ಉಚ್ಚಿಲ: ಬೆಳಪು ವ್ಯವಸಾಯ ಸಹಕಾರಿ ಸಂಘದ ಅಮೃತ ಮಹೋತ್ಸವ ಸಂಭ್ರಮ
ಪಡುಬಿದ್ರಿ: ಮಹಿಳಾ ಸ್ವಾವಲಂಬನೆಗಾಗಿ ನವೋದಯ ಸಂಘಗಳು ಬೃಹತ್ ಶಕ್ತಿಯಾಗಿ ಬೆಳೆದಿದೆ. ಮಹಿಳಾ ಸಬಲೀಕರ ಣಕ್ಕಾಗಿ ವಿವಿಧ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷರು ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಡಾ.ಎಮ್.ಎನ್. ರಾಜೇಂದ್ರ ಕುಮಾರ್ ಹೇಳಿದರು.
ಶನಿವಾರ ಉಚ್ಚಿಲ ಬಡಾ ಗ್ರಾಮದಲ್ಲಿ ಬೆಳಪು ವ್ಯವಸಾಯ ಸಹಕಾರಿ ಸಂಘದ ಅಮೃತ ಮಹೋತ್ಸವ ಸಂಭ್ರಮದಲ್ಲಿ ನಬಾರ್ಡ್ ಯೋಜನೆಯಡಿ ರೂ.3.70 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಸಹಕಾರಿ ಮಹಲ್ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಅವಿಭಜಿತ ಜಿಲ್ಲೆಯಲ್ಲಿರುವ ಎಲ್ಲಾ ಸಹಕಾರಿ ಸಂಘಗಳು ನಬಾರ್ಡ್ ಯೋಜನೆ ಸದುಪಯೋಗಪಡಿಸಿಕೊಳ್ಳಬೇಕು. ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಟ್ಟು 170 ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘಗಳಿವೆ. ಇದರಲ್ಲಿ ಕೇವಲ 40 ಸಂಘಗಳು ನಬಾರ್ಡ್ ಯೋನೆಯ ಫಲಾನುಭವಿಗಳಾಗಿದ್ದಾರೆ. ನಬಾರ್ಡ್ ಯೋಜನೆಯ ಫಲಾನುಭವಿಗಳಾಗಲು ಇನ್ನೂ 3 ವರ್ಷ ವಿಸ್ತರಿಸಿವೆ ಎಂದರು.
ಅಭಿವೃದ್ಧಿಯಲ್ಲಿ ಜಿಲ್ಲೆಯ ಸಹಕಾರಿ ಸಂಘಗಳು ವಾಣಿಜ್ಯ ಬ್ಯಾಂಕ್‍ಗಳನ್ನೂ ಮೀರಿಸಿದ ಸಾಧನೆಗೈದಿದೆ. ಗ್ರಾಮೀಣ ಪ್ರದೇಶದ ಬೆಳಪು ಸಂಘದ ಸಾಧನೆ ಅನುಕರಣೀಯವಾದುದು. ಅವರ ಅಪ್ರತಿಮ ಸಾಧನೆಯನ್ನು ಗುರುತಿಸಿ ಸಂಘಕ್ಕೆ ಕೇಂಣದ್ರ ಸಹಕಾರಿ ಬ್ಯಾಂಕ್‍ನಿಂದ ರೂ.15 ಲಕ್ಷ ನೀಡಲಾಗುವುದು ಎಂದವರು ಘೋಷಿಸಿದರು.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಪು ಸಂಘದ ಸಹಕಾರಿ ಮಹಲ್ ಉದ್ಘಾಟಿಸಿ, ಸಹಕಾರಿ ಕ್ಷೇತ್ರದಲ್ಲಿ ಪಕ್ಷಾತೀತವಾಗಿ ಯಾವುದೇ ಕೆಲಸವನ್ನು ಸಮಾಜಮುಖಿಯಾಗಿ ಮಾಡುವ ಮೂಲಕ ಸಹಕಾರಿ ರಂಗದಲ್ಲಿ ಯಶಸ್ಸು ಕಾಣಲು ಸಾಧ್ಯ. ಈ ನಿಟ್ಟಿನ ರಾಜ್ಯದಲ್ಲಿ ಸಹಕಾರಿಯ ಮಹತ್ವ ಮತ್ತು ಸಹಕಾರಿ ಮೌಲ್ಯವನ್ನು ಎತ್ತಿಹಿಡಿದು ಸಹಕಾರಿ ಕ್ಷೇತ್ರದ ಭೀಷ್ಮರಾಗಿ ಡಾ. ಎಮ್.ಎನ್ ರಾಜೇಂದ್ರ ಕುಮಾರ್ ಅವರ ಸೇವೆಯು ಅತ್ಯಂತ ಮಹತ್ವದ್ದಾಗಿದೆ.
