×
Ad

ಪಿಣರಾಯಿ ಪುತ್ರಿಯ ವಿರುದ್ಧ ಈಡಿಯಿಂದ ಪ್ರಕರಣ ದಾಖಲು

Update: 2024-03-27 20:51 IST

ವೀಣಾ ವಿಜಯನ್, ಪಿಣರಾಯಿ ವಿಜಯನ್ | Photo: X 

ತಿರುವನಂತಪುರ : ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ವಿಜಯನ್ ಅವರ ಐಟಿ ಕಂಪೆನಿ ಹಾಗೂ ಇತರ ಹಲವರ ವಿರುದ್ಧ ಜಾರಿ ನಿರ್ದೇಶನಾಲಯ (ಈಡಿ) ಬುಧವಾರ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದೆ.

ವೀಣಾ ವಿಜಯನ್ ಕಂಪೆನಿ ಎಕ್ಸಲೋಜಿಕ್ ಸೊಲ್ಯುಷನ್ಸ್ ಹಾಗೂ ಖಾಸಗಿ ಕಂಪೆನಿ ಕೊಚ್ಚಿನ್ ಮಿನರಲ್ಸ್ ಆ್ಯಂಡ್ ರೂಟೈಲ್ ಲಿಮಿಟೆಡ್ (ಸಿಎಂಆರ್ಎಲ್) ನಡುವಿನ ಅಕ್ರಮ ವಹಿವಾಟಿನ ಆರೋಪದ ಪರಿಶೀಲನೆಗಾಗಿ ಜಾರಿ ನಿರ್ದೇಶನಾಲಯ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿ ಪ್ರಕರಣ ದಾಖಲಿಸಿದೆ. ಮುಂದಿನ ತನಿಖೆಗಾಗಿ ಈ ಪ್ರಕರಣದಲ್ಲಿ ಭಾಗಿಯಾದವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡುವ ಸಾಧ್ಯತೆ ಇದೆ.

ಕೇಂದ್ರ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುವ ಗಂಭೀರ ವಂಚನೆ ತನಿಖಾ ಕಚೇರಿ (ಎಸ್ಎಫ್ಐಒ) ದಾಖಲಿಸಿದ ದೂರಿನ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಈ ತನಿಖೆ ಆರಂಭಿಸಿದೆ.

ಈ ಪ್ರಕರಣದ ಮೂಲ ಆದಾಯ ತೆರಿಗೆ ಇಲಾಖೆಯ ಹಿಂದಿನ ತನಿಖೆಯಲ್ಲಿದೆ. ಯಾವುದೇ ಸೇವೆಯನ್ನು ನೀಡದೇ ಇದ್ದರೂ ವೀಣಾ ವಿಜಯನ್ ಅವರ ಕಂಪೆನಿ ಎಕ್ಸಲೋಜಿಕ್ ಸೊಲ್ಯುಷನ್ಗೆ ಸಿಎಆರ್ಎಲ್ 2018ರಿಂದ 2019ರ ವರೆಗೆ ಒಟ್ಟು 1.72 ಕೋ.ರೂ. ಪಾವತಿ ಮಾಡಿತ್ತು ಎಂದು ಆದಾಯ ತೆರಿಗೆ ಇಲಾಖೆ ತನಿಖೆಯಲ್ಲಿ ಬಹಿರಂಗಪಡಿಸಿತ್ತು.

ಇತ್ತೀಚೆಗಿನ ಬೆಳವಣಿಗೆಯೊಂದರಲ್ಲಿ ಎಸ್ಎಫ್ಐಒ ತನಿಖೆ ನಡೆಸುವುದನ್ನು ಪ್ರಶ್ನಿಸಿ ಎಕ್ಸ್ಲೋಜಿಕ್ ಸೊಲ್ಯುಷನ್ಸ್ ದಾಖಲಿಸಿದ ಅರ್ಜಿಯನ್ನು ಕರ್ನಾಟಕ ಉಚ್ಛ ನ್ಯಾಯಾಲಯವು ತಿರಸ್ಕರಿಸಿತ್ತು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News