×
Ad

ಅಹಮದಾಬಾದ್ ವಿಮಾನ ದುರಂತ ನಡೆದ ಕೆಲವೇ ದಿನಗಳ ಬಳಿಕ ಏರ್ ಇಂಡಿಯಾ ಸಹಭಾಗಿತ್ವ ಕಚೇರಿಯಲ್ಲಿ ಪಾರ್ಟಿ!; ನಾಲ್ವರ ವಜಾ

Update: 2025-06-28 17:26 IST

PC : Screengrab \ X

ಗುರುಗ್ರಾಮ: ಅಹಮದಾಬಾದ್ ನಲ್ಲಿ ಏರ್ ಇಂಡಿಯಾ ವಿಮಾನ ದುರಂತ ನಡೆದ ಕೆಲವೇ ದಿನಗಳ ಬೆನ್ನಿಗೆ, ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಗೆ ಮೈದಾನ ನಿರ್ವಹಣೆ ಸೇವೆ ಒದಗಿಸುವ ಪಾಲುದಾರ ಸಂಸ್ಥೆಯಾದ ಎಐಎಸ್ಎಟಿಎಸ್ ಕಂಪನಿಯ ಕಚೇರಿಯಲ್ಲಿ ಪಾರ್ಟಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಈ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಈ ಪಾರ್ಟಿಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದರ ಬೆನ್ನಿಗೇ ಎಐಎಸ್ಎಟಿಎಸ್ ಕಂಪನಿ ತನ್ನ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದೆ. ಈ ಪಾರ್ಟಿಯನ್ನು ಆಯೋಜಿಸಿದ್ದ ಆರೋಪದ ಮೇಲೆ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಇಬ್ಬರು ಉಪಾಧ್ಯಕ್ಷರು ಹಾಗೂ ಓರ್ವ ತರಬೇತಿ ಮುಖ್ಯಸ್ಥರಿಂದ ರಾಜೀನಾಮೆ ಪಡೆದಿದೆ. ಇದರೊಂದಿಗೆ, ತನ್ನ ಕೆಲವು ಸಿಬ್ಬಂದಿಗಳಿಗೆ ಎಚ್ಚರಿಕೆಯನ್ನೂ ನೀಡಿದೆ.

ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಗಳ ವಿಮಾನಗಳಿಗೆ ಮೈದಾನ ನಿರ್ವಹಣೆ ಸೇವೆಗಳನ್ನು ಒದಗಿಸುವ ಪಾಲುದಾರ ಸಂಸ್ಥೆಯಾದ ಸಿಂಗಪೂರ್ ಮೂಲದ ಎಐಎಸ್ಎಟಿಎಸ್ ಕಂಪನಿಯ ಗುರುಗ್ರಾಮ ಕಚೇರಿಯಲ್ಲಿ ಜೂನ್ 26ರಂದು ಪಾರ್ಟಿಯೊಂದನ್ನು ಆಯೋಜಸಿತ್ತು. ಈ ಪಾರ್ಟಿಯಲ್ಲಿ ಇಡೀ ಕಚೇರಿಯ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಕುಣಿದು ಕುಪ್ಪಳಿಸಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ, ವ್ಯಾಪಕ ಸಾರ್ವತ್ರಿಕ ಆಕ್ರೋಶ ವ್ಯಕ್ತವಾಗಿತ್ತು.

ಜೂನ್ 12ರಂದು ಅಹಮದಾಬಾದ್ ನಿಂದ ಲಂಡನ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಅಹಮದಾಬಾದ್ ಹೊರವಲಯದಲ್ಲಿರುವ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ನಿಲಯದ ಮೇಲೆ ಪತನಗೊಂಡಿತ್ತು. ಈ ದುರಂತದಲ್ಲಿ ವಿಮಾನದಲ್ಲಿದ್ದ ಎಲ್ಲ 242 ಮಂದಿ ಪ್ರಯಾಣಿಕರು ಸೇರಿದಂತೆ ಸುಮಾರು 270ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News