×
Ad

ಅಹ್ಮದಾಬಾದ್ ವಿಮಾನ ಅಪಘಾತ | ‘ಮೇಡೇ’ ಪೈಲಟ್ ಕೊನೆಯ ಸಂದೇಶವಾಗಿತ್ತು: ವಾಯುಯಾನ ಸಚಿವಾಲಯ

Update: 2025-06-14 21:52 IST

PC : PTI 

ಹೊಸದಿಲ್ಲಿ: ಗುರುವಾರ ಅಹ್ಮದಾಬಾದ್‌ ನಿಂದ ಟೇಕ್‌ ಆಫ್ ಆದ 36 ಸೆಕಂಡ್‌ಗಳ ಬಳಿಕ ಪತನಗೊಂಡಿದ್ದ ಏರ್ ಇಂಡಿಯಾ ವಿಮಾನದ ಪೈಲಟ್‌ಗಳು ಅಪರಾಹ್ನ 1:39ಕ್ಕೆ ವಾಯು ಸಂಚಾರ ನಿಯಂತ್ರಣ(ಎಟಿಸಿ) ಕೊಠಡಿಗೆ ಕೊನೆಯ ರೇಡಿಯೊ ಸಂದೇಶವೊಂದನ್ನು ಕಳುಹಿಸಿದ್ದರು ಎಂದು ವಾಯುಯಾನ ಸಚಿವಾಲಯವು ಶನಿವಾರ ತಿಳಿಸಿದೆ. ವಿಮಾನವು 650 ಅಡಿಗಳಿಗಿಂತ ಮೇಲಕ್ಕೇರಲು ವಿಫಲಗೊಂಡ ಬಳಿಕ ಪೈಲಟ್‌ಗಳು ಅಪಾಯ ಕರೆಯನ್ನು ಮಾಡಿದ್ದರು. ಆದರೆ ಎಟಿಸಿ ಪ್ರತಿಕ್ರಿಯಿಸಿದ್ದರೂ ಯಾವುದೇ ಉತ್ತರ ಬಂದಿರಲಿಲ್ಲ ಮತ್ತು ಆ ವೇಳೆಗಾಗಲೇ ವಿಮಾನವು ಪತನಗೊಂಡಿತ್ತು ಎಂದು ಅದು ತಿಳಿಸಿದೆ.

ಭಾರೀ ಪ್ರಮಾಣದ ಇಂಧನವಿದ್ದ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು ವಿಮಾನ ನಿಲ್ದಾಣ ಸಮೀಪದ ವಸತಿ ಪ್ರದೇಶದಲ್ಲಿಯ ವೈದ್ಯಕೀಯ ವಿದ್ಯಾರ್ಥಿಗಳ ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿ ಬೆಂಕಿಯುಂಡೆಯಾಗಿ ಸ್ಫೋಟಿಸುವ ಮುನ್ನ ‘ಮೇಡೇ,ಮೇಡೇ...’ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಮತ್ತು ಅವರ ಸಿಬ್ಬಂದಿಯ ಅಂತಿಮ ಪದಗಳಾಗಿದ್ದವು. ಪತನದಿಂದಾಗಿ ಓರ್ವ ಪ್ರಯಾಣಿಕನನ್ನು ಹೊರತುಪಡಿಸಿ ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದರು.

ಸುಮಾರು 15 ವರ್ಷಗಳಲ್ಲಿ ಭಾರತದ ಅತ್ಯಂತ ಭೀಕರ ವೈಮಾನಿಕ ದುರಂತದಲ್ಲಿ ನೆಲದಲ್ಲಿದ್ದವರು ಸೇರಿದಂತೆ ಒಟ್ಟು 274 ಸಾವುಗಳು ದೃಢಪಟ್ಟಿವೆ. ಮೇ 2010ರಲ್ಲಿ ದುಬೈನಿಂದ ಬಂದಿದ್ದ ಏರ್ ಇಂಡಿಯಾದ ಬೋಯಿಂಗ್ ವಿಮಾನವು ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುವ ಪ್ರಯತ್ನದಲ್ಲಿ ರನ್‌ವೇಗಿಂತ ಮುಂದಕ್ಕೆ ಸಾಗಿ ಕಮರಿಯಲ್ಲಿ ಪತನಗೊಂಡಿದ್ದು, ಅದರಲ್ಲಿದ್ದ 158 ಜನರು ಸಾವನ್ನಪ್ಪಿದ್ದರು.

