25 RJD ಶಾಸಕರು ಬಿಜೆಪಿ ಸಂಪರ್ಕದಲ್ಲಿ: ಬಿಹಾರ ಸಚಿವ
ರಾಮ್ ಕೃಪಾಲ್ ಯಾದವ್ | Photo Credit ; ANI
ಪಾಟ್ನಾ: ಬಿಹಾರ ರಾಜಕೀಯದಲ್ಲಿ ಮತ್ತೊಂದು ಸುತ್ತಿನ ಹಾವುಏಣಿಯಾಟ ಶುರುವಾಗಿದ್ದು, ಆರ್ಜೆಡಿಯ ಎಲ್ಲ 25 ಮಂದಿ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದು ಒಂದು ಕಾಲದಲ್ಲಿ ಆರ್ಜೆಡಿ ವರಿಷ್ಠ ಲಾಲೂ ಪ್ರಸಾದ್ ಅವರ ನಿಕಟವರ್ತಿಯಾಗಿದ್ದ, ಸದ್ಯ ಬಿಹಾರ ರಾಜ್ಯ ಕೃಷಿ ಸಚಿವರಾಗಿರುವ ರಾಮ್ ಕೃಪಾಲ್ ಯಾದವ್ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾಮ್ ಕೃಪಾಲ್ ಯಾದವ್, “ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಪಕ್ಷ ಅಂತ್ಯಗೊಂಡಿದೆ” ಎಂದು ಹೇಳಿದ್ದಾರೆ.
ತೇಜಸ್ವಿ ಯಾದವ್ ಅವರ ವಿದೇಶ ಪ್ರವಾಸವನ್ನು ವ್ಯಂಗ್ಯವಾಡಿದ ಅವರು, “ಇತ್ತೀಚೆಗೆ ಮುಕ್ತಾಯಗೊಂಡ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಅನುಭವಿಸಿದ್ದರಿಂದ, ತೇಜಸ್ವಿ ಯಾದವ್ ಲಜ್ಜಗೀಡಾಗಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದಾರೆ.
“ಆರ್ಜೆಡಿ ಪಕ್ಷದ ಎಲ್ಲ 25 ಶಾಸಕರು ಬಿಜೆಪಿಯ ಸಂಪರ್ಕದಲ್ಲಿದ್ದಾರೆ. ಅವರು ಯಾವುದೇ ವೇಳೆಯಾದರೂ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ಇದೆ. ನಿಮ್ಮ ಪಕ್ಷದ ಕಡೆ ಗಮನ ಹರಿಸಿ. ಅಲ್ಲಿ ಏನೂ ಉಳಿದಿಲ್ಲ” ಎಂದು ತೇಜಸ್ವಿ ಯಾದವ್ ರನ್ನು ಅವರು ಕುಟುಕಿದ್ದಾರೆ.
ಆದರೆ, ಈ ಕುರಿತು ಆರ್ಜೆಡಿ ಪಕ್ಷ ಯಾವುದೇ ಅಧಿಕೃತ ಪ್ರಕಟನೆ ಬಿಡುಗಡೆ ಮಾಡಿಲ್ಲ.