×
Ad

ಅಸ್ಸಾಂನಲ್ಲಿ ಬಸ್-ಟ್ರಕ್ ನಡುವೆ ಮುಖಾಮುಖಿ ಢಿಕ್ಕಿ: 12 ಮಂದಿ ಮೃತ್ಯು, ಹಲವರಿಗೆ ಗಾಯ

Update: 2024-01-03 11:51 IST

Photo credit: ANI

ಗೋಲ್ಘಟ್ (ಅಸ್ಸಾಂ): ಕಲ್ಲಿದ್ದಲು ಹೊತ್ತೊಯ್ಯುತ್ತಿದ್ದ ಟ್ರಕ್ ಹಾಗೂ ಬಸ್ ನಡುವೆ ಬುಧವಾರ ಬೆಳಗ್ಗೆ ಸಂಭವಿಸಿರುವ ಮುಖಾಮುಖಿ ಢಿಕ್ಕಿಯಲ್ಲಿ 12 ಮಂದಿ ಮೃತಪಟ್ಟು, ಸುಮಾರು 30 ಮಂದಿ ಗಾಯಗೊಂಡಿರುವ ಘಟನೆ ಅಸ್ಸಾಂನ ಗೋಲ್ಘಟ್ ಜಿಲ್ಲೆಯಲ್ಲಿ ನಡೆದಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

45 ಜನರನ್ನು ಕರೆದೊಯ್ಯುತ್ತಿದ್ದ ಬಸ್ ಇಂದು ಬೆಳಗ್ಗೆ ಡೇರ್ ಗಾಂವ್ ಬಳಿಯ ಬಲಿಜನ್ ಹತ್ತಿರ ಸರಕು ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಗೋಲ್ಘಟ್ ಪೊಲೀಸ್ ವರಿಷ್ಠಾಧಿಕಾರಿ ರಾಜೆನ್ ಸಿಂಗ್ ತಿಳಿಸಿದ್ದಾರೆ.

ಈ ಅಪಘಾತ ಸಂಭವಿಸಿದಾಗ ಬಸ್ ಘಟ್ಟದ ಅಸ್ಸಾಂಗೆ ತೆರಳುತ್ತಿತ್ತು.

“ಈವರೆಗೆ ಅಪಘಾತದಲ್ಲಿ 12 ಮಂದಿ ಮೃತಪಟ್ಟಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ” ಎಂದು ಅವರು ಹೇಳಿದ್ದಾರೆ.

ಅಪಘಾತದ ಸಂಬಂಧ ತನಿಖೆ ಪ್ರಗತಿಯಲ್ಲಿದ್ದು, ತನಿಖೆ ಪೂರ್ಣಗೊಂಡ ನಂತರ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದೂ ಸಿಂಗ್ ತಿಳಿಸಿದ್ದಾರೆ.

ಜೋರ್ಹತ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 30 ಮಂದಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ತಿಳಿಸಿದ್ದಾರೆ.

“ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ನಾವು ಅವರ ಮೇಲೆ ನಿಗಾ ವಹಿಸಿದ್ದೇವೆ” ಎಂದೂ ಅವರು ಹೇಳಿದ್ದಾರೆ.

ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರ ಪ್ರಕಾರ, ಬಸ್ ಗೋಲ್ಘಟ್ ನ ಕಮರ್ ಗಾಂವ್ ನಿಂದ ತಿನುಸುಕಿಯ ಜಿಲ್ಲೆಯ ತಿಲಿಂಗ ಮಂದಿರ್ ಗೆ ತೆರಳುತ್ತಿತ್ತು, ಬೆಳಗ್ಗೆ 4.30ರ ವೇಳೆಗೆ ಅಪಘಾತ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.

“ಹೆದ್ದಾರಿಯ ನಾಲ್ಕು ಪಥದ ರಸ್ತೆಯ ಒಂದು ಭಾಗ ಹಾಳಾಗಿದ್ದುರಿಂದ ಟ್ರಕ್ ಜೋರ್ಹತ್ ನಿಂದ ತಪ್ಪು ದಿಕ್ಕಿನಲ್ಲಿ ಸಾಗಿ ಬರುತ್ತಿತ್ತು. ಬಸ್ ತನ್ನ ಪಥದಲ್ಲಿ ಸರಿಯಾಗಿ ಸಂಚರಿಸುತ್ತಿತ್ತು. ಈ ಸಂದರ್ಭದಲ್ಲಿ ಮಂಜು ಕವಿದಿತ್ತು ಹಾಗೂ ಎರಡೂ ವಾಹನಗಳು ವೇಗವಾಗಿ ಚಲಿಸುತ್ತಿದ್ದವು” ಎಂದೂ ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News