×
Ad

ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣ| ಸಾಗರ್ ಗೋರ್ಖೆ, ರಮೇಶ್ ಘಾಯ್‌ಚೋರ್‌ಗೆ ಜಾಮೀನಿನ ಮೇಲೆ ಬಿಡುಗಡೆ

Update: 2026-01-23 21:36 IST

ರಮೇಶ್ ಘಾಯ್‌ಚೋರ್‌ | Photo Credit : Ramesh Gaichor/Facebook

ಮುಂಬೈ,ಜ.23: 2018ರ ಭೀಮಾಕೋರೆಗಾಂವ್ ಹಿಂಸಾಚಾರ ಪ್ರಕರಣದ ಆರೋಪಿಗಳಾದ ಸಾಗರ್ ಗೋರ್ಖೆ ಹಾಗೂ ರಮೇಶ್ ಘಾಯ್‌ಚೋರ್ ಅವರನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.

ಸಾಂಸ್ಕೃತಿಕ ಸಂಘಟನೆ ‘ಕಬೀರ್ ಕಲಾ ಮಂಚ್’ನ ಕಲಾವಿದರಾದ ಇವರು ದೀರ್ಘಾವಧಿಯ ಜೈಲುವಾಸ ಅನುಭವಿಸಿದ್ದಾರೆಂಬ ನೆಲೆಯಲ್ಲಿ ಅವರನ್ನು ನ್ಯಾಯಮೂರ್ತಿಗಳಾದ ಅಜಯ್ ಗಡ್ಕರಿ ಹಾಗೂ ಶ್ಯಾಮ್ ಚಂದಕ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಜಾಮೀನಿನ ಮೇಲೆ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ.

ಭೀಮಾ ಕೋರೆಗಾಂವ್ ಯುದ್ಧದ 200ನೇ ವರ್ಷಾಚರಣೆಯ ಅಂಗವಾಗಿ 2018ರ ಜನವರಿ 1ರಂದು ಪುಣೆ ಸಮೀಪ ಎಲ್ಗಾರ್ ಪರಿಷದ್ ಆಯೋಜಿಸಿದ ಸಮಾವೇಶದ ಮರುದಿನ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಹಿಂಸಾಚಾರದಲ್ಲಿ ಓರ್ವ ಮೃತಪಟ್ಟಿದ್ದು, ಇತರ ಹಲವು ಮಂದಿ ಗಾಯಗೊಂಡಿದ್ದರು. ಎಲ್ಗಾರ್ ಪರಿಷತ್ ಸಂಘಟನೆಯು, ಜಾತಿ ಹಿಂಸಾಚಾರದ ಕಿಡಿಹಚ್ಚಲು ಹಾಗೂ ಕೇಂದ್ರ ಸರಕಾರವನ್ನು ಅಸ್ಥಿರಗೊಳಿಸಲು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಮಾವೋವಾದಿಗಳು ನಡೆಸಿದ ಸಂಚಿನ ಭಾಗವಾಗಿತ್ತು ಎಂದು ಪ್ರಕರಣದ ತನಿಖೆ ನಡೆಸಿದ್ದ ರಾಷ್ಟ್ರೀಯ ತನಿಖಾ ಏಜೆನ್ಸಿ ಆರೋಪಿಸಿದೆ.

ಭೀಮಾಕೋರೆಗಾಂವ್ ಹಿಂಸಾಚಾರ ಪ್ರಕರಣದ ಆರೋಪಿಗಳಾದ ಗೋರ್ಖೆ ಹಾಗೂ ಘಾಯ್‌ಚೋರ್ ಅವರನ್ನು 2020ರ ಸೆಪ್ಟೆಂಬರ್‌ನಲ್ಲಿ ಬಂಧಿಸಲಾಗಿತ್ತು.

ತಮಗೆ ಜಾಮೀನು ಬಿಡುಗಡೆ ನಿರಾಕರಿಸಿದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಇವರಿಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ನಡೆಸಿತ್ತು.

ತಲಾ 1 ಲಕ್ಷ ರೂ. ವೈಯಕ್ತಿಕ ಮುಚ್ಚಳಿಕೆ ಹಾಗೂ ಅಷ್ಟೇ ಮೊತ್ತದ ಖಾತರಿ ಪಡೆದ ಬಳಿಕ ಗೋರ್ಕೆ ಹಾಗೂ ಘಾಯ್‌ಚೋರ್ ಅವರನ್ನು ಬಿಡುಗಡೆಗೊಳಿಸುವಂತೆ ಹೈಕೋರ್ಟ್ ಆದೇಶಿಸಿದೆ. ಅಲ್ಲದೆ ಪ್ರತಿ ತಿಂಗಳ ಮೊದಲ ಸೋಮವಾರ ಮುಂಬೈಯಲ್ಲಿರುವ ಎನ್‌ಐಎ ಕಚೇರಿಗೆ ಹಾಜರಾಗುವಂತೆಯೂ ಆರೋಪಿಗಳಿಗೆ ನಿರ್ದೇಶನ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News