×
Ad

1,085 ಕೋಟಿ.ರೂ ಬ್ಯಾಂಕ್ ವಂಚನೆ ಪ್ರಕರಣ : ಅನಿಲ್ ಅಂಬಾನಿ, ರಿಲಾಯನ್ಸ್ ಕಮ್ಯೂನಿಕೇಷನ್ಸ್ ವಿರುದ್ಧ ಸಿಬಿಐಯಿಂದ ಪ್ರಕರಣ ದಾಖಲು

Update: 2026-03-08 21:10 IST

ಅನಿಲ್ ಅಂಬಾನಿ | Photo Credit : PTI 

ಹೊಸದಿಲ್ಲಿ, ಮಾ.8: 1,085 ಕೋಟಿ. ರೂ.ಗೂ ಅಧಿಕ ಮೊತ್ತದ ಬ್ಯಾಂಕ್ ವಂಚನೆ ಆರೋಪಕ್ಕೆ ಸಂಬಂಧಿಸಿ ಕೈಗಾರಿಕೋದ್ಯಮಿ ಅನಿಲ್ ಅಂಬಾನಿ, ಅವರ ಕಂಪೆನಿ ರಿಲಯನ್ಸ್ ಕಮ್ಯೂನಿಕೇಷನ್ಸ್ ಲಿಮಿಟೆಡ್ ಹಾಗೂ ಅದರ ಮಾಜಿ ನಿರ್ದೇಶಕ ಮಂಜರಿ ಅಶೋಕ್ ಕಕ್ಕರ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.

ಸಿಬಿಐ ಮಾರ್ಚ್ 5ರಂದು ದಾಖಲಿಸಿದ ಎಫ್‌ಐಆರ್ ಪ್ರಕಾರ, ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ನೀಡಿದ ದೂರಿನಂತೆ ಈ ಪ್ರಕರಣ ದಾಖಲಿಸಲಾಗಿದೆ. ಮುಂಬೈಯಲ್ಲಿರುವ ಬ್ಯಾಂಕ್‌ನ ವಾಪಸಾಗದ ಸಾಲ ನಿರ್ವಹಣಾ ಶಾಖೆಯ ಚೀಫ್ ಮ್ಯಾನೇಜರ್ ಸಂತೋಷ್‌ಕೃಷ್ಣ ಅನ್ನವರ್ಪು ಅವರು ಈ ದೂರು ನೀಡಿದ್ದರು.

ಎಫ್‌ಐಆರ್ ಪ್ರಕಾರ, ಆರೋಪಿಗಳು 2013 ಹಾಗೂ 2017ರ ನಡುವೆ ಪಿಎನ್‌ಬಿ ಹಾಗೂ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ (ಈಗ ಪಿಎನ್‌ಬಿಯೊಂದಿಗೆ ವಿಲೀನಗೊಂಡಿದೆ)ಗಳಿಗೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಈ ಬ್ಯಾಂಕ್‌ಗಳಿಗೆ 1,085.19 ಕೋಟಿ.ರೂ. ನಷ್ಟ ಉಂಟಾಗಿದೆ. ಈ ನಷ್ಟದಲ್ಲಿ ಪಿಎನ್‌ಬಿಯ 621.39 ಕೋ.ರೂ. ಹಾಗೂ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದ 463.80 ಕೋ.ರೂ. ನಷ್ಟ ಸೇರಿದೆ.

ಆರೋಪಿಗಳು ಕ್ರಿಮಿನಲ್ ಪಿತೂರಿ ನಡೆಸಿದ್ದಾರೆ ಹಾಗೂ ರಿಲಯನ್ಸ್ ಕಮ್ಯೂನಿಕೇಷನ್ಸ್‌ಗೆ ಸಾಲ ಸೌಲಭ್ಯಗಳನ್ನು ಮಂಜೂರು ಮಾಡುವಂತೆ ಬ್ಯಾಂಕ್‌ಗಳನ್ನು ಪ್ರೇರೇಪಿಸಿದ್ದಾರೆ ಎಂದು ಎಫ್‌ಐಆರ್ ಹೇಳಿದೆ.

ಸಾಲದ ಹಣವನ್ನು ಬೇರೆಡೆ ತಿರುಗಿಸಿ ದುರಪಯೋಗಪಡಿಸಿಕೊಳ್ಳಲಾಗಿದೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಇದು ನಂಬಿಕೆ ದ್ರೋಹ ಹಾಗೂ ದುರುಪಯೋಗಕ್ಕೆ ಕಾರಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ದೂರಿನ ಪ್ರಕಾರ, ಸಾಲಗಾರರು ಹಣಕಾಸಿನ ಶಿಸ್ತನ್ನು ಅನುಸರಿಸಿಲ್ಲ ಹಾಗೂ ಸಾಲದ ಷರತ್ತನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಸಾಲದ ಖಾತೆಗಳನ್ನು 2017ರಲ್ಲಿ ಅನುತ್ಪಾದಕ ಆಸ್ತಿಗಳೆಂದು ವರ್ಗೀಕರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News