×
Ad

ವಾಯುಮಾಲಿನ್ಯ ಸಮಸ್ಯೆ| ನೀವು ಅನ್ಯಗ್ರಹದಲ್ಲಿ ವಾಸಿಸುತ್ತಿಲ್ಲ: ಅಧಿಕಾರಿಗಳಿಗೆ ಬಾಂಬೆ ಹೈಕೋರ್ಟ್ ತರಾಟೆ, ವೇತನ ಸ್ಥಗಿತ ಎಚ್ಚರಿಕೆ

Update: 2026-01-23 21:10 IST

ಬಾಂಬೆ ಹೈಕೋರ್ಟ್ | Photo Credit : PTI 

ಮುಂಬೈ,ಜ.23: ವಾಯುಮಾಲಿನ್ಯವನ್ನು ತಗ್ಗಿಸುವಂತೆ ತನ್ನ ಆದೇಶಗಳನ್ನು ನಿರ್ಲಕ್ಷಿಸಿದ್ದಕ್ಕಾಗಿ ಮುನ್ಸಿಪಲ್ ಅಧಿಕಾರಿಗಳನ್ನು ಶುಕ್ರವಾರ ತೀವ್ರ ತರಾಟೆಗೆತ್ತಿಕೊಂಡ ಬಾಂಬೆ ಉಚ್ಚ ನ್ಯಾಯಾಲಯವು,‌ ಅವರೂ ಇದೇ ಅಶುದ್ಧ ಗಾಳಿಯನ್ನು ಸೇವಿಸುತ್ತಿದ್ದಾರೆ ಮತ್ತು ಅನ್ಯಗ್ರಹದಲ್ಲಿ ವಾಸಿಸುತ್ತಿಲ್ಲ ಎಂದು ಬೆಟ್ಟು ಮಾಡಿತು. ಇದಕ್ಕಾಗಿ ಹಿರಿಯ ಅಧಿಕಾರಿಗಳ ವೇತನಗಳನ್ನು ಸ್ಥಗಿತಗೊಳಿಸುವುದಾಗಿ ಎಚ್ಚರಿಕೆಯನ್ನೂ ನೀಡಿತು.

ನ್ಯಾಯಾಲಯವು ಪದೇ ಪದೇ ಹೊರಡಿಸಿದ್ದ ಆದೇಶಗಳನ್ನು ಪಾಲಿಸದ್ದಕ್ಕಾಗಿ ಮತ್ತು ಹದಗೆಡುತ್ತಿರುವ ವಾಯುಮಾಲಿನ್ಯವನ್ನು ತಗ್ಗಿಸಲು ಕ್ರಮಗಳನ್ನು ತೆಗೆದುಕೊಳ್ಳಲು ವಿಫಲಗೊಂಡಿದ್ದಕ್ಕಾಗಿ ಮುಂಬೈ ಮತ್ತು ನವಿ ಮುಂಬೈ ಮಹಾನಗರ ಪಾಲಿಕೆಗಳ ಆಯುಕ್ತರ ವೇತನಗಳನ್ನು ಸ್ಥಗಿತಗೊಳಿಸುವುದಾಗಿ ಮುಖ್ಯ ನ್ಯಾಯಾಧೀಶ ಶ್ರೀ ಚಂದ್ರಶೇಖರ್‌ ಮತ್ತು ನ್ಯಾ.ಸುಮನ್ ಶ್ಯಾಮ್ ಅವರ ಪೀಠವು ಎಚ್ಚರಿಕೆ ನೀಡಿತು.

‘ಮುಂಬೈನಲ್ಲಿರುವ ಪ್ರತಿಯೊಬ್ಬರಂತೆಯೇ ಮುನ್ಸಿಪಲ್ ಅಧಿಕಾರಿಗಳೂ ಅಶುದ್ಧ ವಾಯುವನ್ನು ಉಸಿರಾಡುತ್ತಿದ್ದಾರೆ. ನೀವು ಅನ್ಯಗ್ರಹದಲ್ಲಿ ವಾಸವಾಗಿಲ್ಲ. ನಾವೆಲ್ಲ ಇದೇ ಗಾಳಿಯನ್ನು ಉಸಿರಾಡುತ್ತಿದ್ದೇವೆ’ ಎಂದು ಪೀಠವು ಹೇಳಿತು.

ಮುಂದಿನ ವಿಚಾರಣೆಯು ಜ.27ರಂದು ನಡೆಯಲಿದೆ. 2023ರಲ್ಲಿ ನಗರದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡಿದ್ದ ಬಾಂಬೆ ಉಚ್ಚ ನ್ಯಾಯಾಲಯವು, ವಾಯುಮಾಲಿನ್ಯವನ್ನು ತಗ್ಗಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುನ್ಸಿಪಲ್ ಸಂಸ್ಥೆಗಳಿಗೆ ಮತ್ತು ಅಧಿಕಾರಿಗಳಿಗೆ ಹಲವಾರು ನಿರ್ದೇಶನಗಳನ್ನು ಹೊರಡಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News