ ವೇಳೆ ಅದೇ ಸಂಖ್ಯೆಯಿಂದ ಮತ್ತೊಂದು ಕರೆ ಅವರಿಗೆ ಬಂದಿದ್ದು, ಆ ವೇಳೆ ಜಾಗೃತ ಗೊಂಡಿದ್ದ ಪರಿಣಾಮ ಅವರು ಕರೆ ಸ್ವೀಕರಿಸಲಿಲ್ಲ ಎಂದು ತಿಳಿದು ಬಂದಿದೆ.

ಫೋನ್ ಕರೆಯನ್ನು ಸ್ವೀಕರಿಸಿದ ಮಾತ್ರಕ್ಕೆ ಖಾತೆಯಲ್ಲಿದ್ದ ಹಣವು ಅಟೋ ಪೇ ಗೆ ಒಳಗಾಗಿರುವುದು ವಿಸ್ಮಯ ಮೂಡಿಸಿದ್ದು, ಇದು ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಫೋನ್ ನಂಬರ್‌ ಗಳನ್ನು ಬಳಸಿಕೊಂಡು ಖಾತೆಯಲ್ಲಿದ್ದ ಹಣವನ್ನು ವಂಚಿಸಲು ವಂಚಕರಿಗೆ ಸುಲಭ ಸಾಧ್ಯವಾಗುವ ಮೂಲಕ ನಾಗರಿಕ ಸಮಾಜವನ್ನು ಕಳವಳಕ್ಕೀಡು ಮಾಡಿದೆ.

ಫೋನ್ ಕರೆಯನ್ನು ಸ್ವೀಕರಿಸಿದ ಮಾತ್ರಕ್ಕೆ ಖಾತೆಯಲ್ಲಿರುವ ಹಣವು ಕ್ಷಣಾರ್ಧದಲ್ಲಿ ವರ್ಗಾವಣೆಗೊಳ್ಳುವುದು ವ್ಯವಸ್ಥೆಯಲ್ಲಿನ ಪ್ರಧಾನ ಲೋಪವಾಗಿದ್ದು, ಪರಿಶೀಲನಾ ಸಮಯಾವಕಾಶದಂತಹ ರಕ್ಷಣಾತ್ಮಕ ವ್ಯವಸ್ಥೆಗಳನ್ನು ಆರ್ಥಿಕ ವ್ಯವಹಾರದ ಸಂಸ್ಥೆಗಳು ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಪ್ರಕರಣದ ಬಗ್ಗೆ ಅವರು ಸೈಬರ್ ಕ್ರೈಂ ವಿಭಾಗದ ಪೊಲೀಸರಿಗೆ ದೂರು ಸಲ್ಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News