ನಾಳೆಯಿಂದ ಸಂಸತ್ತಿನ ಬಜೆಟ್ ಅಧಿವೇಶನ ಪುನರಾರಂಭ
Photo Credit : PTI
ಹೊಸದಿಲ್ಲಿ,ಮಾ.8: ಸಂಸತ್ತಿನ ಬಜೆಟ್ ಅಧಿವೇಶನ ಸೋಮವಾರದಿಂದ ಪುನರಾರಂಭಗೊಳ್ಳಲಿದ್ದು,ಪ್ರತಿಪಕ್ಷಗಳು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಪದಚ್ಯುತಿಯನ್ನು ಕೋರಿ ಸಲ್ಲಿಸಿರುವ ನಿರ್ಣಯವನ್ನು ಮೊದಲನೇ ದಿನವೇ ಸದನವು ಕೈಗೆತ್ತಿಕೊಳ್ಳಲಿದೆ. ಇದೇ ವೇಳೆ ಇರಾನ್,ಎಪ್‌ಸ್ಟೀನ್ ಫೈಲ್‌ಗಳು ಮತ್ತು ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಕುರಿತು ಮೋದಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ತಮ್ಮ ಬತ್ತಳಿಕೆಯನ್ನು ಸಜ್ಜುಗೊಳಿಸಿವೆ.
ಎ.2ರಂದು ಅಂತ್ಯಗೊಳ್ಳಲಿರುವ ಬಜೆಟ್ ಅಧಿವೇಶನದ ಉತ್ತರಾರ್ಧವು ಭಾರೀ ಝಟಾಪಟಿಗೆ ಸಾಕ್ಷಿಯಾಗಲಿದೆ. ವಿಶೇಷವಾಗಿ ತಮಿಳುನಾಡು, ಕೇರಳ,ಪುದುಚೇರಿ,ಅಸ್ಸಾಂ ಮತ್ತು ಪಶ್ಚಿಮ ಬಂಗಾಳಗಳಲ್ಲಿ ವಿಧಾನಸಭಾ ಚುನಾವಣೆಗಳು ಸನ್ನಿಹಿತವಾಗಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ಮೇಲೆ ದಾಳಿ ನಡೆಸಲು ಮೋದಿ ಸರಕಾರವು ಸಂಸದೀಯ ವೇದಿಕೆಯನ್ನು ಬಳಸಿಕೊಳ್ಳಲಿದೆ.
ತನ್ನ ಆಕ್ರಮಣಕಾರಿ ನಿಲುವಿನ ಬಗ್ಗೆ ಈಗಾಗಲೇ ಸಂಕೇತ ನೀಡಿರುವ ಬಿಜೆಪಿ ಪ.ಬಂಗಾಳದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯ ಪ್ರಸಂಗವನ್ನು ಬಳಸಿಕೊಳ್ಳುವ ಅವಕಾಶವನ್ನು ತಾನು ಬಿಟ್ಟುಕೊಡುವುದಿಲ್ಲ ಎಂಬ ಇಂಗಿತವನ್ನು ವ್ಯಕ್ತಪಡಿಸಿದ್ದು,ಇದನ್ನು ಎದುರಿಸಲು ಟಿಎಂಸಿ ಸಜ್ಜಾಗಿದೆ.
ಬಿಜೆಪಿಯು ಕಾಂಗ್ರೆಸ್,ವಿಶೇಷವಾಗಿ ಲೊಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ದಾಳಿಯನ್ನೂ ಮುಂದುವರಿಸಲಿದೆ.
ಮೋದಿ ಸರಕಾರವು ಪಶ್ಚಿಮ ಏಶ್ಯಾ ಬಿಕ್ಕಟ್ಟನ್ನು ನಿರ್ವಹಿಸುತ್ತಿರುವ ರೀತಿ,ಎಪ್‌ಸ್ಟೀನ್ ಫೈಲ್‌ಗಳು ಮತ್ತು ಭಾರತ-ಅಮೆರಿಕ ಒಪ್ಪಂದ ತನಗೆ ಸಾಕಷ್ಟು ಅಸ್ತ್ರಗಳನ್ನು ಒದಗಿಸಿವೆ ಎಂದು ಪ್ರತಿಪಕ್ಷವು ಭಾವಿಸಿದೆ. ತಮ್ಮ ಕಾರ್ಯತಂತ್ರವನ್ನು ಅಂತಿಮಗೊಳಿಸಲು ಪ್ರತಿಪಕ್ಷಗಳ ಸದನ ನಾಯಕರು ಸೋಮವಾರ ಬೆಳಿಗ್ಗೆ ಸಭೆ ಸೇರಲಿದ್ದಾರೆ. ಪ್ರತಿಪಕ್ಷಗಳು ಪ್ರಧಾನಿ ಮೋದಿ ವಿರುದ್ಧ ತಮ್ಮ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಲಿವೆ.
ಇರಾನ್ ವಿರುದ್ಧ ಇಸ್ರೇಲ್-ಅಮೆರಿಕ ಜಂಟಿ ದಾಳಿಗೆ ಮುನ್ನ ಇಸ್ರೇಲ್‌ಗೆ ಮೋದಿ ಭೇಟಿ,ಇರಾನಿನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮಿನೈ ಅವ ಹತ್ಯೆಯನ್ನು ಖಂಡಿಸುವುದರಲ್ಲಿ ವಿಳಂಬ ಮತ್ತು ಪಶ್ಚಿಮ ಏಶ್ಯಾ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಅಡಿಗೆ ಅನಿಲದ ಬೆಲೆ ಏರಿಕೆ ಮತ್ತಿತರ ವಿಷಯಗಳನ್ನು ಪ್ರತಿಪಕ್ಷಗಳು ಪ್ರಮುಖವಾಗಿ ಎತ್ತಲಿವೆ.
