ಎಲ್ಲಿ ಹೋಯಿತು ʼಆ್ಯಂಟಿ ಕಮ್ಯುನಲ್ ಟಾಸ್ಕ್ ಪೋರ್ಸ್ʼ?: ದ.ಕ. ಜಿಲ್ಲೆಯ ಶಾಂತಿಪ್ರಿಯರ ಪ್ರಶ್ನೆ
ಗೃಹ ಸಚಿವ ಡಾ.ಜಿ. ಪರಮೇಶ್ವರ್
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಕೋಮವಾದಿ ಕ್ರಿಮಿನಲ್‌ಗಳನ್ನು ಸದೆ ಬಡಿಯಲು ʼಆ್ಯಂಟಿ ಕಮ್ಯುನಲ್ ಟಾಸ್ಕ್ ಪೋರ್ಸ್ʼ ರಚನೆ ಮಾಡುವುದಾಗಿ ಸರಕಾರ ಘೋಷಿಸಿ 25 ದಿನಗಳಾಗಿದ್ದರೂ ಕೂಡ ಈ ನಿಟ್ಟಿನಲ್ಲಿ ಯಾವುದೇ ಪ್ರಕ್ರಿಯೆ ನಡೆದಂತೆ ಕಂಡು ಬಂದಿಲ್ಲ.
ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಯ ಬೆನ್ನಲ್ಲೇ ಮೇ 3ರಂದು ಮಂಗಳೂರಿಗೆ ಆಗಮಿಸಿದ್ದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ʼಆ್ಯಂಟಿ ಕಮ್ಯುಮಲ್ ಟಾಸ್ಕ್ ಪೋರ್ಸ್ʼ ರಚಿಸುವುದಾಗಿ ಪ್ರಕಟಿಸಿದ್ದರು. 2023ರ ಜೂ.6ಂದು ಆ್ಯಂಟಿ ಕಮ್ಯುನಲ್ ವಿಂಗ್ ರಚನೆ ಮಾಡುವುದಾಗಿ ಸುದ್ದಿಗೋಷ್ಠಿಯಲ್ಲಿ ಪರಮೇಶ್ವರ್ ಘೋಷಿಸಿದ್ದರು. ಆದರೆ ಎರಡು ವರ್ಷಗಳಾದರೂ ಅದು ಸ್ಥಾಪನೆ ಆಗಿರಲಿಲ್ಲ.
ಸುದ್ದಿಗಾರರು ಆ್ಯಂಟಿ ಕಮ್ಯುನಲ್ ವಿಂಗ್‌ನ ಬಗ್ಗೆ ಕೇಳಿದಾಗ ಅದು ಮಂಗಳೂರು ಕಮಿಷನರೇಟ್ ವ್ಯಾಪ್ತಿಗೆ ಸೀಮಿತವಾಗಿ ಮಾಡಿದ್ದಾಗಿದೆ. ಆದರೆ ಆ್ಯಂಟಿ ಕಮ್ಯಮುನಲ್ ಟಾಸ್ಕ್‌ಪೋರ್ಸ್ ವ್ಯಾಪ್ತಿ ದ.ಕ. ಮತ್ತು ಉಡುಪಿ ಜಿಲ್ಲೆಗೆ ವಿಸ್ತರಿಸಲಾಗುವುದು. ಆ್ಯಂಟಿ ನಕ್ಸಲ್ ಟಾಸ್ಕ್‌ಪೋರ್ಸ್‌ನಂತೆ ಇದೊಂದು ಪ್ರತ್ಯೇಕ ವಿಂಗ್, ಐಜಿಪಿ ರ್ಯಾಂಕ್‌ನ ಅಧಿಕಾರಿಗಳು ಇದಕ್ಕೆ ಮುಖ್ಯಸ್ಥರಾಗಿರುತ್ತಾರೆ ಎಂದು ಸಚಿವ ಡಾ.ಪರಮೇಶ್ವರ ಸ್ಪಷ್ಟಪಡಿಸಿದ್ದರು.
ಅದರಂತೆ ಗೃಹ ಸಚಿವರ ಈಹೇಳಿಕೆಯನ್ನು ಜಿಲ್ಲೆಯ ಶಾಂತಿಪ್ರಿಯರು ಸ್ವಾಗತಿಸಿದ್ದರು. ಆದರೆ ದ್ವೇಷದ ಹೇಳಿಕೆ ನೀಡುವ ರಾಜಕಾರಣಿಗಳು ಇದರ ವಿರುದ್ಧ ಅಪಸ್ವರ ಎತ್ತಿದ್ದರು. ಸುಹಾಸ್ ಶೆಟ್ಟಿ ಹತ್ಯೆಯನ್ನು ಖಂಡಿಸಿ ಕೆಲವು ದಿನಗಳ ಕಾಲ ದಿನವೂ ಸುದ್ದಿಗೋಷ್ಠಿ ನಡೆಸಿದ್ದ ಜಿಲ್ಲೆಯ ಬಿಜೆಪಿ ಶಾಸಕರು ಮತ್ತು ಸಂಸದರು ಸುಹಾಸ್ ಶೆಟ್ಟಿಯನ್ನು ಹೀರೋ ಆಗಿ ಬಿಂಬಿಸಿದ್ದರು.
ಸುಹಾಸ್ ಶೆಟ್ಟಿ ಹತ್ಯಾ ಪ್ರಕರಣವನ್ನು ಎನ್‌ಐಎಗೆ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಕೆಲವು ದಿನಗಳ ಹಿಂದೆ ನಡೆದ ಬಜ್ಪೆ ಚಲೋ - ಜನಾಗ್ರಹ ಕಾರ್ಯಕ್ರಮಕ್ಕೆ ಆಯೋಜಕರು ಪೊಲೀಸರ ಅನುಮತಿ ಪಡೆಯದಿದ್ದರೂ, ಪೊಲೀಸರು ಇದನ್ನು ತಡೆಯುವ ಪ್ರಯತ್ನ ಮಾಡಲಿಲ್ಲ. ಉದ್ರೇಕಕಾರಿ ಭಾಷಣಗೈದು ಹತ್ಯೆಗೆ ಪ್ರತಿಕಾರ ತೀರಿಸಲು ಕರೆ ನೀಡಿದ ಎರಡು ದಿನಗಳ ಒಳಗಾಗಿ ಕೊಳತ್ತಮಜಲು ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್‌ರ ಹತ್ಯೆಯಾಗಿದೆ. ಇವರೊಂದಿಗೆ ಪಿಕ್‌ಆಪ್‌ನಲ್ಲಿ ದುಡಿಯುತ್ತಿದ್ದ ಕಲಂದರ್ ಶಾಫಿ ಯಾನೆ ಇಮ್ತಿಯಾಝ್ ದುಷ್ಕರ್ಮಿಗಳ ತಲವಾರು ದಾಳಿಯಿಂದ ಗಂಭೀರ ಗಾಯಗೊಂಡು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅನುಮತಿ ಪಡೆಯದ ಬಜ್ಪೆಯಲ್ಲಿ ಜನಾಗ್ರಹ ಸಮಾವೇಶ ಆಯೋಜಿಸಿದ ಆಯೋಜಕರ ಮತ್ತು ಭಾಷಣಕಾರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೈತೊಳೆದುಕೊಂಡದ್ದು ಬಿಟ್ಟರೆ ಏನನ್ನು ಮಾಡಿಲ್ಲ ಎಂದು ಜಿಲ್ಲೆಯ ಶಾಂತಿಪ್ರಿಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.