Haryana: ಕಳ್ಳನೆಂಬ ಶಂಕೆಯಿಂದ ದಲಿತ ಬಾಲಕನ ಅಕ್ರಮ ಬಂಧನ, ಚಿತ್ರಹಿಂಸೆ
ಸಾಂದರ್ಭಿಕ ಚಿತ್ರ
ಚಂಡಿಗಡ,ಡಿ.25: ಕಳ್ಳತನದ ಆರೋಪವನ್ನು ಹೊರಿಸಿ 12ರ ಹರೆಯದ ದಲಿತ ಬಾಲಕನೋರ್ವನಿಗೆ ಚಿತ್ರಹಿಂಸೆ ನೀಡಿದ ಮತ್ತು ಹಲವಾರು ಗಂಟೆಗಳ ಕಾಲ ಅಕ್ರಮ ಬಂಧನದಲ್ಲಿರಿಸಿದ ಘಟನೆ ಹರ್ಯಾಣದ ಪಲ್ವಾಲ್ ನಲ್ಲಿ ನಡೆದಿದ್ದು, ಪೋಲಿಸರು ಒಂದೇ ಕುಟುಂಬದ 10 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈವರೆಗೆ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಮೂವರು ಪ್ರಮುಖ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.
ಡಿ.10ರಂದು ರಾತ್ರಿ ಈ ಘಟನೆ ನಡೆದಿತ್ತು.
ಬಾಲಕನ ಕೈಕಾಲುಗಳನ್ನು ಕಟ್ಟಿ ಹಾಕಿ ಪದೇಪದೇ ವಿದ್ಯುತ್ ಆಘಾತ ನೀಡಲಾಗಿತ್ತು ಎಂದು ಪೋಲಿಸರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ. ಆರೋಪಿಗಳು ತನ್ನ ಮೇಲೆ ಲೈಂಗಿಕ ದೌರ್ಜನ್ಯವನ್ನು ನಡೆಸಿದ್ದರು ಎಂದು ಬಾಲಕ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ. ಸುಟ್ಟ ಗಾಯಗಳಾಗಿರುವ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಟುಂಬ ನಿರ್ವಹಣೆಯಲ್ಲಿ ಹೆತ್ತವರಿಗೆ ನೆರವಾಗಲು ಬಾಲಕ ಮದುವೆ ಮೆರವಣಿಗೆಗಳಲ್ಲಿ ದೀಪಗಳನ್ನು ಹೊತ್ತು ಸಾಗುವ ಕೆಲಸ ಮಾಡುತ್ತಿದ್ದಾನೆ.
ಡಿ.10ರಂದು ರಾತ್ರಿ 11:30ರ ಸುಮಾರಿಗೆ ತಾನು ಇತರ ಇಬ್ಬರು ಮಕ್ಕಳೊಂದಿಗೆ ಪಲ್ವಾಲ್ ಸಮೀಪದ ಹೋಡಾಲ್ ಪಟ್ಟಣದಿಂದ ಬಂಚಾರಿ ಗ್ರಾಮಕ್ಕೆ ಮರಳುತ್ತಿದ್ದಾಗ ಪಾನಮತ್ತ ವ್ಯಕ್ತಿಗಳಿದ್ದ ಕಾರೊಂದು ತಮ್ಮನ್ನು ಬೆನ್ನಟ್ಟಿತ್ತು. ಅವರಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ತಾನು ಮನೆಯೊಂದರ ಆವರಣಕ್ಕೆ ಜಿಗಿದಿದ್ದೆ ಮತ್ತು ಇತರ ಮಕ್ಕಳು ಗ್ರಾಮದತ್ತ ಓಡಿ ಹೋಗಿದ್ದರು ಎಂದು ಬಾಲಕ ಪೋಲಿಸರಿಗೆ ತಿಳಿಸಿದ್ದಾನೆ.
ಮನೆಯವರು ಬಾಲಕನನ್ನು ಹಿಡಿದು, ಆತ ಕಳ್ಳನೆಂಬ ಶಂಕೆಯಲ್ಲಿ ಆತನ ಮೇಲೆ ಹಲ್ಲೆ ನಡೆಸಿದ್ದರು ಎಂದು ಪೋಲಿಸರು ತಿಳಿಸಿದ್ದಾರೆ. ಆರೋಪಿಗಳು ಹಲವಾರು ಗಂಟೆಗಳ ಬಳಿಕ ಪೋಲಿಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.
ತಲೆ ಮರೆಸಿಕೊಂಡಿರುವ ಮೂವರು ಪ್ರಮುಖ ಆರೋಪಿಗಳು ಸೋಮವಾರ ನಿರೀಕ್ಷಣಾ ಜಾಮಿನು ಕೋರಿ ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಬಾಲಕನಿಗೆ ಆಗಿರುವ ಗಾಯಗಳ ಕುರಿತು ವೈದ್ಯಕೀಯ ವರದಿಯನ್ನು ಬುಧವಾರ ಸಲ್ಲಿಸಿದ ಬಳಿಕ ನ್ಯಾಯಾಲಯವು ವಿಚಾರಣೆಯನ್ನು ಜ.8ಕ್ಕೆ ಮುಂದೂಡಿದೆ.