ಮೀಫ್ ವತಿಯಿಂದ ಎಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ
ಮಂಗಳೂರು: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ಕೇಂದ್ರ ಸಮಿತಿ ಮಂಗಳೂರು ಇದರ ವತಿಯಿಂದ ಐಡಿಎಸ್ ಕಾಲೇಜು, ಶೆಫರ್ಡ್ ಶಾಹೀನ್ ಪಿಯು ಕಾಲೇಜು ಅತ್ತಾವರ ಇವುಗಳ ಸಹಯೋಗದಲ್ಲಿ ಆಯ್ದ ಎಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಎರಡು ದಿನಗಳ ಪಾಸಿಂಗ್ ಪ್ಯಾಕೇಜ್ ಕಾರ್ಯಾಗಾರವು ಐಡಿಎಸ್ ವಿದ್ಯಾ ಸಂಸ್ಥೆಯಲ್ಲಿ ಬುಧವಾರ ನಡೆಯಿತು.
ಸಹಾಯಕ ಕಾರ್ಮಿಕ ಆಯುಕ್ತೆ ನಾಝಿಯಾ ಸುಲ್ತಾನ ಕಾರ್ಯಾಗಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಎಸೆಸ್ಸೆಲ್ಸಿ ಫಲಿತಾಂಶವನ್ನು ಉತ್ತಮ ಪಡಿಸಲು ಶಿಕ್ಷಣ ಇಲಾಖೆಯೊಂದಿಗೆ ಮೀಫ್ ಜಿಲ್ಲಾದ್ಯಂತ ನಡೆಸುತ್ತಿ ರುವ ಕಾರ್ಯಾಗಾರದ ಬಗೆಗೆ ಶ್ಲಾಘಿಸಿದರಲ್ಲದೆ ಇದರ ಸಂಪೂರ್ಣ ಪ್ರಯೋಜನವನ್ನು ಪ್ರತೀ ವಿದ್ಯಾರ್ಥಿಯು ಪಡೆದು ತೇರ್ಗಡೆಗೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷ ವಹಿಸಿದ್ದ ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ಮಾತನಾಡಿ 2025-26ನೆೇ ಸಾಲಿನಲ್ಲಿ ಈವರೆಗೆ ದ.ಕ. ಮತ್ತು ಉಡುಪಿ ಜಿಲ್ಲೆಗಳ ವಿವಿಧ ಕೇಂದ್ರಗಳಲ್ಲಿ 17 ಕಾರ್ಯಾಗಾರಗಳನ್ನು ಮೀಫ್ ಸಂಘಟಿಸಿದೆ. ಮುಂದಿನ ತಿಂಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಇಂತಹ ಕಾರ್ಯಗಾರಗಳನ್ನು ನಡೆಸಲಾಗುವುದು ಎಂದರು.
ಶೆಫಡ್ ಶಾಹೀನ್ ಪಿಯು ಕಾಲೇಜಿನ ಟ್ರಸ್ಟಿ ಎಸ್.ಎಂ. ಫಾರೂಕ್ ಮಕ್ಕಳಿಗೆ ಪ್ರೇರಣಾ ತರಭೇತಿ ನೀಡಿದರು. ಶಿಕ್ಷಣ ಇಲಾಖೆಯಿಂದ ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಕರಾದ ಬಾಬು ಶೆಟ್ಟಿ, ಡಾ. ಅನ್ನಿ ಡಿಂಪಲ್ ಕ್ಯಾಸ್ಟಲಿನೊ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮೀಫ್ ಸಂಚಾಲಕ ಅಝೀಝ್ ಅಂಬರ್ವಾಲಿ, ಕಾರ್ಯದರ್ಶಿ ಇಕ್ಬಾಲ್, ಸದಸ್ಯರಾದ ಮುಹಮ್ಮದ್ ಶರೀಫ್ ಬಜ್ಪೆ, ಸಿವಿಲ್ ಸರ್ವೀಸ್ ಕೋಚ್ ಶಿಹಾಬುದ್ದೀನ್, ಐಡಿಎಸ್ ಕಾಲೇಜಿನ ಡೈರೆಕ್ಟರ್ ಡಾ. ನಫೀಸಾ ಶರೀನ್, ಶೆಫರ್ಡ್ ಕಾಲೇಜಿನ ಪ್ರಾಂಶುಪಾಲೆ ಲುಬ್ನ ಬಾನು, ಸಿಎಒ ಮುಹಮ್ಮದ್ ಸಮೀರ್ ದೀನ್ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಪರ್ವೇಝ್ ಅಲಿ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಐಡಿಎಸ್ ಕಾಲೇಜಿನ ಪ್ರಾಂಶುಪಾಲ ಶಾರ್ವರಿ ಶೆಟ್ಟಿ ಸ್ವಾಗತಿಸಿದರು. ಮೀಫ್ ಕಾರ್ಯದರ್ಶಿ ಅನ್ವರ್ ಹುಸೈನ್ ಗೂಡಿನಬಳಿ ವಂದಿಸಿದರು. ಮೀಫ್ ಪ್ರಧಾನ ಕಾರ್ಯದರ್ಶಿ ರಿಯಾಝ್ ಅಹ್ಮದ್ ಕೆ.ಬಿ. ಕಾರ್ಯಕ್ರಮ ನಿರೂಪಿಸಿದರು.