ನಬಾರ್ಡ್ ಮುಖ್ಯ ಮಹಾಪ್ರಬಂಧಕ ಟಿ.ರಮೇಶ್ ಸಂಘದ ಸಹಕಾರಿ ಸಭಾಂಗಣ ಉದ್ಘಾಟಿಸಿದರು. ಬಳಿಕ ಠೇವಣಾತಿ ಪತ್ರ, ಸಾಲ ಪತ್ರ, ಉಳಿತಾಯ ಖಾತೆ, ಪಾಸ್ ಪುಸ್ತಕ ವಿತರಿಸಿದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಬೆಳಪು ಸಂಘದ ವತಿಯಿಂದ ಬಡಾ ಗ್ರಾಪಂಗೆ ನೀಡಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಹಸ್ತಾಂತರಿಸಿದರು. ಸಮೃದ್ಧಿ ಸಭಾಂಗಣ, ರೈತ ಬಂಧು ಕೃಷಿ ಸಲಕರಣೆ ಕೇಂದ್ರ, ರೈತ ಗೋದಾಮು ಮತ್ತು ಪಡಿತರ ವಿತರಣಾ ವಿಭಾಗಗಳನ್ನು ನಬಾರ್ಡ್ ಪ್ರಬಂಧಕಿ ಸಂಗೀತಾ ಎಸ್. ಕರ್ತ ಉದ್ಘಾಟಿಸಿದರು.
ಬೆಳಪು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿ ಸಂಘಗಳ ಉಪನಿಬಂಧಕ ಎಚ್.ಎನ್.ರಮೇಶ್, ದಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ನಿರ್ದೇಶಕರಾದ ಅಶೋಕ್ ಕುಮಾರ್ ಶೆಟ್ಟಿ ಕುಕ್ಕೆಹಳ್ಳಿ, ರಾಜೇಶ್ ರಾವ್ ಪಾಂಗಾಳ, ಬಡಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್ ಮೆಂಡನ್, ಬೆಳಪು ವ್ಯವಸಾಯ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಮಾರಿ ಸುಲೋಚನಾ, ಆಡಳಿತ ಮಂಡಳಿಯ ನಿರ್ದೇಶಕ ರಾದ ಪಾಂಡು ಶೆಟ್ಟಿ, ಗೋಪಾಲ ಪೂಜಾರಿ, ಸೈಮನ್ ಡಿಸೋಜ, ಪಾಂಡು ಎಂ. ಶೇರಿಗಾರ್, ಅಲಿಯಬ್ಬ, ದ್ಯುಮಣಿ ಆರ್. ಭಟ್, ಬಾಲಕೃಷ್ಣ ಎಸ್. ಆಚಾರ್ಯ, ಶೋಭಾ ಬಿ. ಭಟ್, ಮೀನಾ ಪೂಜಾರ್ತಿ, ವಿಮಲಾ ಅಂಚನ್, ಅನಿತಾ ಆನಂದ, ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿ ಬಾಲಕೃಷ್ಣ ಭಟ್ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಮುನ್ನ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಿಂದ ಉಚ್ಚಿಲ ಸಹಕಾರಿ ಮಹಲ್‍ವರೆಗೆ ವಿವಿಧ ಬಿರುದಾವಳಿ ಗಳೊಂದಿಗೆ ಸಹಕಾರಿ ಮೆರವಣಿಗೆ ನಡೆಯಿತು.
ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಸತೀಶ್ ಶೆಟ್ಟಿ ಗುಡ್ಡೆಚ್ಚಿ ಕಾರ್ಯಕ್ರಮ ನಿರ್ವಹಿಸಿದರು. ಪತ್ರಕರ್ತ ರಾಕೇಶ್ ಕುಂಜೂರು ಸಂಘ ನಡೆದು ಬಂದ ದಾರಿಯ ಬಗ್ಗೆ ಪ್ರಸ್ತಾವಿಸಿದರು. ಸುಲೋಚನಾ ದೇವಾಡಿಗ ವಂದಿಸಿದರು.