ಸುಳ್ಯ, ಅರಂತೋಡಿನಲ್ಲಿ ಕಾಡಾನೆ ದಾಳಿ - ಕೃಷಿ ನಾಶ
ಸುಳ್ಯ: ಸುಳ್ಯದ ಪಡ್ಪು ಮತ್ತು ಅರಂತೋಡಿನ ಉಳುವಾರು ಪ್ರದೇಶಗಳಿಗೆ ಕಾಡಾನೆ ಹಿಂಡು ದಾಳಿ ಮಾಡಿ ಅಪಾರ ಪ್ರಮಾಣದಲ್ಲಿ ಅಡಕೆ ಕೃಷಿ ನಾಶ ಪಡಿಸಿದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಸುಳ್ಯ ನಗರದ ಪಡ್ಪು ನಿವಾಸಿ ಸುಮಿತ್ರ ಇಂಜಿನಿಯರ್‍ರ ತೋಟಕ್ಕೆ ಕಳೆದ ರಾತ್ರಿ ಆನೆ ದಾಳಿ ನಡೆಸಿದೆ. ಸುಮಾರು 50 ಕ್ಕೂ ಹೆಚ್ಚು ಅಡಕೆ ಗಿಡ, ಬಾಳೆ, ತೆಂಗು, ಜೀಗುಜ್ಜೆ ಮರ ಸಮೇತ ಪುಡಿಮಾಡಿದೆ. ಸುಮಾರು 50 ಸಾವಿರದಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ ವಿಜಯ ಪಡ್ಪುರವರ ತೋಟಕ್ಕೂ ದಾಳಿ ನಡೆಸಿ ಹಾನಿ ಮಾಡಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅರಂತೋಡು ಗ್ರಾಮದ ಉಳುವಾರಿನಲ್ಲಿ ಒಂಟಿಸಲಗ ದಾಳಿ ಮಾಡಿ ಅಪಾರ ಪ್ರಮಾಣದಲ್ಲಿ ಕೃಷಿ ನಾಶ ಪಡಿಸಿದೆ. ಅರಂತೋಡು ಗ್ರಾಮದ ಉಳುವಾರು ಮೇದಪ್ಪ ಸರ್ವೆಯರ್, ಸುಂದರ ಯು.ಕೆ. ಪ್ರಮೋದ್ ಯು.ಎ., ಈಶ್ವರ್ ಯು.ಸಿ., ಸೀತಾರಾಮ, ಪ್ರವೀಣ, ಕುಸುಮಾಧರ, ಹರೀಶ, ತಂಗಮ್ಮ ಯು., ಚಂದ್ರಾವತಿ ಯು.ರವರ ತೋಟಗಳಿಗೆ ಒಂಟಿ ಸಲಗ ದಾಳಿ ನಡೆಸಿ ಅಪಾರ ಕೃಷಿ ನಾಶಪಡಿಸಿದೆ. ಬಾಳೆ, ತೆಂಗು, ಕೊಕ್ಕೋ, ಅಡಕೆ ಗಿಡಗಳನ್ನು ನಾಶಪಡಿಸಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯವರು ಬಂದು ಪರಿಶೀಲನೆ ನಡೆಸಿದ್ದಾರೆ.