ಏರ್ ಇಂಡಿಯಾ ವಿಮಾನ ದುರಂತ | ಬ್ಲಾಕ್ ಬಾಕ್ಸ್‌ನ ದತ್ತಾಂಶ ಕಲೆ ಹಾಕಲಾಗಿದೆ: ವಿಮಾನ ಯಾನ ಸಚಿವಾಲಯ
PC : PTI
ಹೊಸದಿಲ್ಲಿ: ಅಹ್ಮದಾಬಾದ್‌ನಲ್ಲಿ ಅಪಘಾತಕ್ಕೀಡಾದ ಏರ್ ಇಂಡಿಯಾದ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನದ ಮುಂಭಾಗದ ಬ್ಲಾಕ್ ಬ್ಲ್ಯಾಕ್ ಬಾಕ್ಸ್ ನ ಮೆಮೊರಿ ಮಾಡ್ಯುಲ್ ಅನ್ನು ಯಶಸ್ವಿಯಾಗಿ ತೆರೆಯಲು ಸಾಧ್ಯವಾಗಿದೆ. ಅದರಲ್ಲಿದ್ದ ದತ್ತಾಂಶವನ್ನು ಇಲ್ಲಿನ ಅತ್ಯಾಧುನಿಕ ಸರಕಾರಿ ಪ್ರಯೋಗಾಲಯದಲ್ಲಿ ಡೌನ್‌ಲೋಡ್ ಮಾಡಲಾಗಿದೆ ಎಂದು ನಾಗರಿಕ ವಿಮಾನ ಯಾನ ಸಚಿವಾಲಯ ಗುರುವಾರ ತಿಳಿಸಿದೆ.
ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (ಸಿವಿಆರ್) ಹಾಗೂ ಫ್ಲೈಟ್ ಡಾಟಾ ರೆಕಾರ್ಡರ್ (ಎಫ್‌ಡಿಆರ್) ನ ವಿಶ್ಲೇಷಣೆ ನಡೆಯುತ್ತಿದೆ. ಈ ವಿಶ್ಲೇಷಣೆ ಅಪಘಾತಕ್ಕೆ ಕಾರಣವಾದ ಘಟನೆಗಳ ಅನುಕ್ರಮವನ್ನು ಪುನರ್ ನಿರ್ಮಿಸಲು, ವಾಯು ಯಾನ ಸುರಕ್ಷೆಯನ್ನು ಹೆಚ್ಚಿಸಲು ಹಾಗೂ ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲು ಅನುಕೂಲಕರವಾಗಿದೆ.
ಎರಡು ಬ್ಲಾಕ್ ಬಾಕ್ಸ್‌ಗಳಾದ ಸಿವಿಆರ್ ಹಾಗೂ ಎಫ್‌ಡಿಆರ್‌ನ ಪರೀಕ್ಷೆಯನ್ನು ವಿಮಾನ ಅಪಘಾತ ತನಿಖಾ ಸಂಸ್ಥೆ (ಎಎಐಬಿ)ಯ ಪ್ರಯೋಗಾಲಯದಲ್ಲಿ ನಡೆಸಲಾಗುತ್ತಿದೆ.
ಅಂತರರಾಷ್ಟ್ರೀಯ ಶಿಷ್ಟಾಚಾರಕ್ಕೆ ಅನುಗುಣವಾಗಿ ರೂಪಿಸಲಾದ ಈ ತಂಡದ ನೇತೃತ್ವವನ್ನು ಎಎಐಬಿಯ ಪ್ರಧಾನ ನಿರ್ದೇಶಕರು ವಹಿಸಿದ್ದಾರೆ. ಅಲ್ಲದೆ ಈ ತಂಡ ವೈಮಾನಿಕ ವೈದ್ಯಕೀಯ ತಜ್ಞರು, ಎಟಿಸಿ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಸಾರಿಗೆ ಸುರಕ್ಷಾ ಮಂಡಳಿ (ಎನ್‌ಟಿಎಸ್‌ಬಿ)ಯ ಪ್ರತಿನಿಧಿಗಳನ್ನು ಒಳಗೊಂಡಿದೆ.
ಬ್ಯಾಕ್ ಬಾಕ್ಸ್‌ಗಳನ್ನು ಜೂನ್ 24ರಂದು ವಾಯು ಪಡೆಯ ವಿಮಾನದ ಮೂಲಕ ಸಂಪೂರ್ಣ ರಕ್ಷಣೆಯಲ್ಲಿ ಅಹ್ಮದಾಬಾದ್ ನಿಂದ ದಿಲ್ಲಿಗೆ ತರಲಾಗಿತ್ತು. ಅಂದು ಅಪರಾಹ್ನ 2 ಗಂಟೆ ಸುಮಾರಿಗೆ ಎಎಐಬಿಯ ಮಹಾ ನಿರ್ದೇಶಕರರೊಂದಿಗೆ ಮುಂಭಾಗದ ಬ್ಲ್ಯಾಕ್ ಬಾಕ್ಸ್ ಅನ್ನು ದಿಲ್ಲಿಯಲ್ಲಿರುವ ಎಎಐಬಿ ಪ್ರಯೋಗಾಲಯಕ್ಕೆ ಬಂದಿತ್ತು. ಹಿಂಭಾಗದ ಬ್ಲ್ಯಾಕ್ ಬಾಕ್ಸ್ ಅನ್ನು ಎಎಐಬಿಯ ಎರಡನೇ ತಂಡ ಜೂನ್ 24ರಂದು ಸಂಜೆ 5.15ಕ್ಕೆ ದಿಲ್ಲಿಗೆ ತಂದಿತ್ತು.
‘‘ಜೂನ್ 24ರಂದು ಸಂಜೆ ಎಎಐಬಿಯ ಮಹಾನಿರ್ದೇಶಕರ ನೇತೃತ್ವದ ತಂಡ ಎಎಐಬಿ ಹಾಗೂ ಎನ್ ಟಿ ಎಸ್ ಬಿಯ ತಾಂತ್ರಿಕ ಸದಸ್ಯರೊಂದಿಗೆ ದತ್ತಾಂಶವನ್ನು ಕಲೆ ಹಾಕುವ ಪ್ರಕ್ರಿಯೆ ಆರಂಭಿಸಿತ್ತು. ಮುಂಭಾಗದ ಬ್ಲ್ಯಾಕ್ ಬಾಕ್ಸ್‌ನಿಂದ ಕ್ರಾಶ್ ಪ್ರೊಟೆಕ್ಷನ್ ಮಾಡ್ಯುಲ್ (ಸಿಪಿಎಂ) ಅನ್ನು ಸುರಕ್ಷಿತವಾಗಿ ಹೊರ ತೆಗೆಯಲಾಯಿತು. ಜೂನ್ 25ರಂದು ಮೆಮೊರಿ ಮಾಡ್ಯುಲ್ ಅನ್ನು ಯಶಸ್ವಿಯಾಗಿ ತೆರೆಯಲಾಯಿತು. ಅನಂತರ ಎಎಐಬಿ ಪ್ರಯೋಗಾಲಯದಲ್ಲಿ ದತ್ತಾಂಶವನ್ನು ಡೌನ್ ಲೋಡ್ ಮಾಡಲಾಯಿತು ಎಂದು ಹೇಳಿಕೆ ತಿಳಿಸಿದೆ.