×
Ad

ಜಾನುವಾರು ಹತ್ಯೆ ಕಾಯ್ದೆಯಡಿ ಮಹಿಳೆಯ ಮನೆ ಜಪ್ತಿ; ಪೊಲೀಸರ ವಿರುದ್ಧ ಸೂಕ್ತ ಕ್ರಮಕ್ಕೆ ಕಾಂಗ್ರೆಸ್ ನ ಅಲ್ಪ ಸಂಖ್ಯಾತ ಘಟಕದ ಮುಖಂಡರ ಆಗ್ರಹ

Update: 2025-11-11 22:41 IST

ಮಂಗಳೂರು, ನ.11: ದನ ಮಾರಾಟ ಮಾಡಿದ ಆರೋಪದಲ್ಲಿ ಕೊಕ್ಕಡದ ಪಟ್ರಮೆ ಎಂಬಲ್ಲಿ ಮುಸ್ಲಿಮ್ ಮಹಿಳೆಯೊಬ್ಬರ ಮನೆಯನ್ನು ಜಪ್ತಿ ಮಾಡಿ, ಮೂವರು ಮಕ್ಕಳನ್ನು ಹೊರಗೆ ಹಾಕಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಮುಖಂಡರು ಸರಕಾರವನ್ನು ಆಗ್ರಹಿಸಿದ್ದಾರೆ.

ನಗರದಲ್ಲಿ ಕಾಂಗ್ರೆಸ್ ಭವನದಲ್ಲಿ ನಡೆದ ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್ ಅವರು,  ಜಾನುವಾರು ಮಾರಾಟ ಮಾಡಿದ ಆರೋಪದಲ್ಲಿ ಮನೆ ಜಪ್ತಿ ಮಾಡುವ ಕರಾಳ ಕಾನೂನನ್ನು ಪೊಲೀಸರು ದ.ಕ. ಜಿಲ್ಲೆಯಲ್ಲಿ ಜಾರಿಗೊಳಿಸಿರುವುದು ರಾಜ್ಯದಲ್ಲೇ ಪ್ರಥಮ ಘಟನೆ. ಇದರೊಂದಿಗೆ ಪೊಲೀಸರು ಸರಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುತ್ತಿದ್ದಾರೆ. ಪೊಲೀಸರು ಜಿಲ್ಲೆಯಲ್ಲಿ ಆಘೋಷಿತ ಕಾನೂನನ್ನು ಜಾರಿಗೊಳಿಸಿದ್ದಾರೆ ಎಂದು ಆರೋಪಿಸಿದರು.

ರೊಹರಾ ಮುಸ್ಲಿಂ ಮಹಿಳೆಗೆ ದನ ಮಾರಾಟ ಮಾಡಿದ ನವೀನ್ ಎಂಬವರ ವಿರುದ್ಧ ಯಾಕೆ ಎಫ್‌ಐಆರ್ ಮಾಡಿಲ್ಲ ? ಎಂದು ಪ್ರಶ್ನಿಸಿದ ಅವರು, ಪೊಲೀಸರ ಇಂತಹ ವರ್ತನೆಯು ಖಂಡನೀಯ. ಪೊಲೀಸರ ಇಂತಹ ನೀತಿಯಿಂದಾಗಿ ಜನರು ಭಯ ಭೀತರಾಗಿದ್ದಾರೆ. ಹೈನುಗಾರಿಕೆಯ ಮೂಲಕ ಜೀವನ ನಡೆಸುವ ಜನರು ದನವನ್ನು ಮಾರಾಟ ಮಾಡಬಾರದು , ಸಾಗಾಟ ಮಾಡಬಾರದು ಎಂಬ ರೀತಿಯ ಆಘೋಷಿತ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿದ್ದಾರೆ ಎಂದರು.

ಮಸೀದಿಗಳು ಜಾನುವಾರು ವ್ಯಾಪಾರ ಕೇಂದ್ರವೇ ? :

