ಏರ್ ಇಂಡಿಯಾ ವಿಮಾನ ದುರಂತ | ಕೇಂದ್ರದ ತನಿಖಾ ಸಮಿತಿಯಿಂದ 3 ತಿಂಗಳಲ್ಲಿ ವರದಿ ಸಲ್ಲಿಕೆ: ಸಚಿವ ಮುರಳೀಧರ್ ಮೊಹೋಲ್
PC : PTI
ಪುಣೆ: ಅಹ್ಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದ ಕುರಿತು ತನಿಖೆ ನಡೆಸಲು ಕೇಂದ್ರ ಸರಕಾರ ರೂಪಿಸಿದ ಉನ್ನತ ಮಟ್ಟದ ಬಹು ಶಿಸ್ತೀಯ ಸಮಿತಿ ಮೂರು ತಿಂಗಳೊಳಗೆ ತನ್ನ ವರದಿ ಸಲ್ಲಿಸಲಿದೆ ಎಂದು ಕೇಂದ್ರ ಸಚಿವ ಮುರಳೀಧರ ಮೊಹಾಲ್ ಅವರು ಮಂಗಳವಾರ ತಿಳಿಸಿದ್ದಾರೆ.
ಏರ್ ಇಂಡಿಯಾ 34 ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನಗಳನ್ನು ನಿರ್ವಹಿಸುತ್ತಿದೆ. ಇವುಗಳಲ್ಲಿ 12 ವಿಮಾನಗಳ ಸುರಕ್ಷಾ ತಪಾಸಣೆ ಮಾಡಲಾಗಿದೆ. ಇದುವರೆಗೆ ಯಾವುದೇ ದೋಷ ಕಂಡು ಬಂದಿಲ್ಲ ಎಂದು ನಾಗರಿಕ ವಿಮಾನ ಯಾನ ಖಾತೆಯ ಸಹಾಯಕ ಸಚಿವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ವಿಮಾನದ ಬ್ಲ್ಯಾಕ್ ಬಾಕ್ಸ್‌ನ ದತ್ತಾಂಶದ ವಿಶ್ಲೇಷಣೆ ವಿಮಾನ ಪತನದ ಕಾರಣದ ಕುರಿತು ಸುಳಿವು ನೀಡುವ ಭರವಸೆಯನ್ನು ಕೂಡ ಅವರು ವ್ಯಕ್ತಪಡಿಸಿದ್ದಾರೆ.
ಏರ್ ಇಂಡಿಯಾ ವಿಮಾನ ದುರಂತದ ಕುರಿತು ತನಿಖೆ ನಡೆಸಲು ಕೇಂದ್ರ ಸರಕಾರ ಶನಿವಾರ ಬಹುಶಿಸ್ತೀಯ ಉನ್ನತ ಮಟ್ಟದ ಸಮಿತಿಯನ್ನು ಸ್ಥಾಪಿಸಿದೆ. ಅದು ವಿಮಾನ ಅಪಘಾತದ ಮೂಲ ಕಾರಣವನ್ನು ನಿರ್ಧರಿಸಲಿದೆ. ಯಾಂತ್ರಿಕ ದೋಷ, ಮಾನವ ದೋಷ ಹಾಗೂ ನಿಯಂತ್ರಣ ಸಂಸ್ಥೆಗಳ ಸೂಚನೆ ಪಾಲನೆಯಲ್ಲಿ ನಿರ್ಲಕ್ಷ್ಯದ ಕುರಿತು ತನಿಖೆ ನಡೆಸಲಿದೆ.