×
Ad

ಕೇಂದ್ರೀಯ ವಿವಿಗಳಲ್ಲಿ ಎಸ್‌ಸಿಗಳ ಶೇ.80,ಎಸ್‌ಟಿಗಳ ಶೇ.83ರಷ್ಟು ಪ್ರಾಧ್ಯಾಪಕ ಹುದ್ದೆಗಳು ಖಾಲಿಯಿವೆ: ಕೇಂದ್ರ ಸರಕಾರ

Update: 2025-07-24 16:46 IST
Photo credit: PTI

ಹೊಸದಿಲ್ಲಿ: ಕೇಂದ್ರೀಯ ವಿವಿಗಳಲ್ಲಿ ಒಬಿಸಿ ವರ್ಗದ ಪ್ರಾಧ್ಯಾಪಕರಿಗೆ ಮಂಜೂರು ಮಾಡಲಾದ ಹುದ್ದೆಗಳಲ್ಲಿ ಸುಮಾರು ಶೇ.80ರಷ್ಟು ಮತ್ತು ಪರಿಶಿಷ್ಟ ಪಂಗಡ(ಎಸ್‌ಟಿ)ದ ಪ್ರಾಧ್ಯಾಪಕರ ಹುದ್ದೆಗಳಲ್ಲಿ ಸುಮಾರು ಶೇ.83ರಷ್ಟು ಖಾಲಿಯಿವೆ ಎಂದು ಕೇಂದ್ರವು ಸಂಸತ್ತಿನಲ್ಲಿ ತಿಳಿಸಿದೆ.

ಬುಧವಾರ ರಾಜ್ಯಸಭೆಯಲ್ಲಿ ಆರ್‌ಜೆಡಿ ಸಂಸದ ಮನೋಜ್ ಕುಮಾರ್ ಝಾ ಅವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಹಾಯಕ ಶಿಕ್ಷಣ ಸಚಿವ ಸುಕಾಂತ ಮಜುಮ್ದಾರ್ ಅವರು,ಜೂನ್ 30,2025ಕ್ಕೆ ಇದ್ದಂತೆ ಪ್ರಾಧ್ಯಾಪಕರು,ಸಹ ಪ್ರಾಧ್ಯಾಪಕರು ಮತ್ತು ಸಹಾಯಕ ಪ್ರಾಧ್ಯಾಪಕರಿಗೆ ವರ್ಗವಾರು ಮಂಜೂರಾದ ಮತ್ತು ಭರ್ತಿಯಾದ ಹುದ್ದೆಗಳ ಅಂಕಿಅಂಶಗಳನ್ನು ಮಂಡಿಸಿದರು.

ಅಂಕಿಅಂಶಗಳ ಪ್ರಕಾರ ಒಬಿಸಿ ವರ್ಗದಡಿ ಪ್ರಾಧ್ಯಾಪಕರಿಗೆ ಮಂಜೂರಾದ 423 ಹುದ್ದೆಗಳ ಪೈಕಿ ಕೇವಲ 84(ಶೇ.80ರಷ್ಟು ಖಾಲಿ),ಎಸ್‌ಟಿ ವರ್ಗಕ್ಕಾಗಿ ಮಂಜೂರಾದ 144 ಹುದ್ದೆಗಳ ಪೈಕಿ ಕೇವಲ 24(ಶೇ.83ರಷ್ಟು ಖಾಲಿ) ಮತ್ತು ಪರಿಶಿಷ್ಟ ಜಾತಿ(ಎಸ್‌ಸಿ) ವರ್ಗದಲ್ಲಿ 308 ಹುದ್ದೆಗಳ ಪೈಕಿ ಕೇವಲ 111(ಶೇ.64ರಷ್ಟು ಖಾಲಿ) ಹುದ್ದೆಗಳು ಭರ್ತಿಯಾಗಿವೆ.

ಸಾಮಾನ್ಯ ವರ್ಗದಲ್ಲಿ ಮಂಜೂರಾದ 1,538 ಹುದ್ದೆಗಳ ಪೈಕಿ 935 ಹುದ್ದೆಗಳಿಗೆ ನೇಮಕ ಮಾಡಲಾಗಿದ್ದು,‌ ಶೇ.39ರಷ್ಟು ಹುದ್ದೆಗಳು ಖಾಲಿಯಿವೆ.