ದ.ಕ. ಜಿಲ್ಲೆಯಲ್ಲಿ ಗೋಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ನಿಷೇಧ ಕಾಯ್ದೆಯ ಬಗ್ಗೆ ಪೊಲೀಸರು ಮಸೀದಿಗೆ ಅಕ್ರಮವಾಗಿ ಪ್ರವೇಶ ಮಾಡಿ ಮಾಹಿತಿ ನೀಡುತ್ತಿದ್ದಾರೆ. ಪೊಲೀಸರ ಇಂತಹ ಕ್ರಮ ಖಂಡನೀಯ. ಈ ಕಾಯ್ದೆಯ ಬಗ್ಗೆ ಮುಸ್ಲಿಮರಿಗೆ ಮಾತ್ರ ಯಾಕೆ ಮಾಹಿತಿ ನೀಡಬೇಕು ? ಮಸೀದಿಗಳು ಜಾನುವಾರು ವ್ಯಾಪಾರದ ಕೇಂದ್ರವೇ ? ಎಂದು ಪ್ರಶ್ನಿಸಿದ ಅವರು ಒಂದು ಸಮುದಾಯವನ್ನು ಪೊಲೀಸರು ಕ್ರಿಮಿನಲ್‌ಗಳಾಗಿ ಚಿತ್ರಿಕರಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಲವು ದಿನಗಳ ಹಿಂದೆ ಪುತ್ತೂರಿನಲ್ಲಿ ಜಾನುವಾರು ಸಾಗಾಟದ ವಾಹನದ ಚಾಲಕನನ್ನು ರಸ್ತೆ ಮಧ್ಯೆ ನಿಲ್ಲಿಸಿ ಆತನ ಕಾಲಿಗೆ ಗುಂಡು ಹೊಡೆದಿದ್ದಾರೆ ಎಂಬ ಆರೋಪ ಇದೆ. ಇದರ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ದ.ಕ. ಜಿಲ್ಲೆಯಲ್ಲಿ ಜಾನುವಾರು ಸಾಗಾಟದಲ್ಲಿ ಎಷ್ಟೋ ಮಂದಿ ಸಂಘ ಪರಿವಾರದ ಕಾರ್ಯಕರ್ತರು ಶಾಮೀಲಾಗಿದ್ದಾರೆ. ಆದರೆ ಅವರ ಮನೆಗಳನ್ನು ಯಾಕೆ ಪೊಲೀಸರು ಜಪ್ತಿ ಮಾಡಿಲ್ಲ ? ಎಂದು ಶಾಹುಲ್ ಹಮೀದ್ ಪ್ರಶ್ನಿಸಿದರು.

ವಕೀಲ ನೂರುದ್ದೀನ್ ಸಾಲ್ಮರ ಅವರು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ 2021ರ ವಿಚಾರದಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಸಿದ ಜಿಲ್ಲೆಯ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಾಂಗ್ರೆಸ್ ನಾಯಕರಾದ ಶಾಹುಲ್ ಹಮೀದ್ ನೇತೃತ್ವದಲ್ಲಿ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಪಶ್ಚಿಮ ವಲಯ ಐಜಿಪಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಮುಖ್ಯ ಮಂತ್ರಿ ಮತ್ತು ಉಪಮುಖ್ಯ ಅವರನ್ನು ಭೇಟಿಯಾಗಿ ಹಿಂದೆ ಬಿಜೆಪಿ ಸರಕಾರ ಜಾರಿಗೆ ತಂದಿರುವ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಯನ್ನು ಹಿಂಪಡೆಯುವಂತೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಮಾಜಿ ಮೇಯರ್ ಅಶ್ರಫ್, ಮಾಜಿ ಕಾರ್ಪೊರೇಟರ್‌ಗಳಾದ ಲತೀಫ್ ಕಂದಕ್ ಮತ್ತು ಅಶ್ರಫ್ ಬಜಾಲ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹೀಂ ನವಾಜ್,ಕಾಂಗ್ರೆಸ್ ಮುಖಂಡರಾದ ಎಚ್.ಮಹಮ್ಮದ್ ಆಲಿ ಪುತ್ತೂರು , ಚಾರ್ಮಾಡಿ ಹಸನಬ್ಬ , ಅಬ್ದುಲ್ ಜಲೀಲ್ ಕೃಷ್ಣಾಪುರ, ಸುಹೈಲ್ ಕಂದಕ್, ಶಬೀರ್ ಸಿದ್ದಕಟ್ಟೆ, , ವಹಾಬ್ ಕುದ್ರೋಳಿ, ಅಬ್ದುಲ್ ರಹಿಮಾನ್ ಪಡ್ಪು, ಮಕ್ಬೂಲ್ ಅಹ್ಮದ್, ಅಶ್ರಫ್ ಕಡಬ, ಕರೀಮ್ ಬೆಳ್ತಂಗಡಿ, ಆಲ್ವೀನ್ ಪ್ರಕಾಶ್ , ಸಿರಾಜ್ ಬಜ್ಪೆ, ಅಶ್ರಫ್ ಕಾನ , ಅಯ್ಯೂಬ್ ಡಿಕೆ ಬೆಳ್ತಂಗಡಿ , ಥಾಮಸ್ ಎಡೆಯಾಲ್ ,ರಫೀಕ್ ಕಣ್ಣೂರು, ಮುಹಮ್ಮದ್ ಬಪ್ಪಳಿಗೆ ಮತ್ತಿತರರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News