ವಿಮಾನವು ಪತನಗೊಂಡ ಸುಮಾರು 20 ನಿಮಿಷಗಳ ಬಳಿಕ ಅಧಿಕಾರಿಗಳಿಗೆ ಅಪರಾಹ್ನ ಎರಡು ಗಂಟೆಯ ಸುಮಾರಿಗೆ ಮಾಹಿತಿ ಲಭಿಸಿತ್ತು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ ವಾಯುಯಾನ ಸಚಿವಾಲಯದ ಕಾರ್ಯದರ್ಶಿ ಎಸ್.ಕೆ.ಸಿನ್ಹಾ ಅವರು, ’ಅಹ್ಮದಾಬಾದ್‌ ನಿಂದ ಗ್ಯಾಟ್‌ವಿಕ್ ಲಂಡನ್‌ಗೆ ತೆರಳುತ್ತಿದ್ದ ವಿಮಾನ ಪತನಗೊಂಡ ಮಾಹಿತಿ ನಮಗೆ ಲಭಿಸಿತ್ತು. ನಾವು ತಕ್ಷಣವೇ ಅಹ್ಮದಾಬಾದ್ ಎಟಿಸಿಯಿಂದ ವಿವರವಾದ ಮಾಹಿತಿಯನ್ನು ಪಡೆದುಕೊಂಡಿದ್ದೆವು. 230 ಪ್ರಯಾಣಿಕರು,10 ಸಿಬ್ಬಂದಿಗಳು ಮತ್ತು ಇಬ್ಬರು ಪೈಲಟ್‌ಗಳು ಸೇರಿದಂತೆ ಒಟ್ಟು 242 ಜನರು ವಿಮಾನದಲ್ಲಿದ್ದರು. ವಿಮಾನವು ಅಪರಾಹ್ನ 1:39ಕ್ಕೆ ಟೇಕ್‌ಆಫ್ ಆಗಿತ್ತು. ಕೆಲವೇ ಸೆಕಂಡ್‌ಗಳಲ್ಲಿ ಸುಮಾರು 650 ಅಡಿ ಎತ್ತರಕ್ಕೇರಿದ ಬಳಿಕ ಅದು ಕೆಳಗಿಳಿಯತೊಡಗಿತ್ತು. ಪೈಲಟ್ ಅಹ್ಮದಾಬಾದ್ ಎಟಿಸಿಗೆ ‘ಮೇಡೇ’,ಅಂದರೆ ಸಂಪೂರ್ಣ ತುರ್ತು ಸ್ಥಿತಿ ಎಂದು ಸಂದೇಶವನ್ನು ರವಾನಿಸಿದ್ದರು. ಎಟಿಸಿ ಸಂಪರ್ಕಿಸಲು ಪ್ರಯತ್ನಿಸಿದಾಗ ಯಾವುದೇ ಪ್ರತಿಕ್ರಿಯೆ ಲಭಿಸಿರಲಿಲ್ಲ. ಸರಿಯಾಗಿ ಒಂದು ನಿಮಿಷದ ಬಳಿಕ ವಿಮಾನವು ನಿಲ್ದಾಣದಿಂದ ಎರಡು ಕಿ.ಮೀ.ಅಂತರದಲ್ಲಿರುವ ಮೇಧನಿನಗರದಲ್ಲಿ ಪತನಗೊಂಡಿತ್ತು. ಸುಮೀತ್ ಸಭರ್ವಾಲ್ ಕ್ಯಾಪ್ಟನ್ ಆಗಿದ್ದು, ಕ್ಲೈ ವ್ ಕುಂದರ್ ಫಸ್ಟ್ ಆಫೀಸರ್ ಆಗಿದ್ದರು’ ಎಂದು ವಿವರಿಸಿದರು.

ಈ ನಡುವೆ ವಿಮಾನದ ಸುಸ್ಥಿತಿ ಮತ್ತು ಸಂಭಾವ್ಯ ಯಾಂತ್ರಿಕ,ಇಲೆಕ್ಟ್ರಾನಿಕ್ ಅಥವಾ ತಾಂತ್ರಿಕ ಸಮಸ್ಯೆಗಳ ಕುರಿತು ಊಹಾಪೋಹಗಳ ಹಿನ್ನೆಲೆಯಲ್ಲಿ ವಾಯುಯಾನ ಸಚಿವಾಲಯವು,ಅದೇ ವಿಮಾನವು ಪ್ಯಾರಿಸ್-ದಿಲ್ಲಿ-ಅಹ್ಮದಾಬಾದ್ ವಿಭಾಗದಲ್ಲಿ ಹಾರಾಟವನ್ನು ‘ಯಾವುದೇ ಅಪಘಾತವಿಲ್ಲದೆ’ ಪೂರ್ಣಗೊಳಿಸಿತ್ತು ಎಂದು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News