ಕ್ರಿಶ್ಚಿಯನ್ ಮಹಿಳೆಯರ ವಿರುದ್ಧ ಹಿಂಸೆಗೆ ಪ್ರಚೋದಿಸಿದ ಅವ್ದೇಶ್ ಸೈನಿಯ ಬಂಧನಕ್ಕೆ WIM ಆಗ್ರಹ
ಮಂಗಳೂರು: ಕ್ರಿಶ್ಚಿಯನ್ನರ ಹತ್ಯಾಕಾಂಡ ಮತ್ತು ಅತ್ಯಾಚಾರಕ್ಕೆ ಬಹಿರಂಗವಾಗಿ ಕರೆ ನೀಡಿರುವ ಆರೆಸ್ಸೆಸ್ ನಾಯಕ ಮತ್ತು ಸಾಮಾಜಿಕ ಮಾಧ್ಯಮದ ಪ್ರಭಾವಿ ಅವ್ದೇಶ್ ಸೈನಿಯನ್ನು ತಕ್ಷಣವೇ ಬಂಧಿಸಬೇಕೆಂದು ವಿಮೆನ್ ಇಂಡಿಯಾ ಮೂವ್ಮೆಂಟ್ (WIM) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಫ್ಶಾನ್ ಅಜೀಜ್ ಆಗ್ರಹಿಸಿದ್ದಾರೆ.
ಅವ್ದೇಶ್ ಅವರ ದ್ವೇಷಪೂರಿತ ಮತ್ತು ಅಪಾಯಕಾರಿ ಹೇಳಿಕೆಗಳು ಖಂಡನಾರ್ಹ. ಇಂತಹ ದ್ವೇಷ ಭಾಷಣದ ಭೀಕರ ಪರಿಣಾಮವನ್ನು ಭಾರತ ಈಗಾಗಲೇ ಕಂಡಿದೆ. 2024 ರಲ್ಲಿ ಮಣಿಪುರದಲ್ಲಿ, ಕ್ರೂರ ಗುಂಪು ನಡೆಸಿದ ಹಿಂಸಾಚಾರದ ಸಮಯದಲ್ಲಿ ಮಹಿಳೆಯರು ಮತ್ತು ಹುಡುಗಿಯರನ್ನು ಅತ್ಯಾಚಾರ, ಚಿತ್ರಹಿಂಸೆ ಮತ್ತು ಬೆತ್ತಲೆಯಾಗಿ ಮೆರವಣಿಗೆ ಮಾಡಲಾಯಿತು. 2002 ರ ಗುಜರಾತ್ ಗಲಭೆಗಳ ಸಂದರ್ಭದಲ್ಲಿ ಅಲ್ಪಸಂಖ್ಯಾತರು ಮತ್ತು ಮಹಿಳೆಯರ ವಿರುದ್ಧ ಇದೇ ರೀತಿಯ ವ್ಯಾಪಕ ಹಿಂಸಾಚಾರ ಸಂಭವಿಸಿತು, ಆರ್‌ಎಸ್‌ಎಸ್ ಸಿದ್ಧಾಂತದಿಂದ ನಡೆಸಲ್ಪಡುವ ಬಿಜೆಪಿ ಸರ್ಕಾರವು ಮಾನವೀಯತೆಯ ವಿರುದ್ಧದ ಅಪರಾಧಗಳನ್ನು ತಡೆಯುವಲ್ಲಿ ವಿಫಲವಾಯಿತು. ಆ ಸಂದರ್ಭದಲ್ಲಿ ಹಿಂಸಾಚಾರವನ್ನು ತಡೆಯಲು ಮೋದಿ ಸರ್ಕಾರ ಏನನ್ನೂ ಮಾಡಿರಲಿಲ್ಲ. ಈಗ ಮತ್ತೊಮ್ಮೆ ಅದೇ ಆರ್‌ಎಸ್‌ಎಸ್ ಬೆಂಬಲಿತ ಬಿಜೆಪಿ ನಾಯಕತ್ವದಲ್ಲಿ ದ್ವೇಷವನ್ನು ಪ್ರೋತ್ಸಾಹಿಸಲಾಗುತ್ತಿದೆ, ಅಮಾಯಕರ ಜೀವಗಳನ್ನು ಅಪಾಯಕ್ಕೆ ಸಿಲುಕಿಸುತ್ತಿದೆ ಎಂದು ಹೇಳಿದ್ದಾರೆ.
ಹಿಂಸಾಚಾರಗಳಿಗೆ ನೀಡುವ ಕರೆಗಳು ಭಯೋತ್ಪಾದನೆ, ಅಸಂವಿಧಾನಿಕ ಆದ್ದರಿಂದ ಇಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಅಫ್ಶಾನ್ ಅಜೀಜ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.