×
Ad

ಮೋದಿ ವಿರುದ್ಧದ ಹೇಳಿಕೆ: 11 ವರ್ಷ, 129 ವಿಚಾರಣೆ ಬಳಿಕ ಎಸ್ಪಿ ಶಾಸಕನಿಗೆ 100 ರೂಪಾಯಿ ದಂಡ!

Update: 2025-02-14 08:18 IST

ಶಾಮ್ಲಿ: ಬಿಜೆಪಿ ನಾಯಕ ನರೇಂದ್ರ ಮೋದಿ ಮತ್ತು ಬಿಎಸ್ಪಿ ಅಧಿನಾಯಕಿ ಮಾಯಾವತಿ ವಿರುದ್ಧ 2014ರ ಚುನಾವಣೆ ಸಂದರ್ಭದಲ್ಲಿ ಮಾನಹಾನಿಕರ ಹೇಳಿಕೆ ನೀಡಿದ ಆರೋಪ ಎದುರಿಸತ್ತಿದ್ದ ಸಮಾಜವಾದಿ ಶಾಸಕ ನಹೀದ್ ಹಸನ್ ಅವರಿಗೆ ಕೈರಾನಾ ನ್ಯಾಯಾಲಯ, 11 ವರ್ಷಗಳಲ್ಲಿ 129 ವಿಚಾರಣೆಗಳನ್ನು ನಡೆಸಿದ ಬಳಿಕ 100 ರೂಪಾಯಿ ದಂಡ ವಿಧಿಸಿದೆ. ದಂಡ ಪಾವತಿಸಲು ವಿಫಲರಾದಲ್ಲಿ ಒಂದು ತಿಂಗಳು ಸೆರೆಮನೆ ವಾಸ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಎನ್ಡಿಎಯ ಪ್ರಧಾನಿ ಅಭ್ಯರ್ಥಿ ಹಾಗೂ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡಿದ ಆರೋಪದಲ್ಲಿ ಹಸನ್ಗೆ ಶಿಕ್ಷೆ ವಿಧಿಸಲಾಗಿದೆ. 2014ರ ಮಾರ್ಚ್ 28ರಂದು ಶಾಮ್ಲಿಯ ಆಜಾದ್ ಚೌಕದಲ್ಲಿ ನಡೆದ ಸಮಾರಂಭದಲ್ಲಿ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ವಿರುದ್ಧವೂ ಹೇಳಿಕೆ ನೀಡಿದ ಆರೋಪವನ್ನು ಹಸನ್ ಎದುರಿಸುತ್ತಿದ್ದರು.

ಕೈರಾನಾದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿದ್ದ ಹಸನ್, ಇಬ್ಬರೂ ಅವಿವಾಹಿತರಾಗಿರುವ ಬಗ್ಗೆ ಮತ್ತು ಆನೆ ಬಿಎಸ್ಪಿಯ ಚಿಹ್ನೆಯಾಗಿರುವ ಬಗ್ಗೆ ಅಣಕವಾಡಿದ್ದರು. ಮರುದಿನ ಶಾಮ್ಲಿ ಕೋತ್ವಾಲಿ ಠಾಣೆಯಲ್ಲಿ ಅವರ ವಿರುದ್ಧ ಭಾರತೀಯ ದಂಡಸಂಹಿತೆ ಸೆಕಷನ್ 171(ಜಿ) (ಚುನಾವಣೆಯ ಸಂಬಂಧ ಸುಳ್ಳು ಹೇಳಿಕೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಪೊಲೀಸರು ಆ ಬಳಿಕ ಆರೋಪಪಟ್ಟಿ ಸಲ್ಲಿಸಿದ್ದು, ಸುಧೀರ್ಘ ಕಾನೂನು ಹೋರಾಟ ನಡೆದಿತ್ತು.

ಕೈರಾನದಿಂದ ಮೂರನೇ ಬಾರಿ ಶಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ಹಸನ್ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಹುಕುಂ ಸಿಂಗ್ ವಿರುದ್ಧ ಪರಾಭವಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News