ಸಹ ಪ್ರಾಧ್ಯಾಪಕರಿಗಾಗಿ ಎಸ್‌ಟಿ ವರ್ಗಕ್ಕೆ ಮಂಜೂರಾಗಿದ್ದ 307 ಹುದ್ದೆಗಳಲ್ಲಿ 108,ಒಬಿಸಿ ವರ್ಗದಡಿ 883ರಲ್ಲಿ 275 ಮತ್ತು ಎಸ್‌ಸಿ ವರ್ಗದಲ್ಲಿ 632ರಲ್ಲಿ 308 ಹುದ್ದೆಗಳನ್ನು ಭರ್ತಿ ಮಾಡಲಾಗಿದ್ದು,ಈ ವರ್ಗಗಳಲ್ಲಿ ಅನುಕ್ರಮವಾಗಿ ಶೇ.65,ಶೇ.69 ಮತ್ತು ಶೇ.51ರಷ್ಟು ಹುದ್ದೆಗಳು ಖಾಲಿಯಿವೆ. ಸಾಮಾನ್ಯ ವರ್ಗದಲ್ಲಿ ಮಂಜೂರಾದ 3,013 ಹುದ್ದೆಗಳ ಪೈಕಿ 2,533 ಹುದ್ದೆಗಳನ್ನು ಭರ್ತಿ ಮಾಡಿದ್ದು,ಶೇ.16ರಷ್ಟು ಖಾಲಿಯಿವೆ.

ಸಹಾಯಕ ಪ್ರಾಧ್ಯಾಪಕರಿಗಾಗಿ ಎಸ್‌ಟಿ ವರ್ಗಕ್ಕೆ ಮಂಜೂರಾಗಿದ್ದ 704 ಹುದ್ದೆಗಳಲ್ಲಿ 595,ಒಬಿಸಿ ವರ್ಗದಡಿ 2,382ರಲ್ಲಿ 1,838 ಮತ್ತು ಎಸ್‌ಸಿ ವರ್ಗದಲ್ಲಿ 1,370ರಲ್ಲಿ 1,180 ಹುದ್ದೆಗಳನ್ನು ಭರ್ತಿ ಮಾಡಲಾಗಿದ್ದು,ಈ ವರ್ಗಗಳಲ್ಲಿ ಅನುಕ್ರಮವಾಗಿ ಶೇ.15,ಶೇ.23 ಮತ್ತು ಶೇ.14 ರಷ್ಟುಹುದ್ದೆಗಳು ಖಾಲಿಯಿವೆ.

ಪ್ರತಿ ಮೀಸಲಾತಿ ವರ್ಗದಲ್ಲಿ ‘ಸೂಕ್ತರಲ್ಲ(ಎನ್‌ಎಫ್‌ಎಸ್) ಎಂದು ಘೋಷಿಸಲಾದ ಅಭ್ಯರ್ಥಿಗಳ ಸಂಖ್ಯೆಯ ಜೊತೆಗೆ ದತ್ತಾಂಶಗಳು ಈ ವರ್ಗಗಳಲ್ಲಿ ಹೆಚ್ಚಿನ ಎನ್‌ಎಫ್‌ಎಸ್ ತೋರಿಸುತ್ತದೆಯೇ ಎನ್ನುವುದನ್ನು ಹಾಗೂ ಮೀಸಲು ವರ್ಗಗಳ ನೇಮಕಾತಿಗಳಲ್ಲಿ ಹೆಚ್ಚಿನ ಎನ್‌ಎಫ್‌ಎಸ್ ಬಳಕೆಗೆ ಕಾರಣಗಳನ್ನು ತಿಳಿದುಕೊಳ್ಳಲೂ ಝಾ ಬಯಸಿದ್ದರು.

‘ಸೂಕ್ತರಲ್ಲ’ ಎಂದು ಘೋಷಿಸಲಾದ ಅಭ್ಯರ್ಥಿಗಳ ದತ್ತಾಂಶಗಳನ್ನು ಕೇಂದ್ರೀಯವಾಗಿ ನಿರ್ವಹಿಸಲಾಗಿಲ್ಲ ಎಂದು ಬೆಟ್ಟು ಮಾಡಿದ ಮಜುಮ್ದಾರ್, ಬಹಿರಂಗ ಜಾಹೀರಾತುಗಳ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ ಮತ್ತು ನೇಮಕಾತಿಗಾಗಿ ರಚಿಸಲಾದ ಆಯ್ಕೆ ಸಮಿತಿಗಳು ಹುದ್ದೆಗೆ ಅಭ್ಯರ್ಥಿಯ ಅರ್ಹತೆಯ ಬಗ್ಗೆ ಶಿಫಾರಸುಗಳನ್ನು ಮಾಡುತ್ತವೆ. ಈ ಶಿಫಾರಸುಗಳ ಆಧಾರದಲ್ಲಿ ನೇಮಕಾತಿಗಳನ್ನು ಮಾಡಲಾಗುತ್ತದೆ ಮತ್ತು ಸೂಕ್ತ ಅಭ್ಯಥಿಗಳು ಲಭ್ಯವಿಲ್ಲದ ಸಂದರ್ಭಗಳಲ್ಲಿ ಮಾತ್ರ ವರ್ಗವನ್ನು ಲೆಕ್ಕಿಸದೆ ನೇಮಕಾತಿಗಳನ್ನು ಮಾಡಲಾಗಿಲ್ಲ ಎಂದು ತನ್ನ ಉತ್ತರದಲ್ಲಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News