ಎರಡನೇ ಹಂತದ ಅಧಿವೇಶನದಲ್ಲಿ ಬಿರ್ಲಾ ಅವರ ಪದಚ್ಯುತಿಯನ್ನು ಕೋರಿ ಪ್ರತಿಕ್ಷಗಳ ಅಭೂತಪೂರ್ವ ನಿರ್ಣಯವು ಕೇಂದ್ರಬಿಂದುವಾಗಿರಲಿದೆ. ಬಿರ್ಲಾ ರಾಹುಲ್ ಗಾಂಧಿ ಮತ್ತು ಇತರ ಪ್ರತಿಪಕ್ಷ ನಾಯಕರು ಮಾತನಾಡಲು ಅವಕಾಶ ನೀಡುತ್ತಿಲ್ಲ,ಸಂಸದರನ್ನು ಅಮಾನತುಗೊಳಿಸುತ್ತಿದ್ದಾರೆ.ಮೋದಿಯವರ ಮೇಲೆ ಹಲ್ಲೆಗೆ ಮಹಿಳಾ ಸಂಸದರು ಸಂಚು ನಡೆಸಿದ್ದರು ಎಂದು ಆರೋಪಿಸಿದ್ದಾರೆ ಮತ್ತು ವಿವಾದಾತ್ಮಕ ವಿಷಯಗಳಲ್ಲಿ ಸರಕಾರವು ಹೇಳಿಕೊಟ್ಟಿರುವ ಗಿಳಿಪಾಠವನ್ನು ಒಪ್ಪಿಸುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಪ್ರತಿಪಕ್ಷದ ಬಳಿ ಸಾಕಷ್ಟು ಸಂಖ್ಯೆಯಲ್ಲಿ ಸಂಸದರಿಲ್ಲ. ಹೀಗಾಗಿ ಅವಿಶ್ವಾಸ ನಿರ್ಣಯದ ಹಣೆಬರಹ ಮೊದಲೇ ನಿರ್ಧಾರವಾಗಿದೆ. ಆದರೆ ಇದು ತನ್ನನ್ನು ಸಂಸತ್ತಿನಲ್ಲಿ ಕಡೆಗಣಿಸಲಾಗಿದೆ ಮತ್ತು ಎನ್‌ಡಿಎಯೇತರ ಪಕ್ಷಗಳು ಒಗ್ಗಟ್ಟಾಗಿವೆ ಎಂಬ ಸಂದೇಶವನ್ನು ರವಾನಿಸುತ್ತದೆ ಎಂದು ಪ್ರತಿಪಕ್ಷ ಭಾವಿಸಿದೆ. ಟಿಎಂಸಿ ಆರಂಭದಲ್ಲಿ ಹಿಂಜರಿದಿದ್ದರೂ ನಂತರ ಇತರ ಪ್ರತಿಪಕ್ಷಗಳೊಂದಿಗೆ ಕೈಜೋಡಿಸಿದೆ.
ಬಜೆಟ್ ಅಧಿವೇಶನದ ಪೂರ್ವಾರ್ಧ ಫೆ.13ರಂದು ಅಂತ್ಯಗೊಂಡಿದ್ದು, ಫೆ.11ರಂದು ಪ್ರತಿಪಕ್ಷಗಳು ತನ್ನ ವಿರುದ್ಧ ನಿರ್ಣಯವನ್ನು ಸಲ್ಲಿಸಿದ್ದರಿಂದ ಸಾಂವಿಧಾನಿಕ ನಿಬಂಧನೆಗಳ ಪ್ರಕಾರ ಬಿರ್ಲಾ ಅವರು ಸ್ಪೀಕರ್ ಪೀಠದಲ್ಲಿ ಕುಳಿತುಕೊಳ್ಳುವುದಿಲ್ಲ, ಆದರೆ ಅವರು ಚರ್ಚೆಗೆ ಉತ್ತರಿಸಬಹುದು.
ಎರಡನೇ ಹಂತದಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಬಜೆಟ್ ಅಂಗೀಕಾರಕ್ಕೆ ಮುನ್ನ ಆರರಿಂದ ಎಂಟು ಸಚಿವಾಲಯಗಳ ಅನುದಾನ ಬೇಡಿಕೆಗಳನ್ನು ಚರ್ಚಿಸಲಿವೆ. ಅಧಿವೇಶನದ ಉಳಿದ ಅವಧಿಯಲ್ಲಿ ಸರಕಾರವು ‘ಪ್ರಮುಖ’ ಮಸೂದೆಯೊಂದನ್ನು ಮಂಡಿಸುವ ಸಾಧ್ಯತೆಯಿದೆ. ಕಳೆದ ತಿಂಗಳು ಈ ಬಗ್ಗೆ ಸುಳಿವು ನೀಡಿದ್ದ ಸಂಸದೀಯ ವ್ಯವಹಾರಗಳ ಸಚಿವ ಕಿರಣ ರಿಜಿಜು ಹೆಚ್ಚಿನ ವಿವರಗಳನ್ನು ಒದಗಿಸಿರಲಿಲ್ಲ. ಸರಕಾರವು ವಿದ್ಯುತ್ ತಿದ್ದುಪಡಿ ಮಸೂದೆಯನ್ನೂ ಮಂಡಿಸುವ ಸಾಧ್ಯತೆಯಿದೆ.