×
Ad

Odisha: ಎನ್‌ ಕೌಂಟರ್ ನಲ್ಲಿ ನಕ್ಸಲ್ ನಾಯಕ ಗಣೇಶ್ ಉಯಿಕೆ ಸಹಿತ ನಾಲ್ವರ ಹತ್ಯೆ

Update: 2025-12-25 20:40 IST

Image: Republic

ಭುವನೇಶ್ವರ, ಡಿ. 25: ಪ್ರಮುಖ ನಕ್ಸಲ್ ನಿಗ್ರಹ ಕಾರ್ಯಾಚರಣೆಯೊಂದರಲ್ಲಿ ಒಡಿಶಾ ಪೊಲೀಸ್ ಹಾಗೂ ಕೇಂದ್ರ ಅರೆ ಸೇನಾ ಪಡೆಗಳ ಜಂಟಿ ತಂಡ ಕಂಧಮಾಲ್ ಜಿಲ್ಲೆಯ ಚಾಕಾಪಾಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆಸಿದ ಎನ್‌ ಕೌಂಟರ್‌ ನಲ್ಲಿ ಸಿಪಿಐ (ಮಾವೋವಾದಿ) ಯ ಉನ್ನತ ನಾಯಕ ಗಣೇಶ್ ಉಯಿಕೆ ಸೇರಿದಂತೆ ನಾಲ್ವರು ಶಂಕಿತ ಮಾವೋವಾದಿಗಳು ಹತರಾಗಿದ್ದಾರೆ.

ಉಯಿಕೆ (69) ನಿಷೇಧಿತ ಸಿಪಿಐ (ಮಾವೋವಾದಿ) ಯ ಕೇಂದ್ರ ಸಮಿತಿಯ ಸದಸ್ಯರಾಗಿದ್ದರು. ಸಮಿತಿಯ ಒಡಿಶಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಪೂರ್ವ ಮತ್ತು ಕೇಂದ್ರ ಭಾರತದಾದ್ಯಂತ ನಡೆಸಿದ ಹಲವು ಮಾರಕ ದಾಳಿಗಳಲ್ಲಿ ಪಾಲ್ಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಹಿಡಿಯಲು ಅವರ ಬಗ್ಗೆ ಮಾಹಿತಿ ಕೊಟ್ಟವರಿಗೆ 1.1 ಕೋಟಿ ರೂ. ಬಹುಮಾನ ಘೋಷಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಾಕಾಪಾಡ ಪೊಲೀಸ್ ಠಾಣಾ ವ್ಯಾಪ್ತಿಯ ಕಂಧಮಾಲ್-ಗಂಜಾಂ ಗಡಿಯಲ್ಲಿರುವ ರಾಂಭಾ ಅರಣ್ಯ ವ್ಯಾಪ್ತಿಯಲ್ಲಿ ಈ ಎನ್‌ ಕೌಂಟರ್ ನಡೆದಿದೆ. ಕಾರ್ಯಾಚರಣೆಯಲ್ಲಿ ಒಡಿಶಾ ಪೊಲೀಸ್‌ನ ವಿಶೇಷ ಕಾರ್ಯಾಚರಣೆ ಗುಂಪಿನ (ಎಸ್‌ಒಜಿ) 20 ಘಟಕ, CRPFನ 2 ಬೆಟಾಲಿಯನ್ ಹಾಗೂ BSFನ ಒಂದು ತಂಡ ಪಾಲ್ಗೊಂಡಿದೆ.

ಕಾರ್ಯಾಚರಣೆ ಬೆಳಗ್ಗೆ ಪ್ರಾರಂಭವಾಯಿತು. ಈ ಪ್ರದೇಶದಲ್ಲಿ ಮಾವೋವಾದಿಗಳು ಹಾಗೂ ಭದ್ರತಾ ಪಡೆಗಳ ನಡುವೆ ಹಲವು ಬಾರಿ ಗುಂಡಿನ ಕಾಳಗ ನಡೆಯಿತು ಎಂದು ಒಡಿಶಾ ಎಡಿಜಿ (ನಕ್ಸಲ್ ವಿರೋಧಿ ಕಾರ್ಯಾಚರಣೆ) ಸಂಜೀಬ್ ಪಾಂಡಾ ತಿಳಿಸಿದ್ದಾರೆ.

ಕಾರ್ಯಾಚರಣೆಯ ನಂತರ ಭದ್ರತಾ ಪಡೆಗಳು ನಾಲ್ವರು ಶಂಕಿತ ಮಾವೋದಿಗಳನ್ನು ಹತ್ಯೆಗೈದಿರುವುದನ್ನು ದೃಢಪಡಿಸಿದೆ. ಇವರಲ್ಲಿ ಇಬ್ಬರು ಮಹಿಳೆಯರು. ಎಲ್ಲರೂ ಸಮವಸ್ತ್ರದಲ್ಲಿದ್ದರು. ಉಯಿಕೆಯನ್ನು ಮಾತ್ರ ಗುರುತಿಸಲಾಗಿದೆ.

ಮೂಲತಃ ತೆಲಂಗಾಣದ ನಲಗೊಂಡ ಜಿಲ್ಲೆಯ ಚೆಂಡೂರು ಮಂಡಲದ ಪುಲ್ಲೆಮಾಲ ಗ್ರಾಮದವರಾಗಿದ್ದ ಉಯಿಕೆ ಭಾರತದಲ್ಲಿ ಬೇಕಾಗಿದ್ದ ಮಾವೋವಾದಿಗಳಲ್ಲಿ ಒಬ್ಬರಾಗಿದ್ದರು. ಅವರು ಒಡಿಶಾದಲ್ಲಿ ಸಂಘಟನೆಯ ನೇತೃತ್ವ ವಹಿಸಿದ್ದರು.

ಎನ್‌ ಕೌಂಟರ್ ನಡೆದ ಸ್ಥಳದಲ್ಲಿ 2 ಇನ್ಸಾಸ್ ರೈಫಲ್ ಹಾಗೂ ಒಂದು 303 ರೈಫಲ್ ಪತ್ತೆಯಾಗಿದೆ.

‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ ಸಂದೇಶದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಈ ಎನ್‌ ಕೌಂಟರ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಶಾ ಅವರು ಇದನ್ನು ‘‘ನಕ್ಸಲ್ ಮುಕ್ತ ಭಾರತದೆಡೆಗೆ ಮಹತ್ವದ ಮೈಲಿಗಲ್ಲು’’ ಎಂದು ಬಣ್ಣಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News