9 ದಿನ ಮೊದಲೇ ದೆಹಲಿ ಸೇರಿದಂತೆ ದೇಶಾದ್ಯಂತ ವ್ಯಾಪಿಸಿದ ಮುಂಗಾರು
PC: PTI
ಹೊಸದಿಲ್ಲಿ: ಈ ಬಾರಿ ಮುಂಗಾರು ಮಾರುತ ವಾಡಿಕೆಗಿಂತ ಒಂಬತ್ತು ದಿನ ಮೊದಲೇ ದೇಶವನ್ನು ವ್ಯಾಪಿಸಿದೆ. ಭಾನುವಾರ ದೆಹಲಿ-ಎನ್ಸಿಆರ್, ರಾಜಸ್ಥಾನ, ಪಶ್ಚಿಮ ಉತ್ತರ ಪ್ರದೇಶ, ಹರ್ಯಾಣಕ್ಕೂ ಲಗ್ಗೆ ಇಟ್ಟಿದೆ ಎಂದು ಭಾರತದ ಹವಾಮಾನ ಇಲಾಖೆ ಹೇಳಿದೆ.
ದೆಹಲಿ-ಎನ್ಸಿಆರ್ ಮತ್ತು ವಾಯವ್ಯ ಭಾರತದ ಇತರ ಪ್ರದೇಶಗಳನ್ನು ಒಂದೇ ದಿನ ಮುಂಗಾರು ತಲುಪಿರುವುದು ಕಳೆದ 25 ವರ್ಷಗಳಲ್ಲಿ ಇದು ನಾಲ್ಕನೇ ಬಾರಿ. ಈ ಮೊದಲು 2021ರ ಜುಲೈ 13ರಂದು ಒಂದೇ ದಿನ ಈ ಘಟನೆ ಸಂಭವಿಸಿತ್ತು. ಮುಂಗಾರು ಎಲ್ಲ ಕಡೆಗಳಿಗೆ ವ್ಯಾಪಿಸಿದ ಮೊದಲ ನಿದರ್ಶನವೆಂದರೆ 2013ರ ಜೂನ್ 16. ಆಗ ಕೇದಾರನಾಥ ಪ್ರದೇಶದಲ್ಲಿ ಮೇಘಸ್ಫೋಟಹಾಗೂ ದಿಢೀರ್ ಪ್ರವಾಹ ಸಂಭವಿಸಿ ಅಪಾರ ಸಾವು ನೋವು ಉಂಟಾಗಿತ್ತು.
ಮೇ 24ರಂದು ಕೇರಳಕ್ಕೆ ಮುಂಗಾರು ಮಾರುತ ಆಗಮನವಾಗಿದ್ದು, 37 ದಿನಗಳಲ್ಲಿ ಇಡೀ ದೇಶವನ್ನು ವ್ಯಾಪಿಸಿದೆ. ವಾಡಿಕೆಗಿಂತ ಒಂಬತ್ತು ದಿನ ಮೊದಲೇ ದೇಶಾದ್ಯಂತ ಪಸರಿಸಿದಂತಾಗಿದೆ. ಮುಂಗಾರು ಮಾರುತ ಸರಾಸರಿ 38 ದಿನಗಳಲ್ಲಿ ಅಂದರೆ ಜೂನ್ 1 ರಿಂದ ಜುಲೈ 8ರ ನಡುವೆ ದೇಶದ ಎಲ್ಲ ಭಾಗಗಳನ್ನು ತಲುಪುತ್ತದೆ. 2013ರಲ್ಲಿ ಕೇವಲ 16 ದಿನಗಳಲ್ಲಿ ಮುಂಗಾರು ಇಡೀ ದೇಶವನ್ನು ವ್ಯಾಪಿಸಿತ್ತು.
ಜೂನ್ 29ರ ವರೆಗೆ ದೇಶಾದ್ಯಂತ ಸರಾಸರಿ ವಾಡಿಕೆಗಿಂತ ಶೇಕಡ 8ರಷ್ಟು ಅಧಿಕ ಮಳೆ ಬಿದ್ದಿದೆ. ವಾಯವ್ಯ ಮತ್ತು ಕೇಂದ್ರ ಭಾಗದಲ್ಲಿ ಕ್ರಮವಾಗಿ ಶೇಕಡ 37 ಹಾಗೂ 24ರಷ್ಟು ಅಧಿಕ ಮಳೆಯಾಗಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಜೂನ್ ನಲ್ಲೇ ಬಿತ್ತನೆ ಕಾರ್ಯ ಚುರುಕುಗೊಳ್ಳಲು ನೆರವಾಗಿದೆ.
ಪೂರ್ವ & ಈಶಾನ್ಯ ಭಾರತ ಮತ್ತು ದಕ್ಷಿಣ ಪರ್ಯಾಯದ್ವೀಪ ಪ್ರದೇಶದಲ್ಲಿ ಕ್ರಮವಾಗಿ ವಾಡಿಕೆಗಿಂತ ಶೇಕಡ 16.7 ಹಾಗೂ 1.7ರಷ್ಟು ಕಡಿಮೆ ಮಳೆ ಬಿದ್ದಿದ್ದರೂ, ಇದು ದೇಶದ ಒಟ್ಟಾರೆ ಮುಂಗಾರು ಬೆಳೆಗಳಿಗೆ ಧಕ್ಕೆಯಾಗುವುದಿಲ್ಲ. ಕೃಷಿ ಇಲಾಖೆಯ ಇತ್ತೀಚಿನ ವರದಿಯ ಪ್ರಕಾರ, ಜೂನ್ 20ರವರೆಗೆ ದೇಶದಲ್ಲಿ 138 ಲಕ್ಷ ಹೆಕ್ಟೇರ್ ಜಾಗದಲ್ಲಿ ಬಿತ್ತನೆಯಾಗಿದ್ದು, ಕಳೆದ ವರ್ಷ ಇದೇ ವೇಳೆಗೆ 125 ಲಕ್ಷ ಹೆಕ್ಟೇರ್ ನಲ್ಲಿ ಬಿತ್ತನೆ ಆಗಿತ್ತು. ಅಂದರೆ ಈ ಬಾರಿ ಶೇಕಡ 10ರಷ್ಟು ಅಧಿಕ ಬಿತ್ತನೆಯಾಗಿದೆ.