ದಿಲ್ಲಿ: ಸೂಟ್ ಕೇಸ್ ನಲ್ಲಿ 9 ವರ್ಷದ ಬಾಲಕಿಯ ಮೃತದೇಹ ಪತ್ತೆ
ಸಾಂದರ್ಭಿಕ ಚಿತ್ರ | PTI
ಹೊಸದಿಲ್ಲಿ: ಒಂಬತ್ತು ವರ್ಷದ ಬಾಲಕಿಯ ಮೃತದೇಹ ಸೂಟ್ ಕೇಸ್ ನಲ್ಲಿ ಪತ್ತೆಯಾದ ಘಟನೆ ಈಶಾನ್ಯ ದಿಲ್ಲಿಯ ನೆಹರೂ ವಿಹಾರ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೆಹರೂ ವಿಹಾರದಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳದ ಕುರಿತು ಕಾಲ್ ರೆಕಾರ್ಡಿಂಗ್ ಅನ್ನು ಜೂನ್ 7ರಂದು ರಾತ್ರಿ 8.41ಕ್ಕೆ ದಯಾಳ್ಪುರ ಪೊಲೀಸ್ ಠಾಣೆ ಸ್ವೀಕರಿಸಿತ್ತು.
‘‘ಪೊಲೀಸರ ತಂಡ ನೆಹರೂ ವಿಹಾರದ ಗಲ್ಲಿ ನಂ.2ರಲ್ಲಿರುವ ಸ್ಥಳಕ್ಕೆ ತಲುಪಿದ ಸಂದರ್ಭ ಬಾಲಕಿ ಸೂಟ್ಕೇಸ್ನಲ್ಲಿ ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿ ಪತ್ತೆಯಾದಳು. ಬಾಲಕಿಯನ್ನು ಆಕೆಯ ತಂದೆ ಜೆಪಿಸಿ ಆಸ್ಪತ್ರೆಗೆ ಕೊಂಡೊಯ್ದರು. ಆದರೆ, ವೈದ್ಯರು ಬಾಲಕಿ ಮೃತಪಟ್ಟಿದ್ದಾಳೆ ಎಂದು ಘೋಷಿಸಿದರು’’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ನೀಡಿದ ವೈದ್ಯರು ಆಕೆಯ ಮುಖದ ಮೇಲೆ ಗಾಯಗಳು ಇರುವ ಬಗ್ಗೆ ಗಮನ ಸೆಳೆದಿದ್ದಾರೆ. ಆಕೆಗೆ ಲೈಂಗಿಕ ಕಿರುಕಳ ನೀಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಹಾಗೂ ಪೊಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ನಡುವೆ ಬಾಲಕಿಯ ಸಾವಿನ ಸುದ್ದಿ ಹರಡುತ್ತಿದ್ದಂತೆ ಆಕೆಯ ಕುಟುಂಬದ ಸದಸ್ಯರು ಸೇರಿದಂತೆ ಆ ಪ್ರದೇಶದ ನಿವಾಸಿಗಳು ದೊಡ್ಡ ಸಂಖ್ಯೆಯಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ. ಘಟನೆಗೆ ಕಾರಣವಾದ ಆರೋಪಿಯನ್ನು ಕೂಡಲೇ ಬಂಧಿಸುವಂತೆ ಅವರು ಆಗ್ರಹಿಸಿದ್ದಾರೆ.