ಏರ್ ಇಂಡಿಯಾ ವಿಮಾನ ದುರಂತ | ಯಾರ ಮೇಲೂ ಆರೋಪ ಹೊರಿಸುವ ಪ್ರಯತ್ನವಿಲ್ಲ: ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ ಸರಕಾರ
Photo Credit : PTI
ಹೊಸದಿಲ್ಲಿ, ನ. 13: ಜೂನ್ 12ರಂದು ಅಹ್ಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ಸಂಬಂಧಿಸಿದ ತನಿಖೆಯು ‘‘ಯಾರದೇ ವಿರುದ್ಧ ಆರೋಪವನ್ನು ಹೊರಿಸುವ ಪ್ರಯತ್ನವನ್ನು ಮಾಡುತ್ತಿಲ್ಲ’’ ಎಂದು ಕೇಂದ್ರ ಸರಕಾರ ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಅಹ್ಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನವು ನಿಲ್ದಾಣದ ಹೊರವಲಯದಲ್ಲಿ ವೈದ್ಯಕೀಯ ಕಾಲೇಜೊಂದರ ಹಾಸ್ಟೆಲ್‌ಗೆ ಅಪ್ಪಳಿಸಿ ಪತನಗೊಂಡಿತ್ತು. ದುರಂತದಲ್ಲಿ ವಿಮಾನದ ಒಳಗಿನ ಮತ್ತು ಹೊರಗಿನ 260 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಒಬ್ಬ ಪ್ರಯಾಣಿಕ ಪವಾಡ ಸದೃಶವೆಂಬಂತೆ ಬದುಕುಳಿದಿದ್ದಾರೆ.
ಇಂಥ ತನಿಖೆಯ ಉದ್ದೇಶ ದುರಂತದ ಕಾರಣವನ್ನು ಪತ್ತೆಹಚ್ಚುವುದು ಮತ್ತು ಮುಂದೆ ಅಂಥ ತಪ್ಪುಗಳು ಸಂಭವಿಸದಂತೆ ತಡೆಯುವುದಾಗಿದೆಯೇ ಹೊರತು ವ್ಯಕ್ತಿಗಳ ಮೇಲೆ ಆರೋಪವನ್ನು ಹೊರಿಸುವುದು ಅಥವಾ ತಪ್ಪು ಯಾರು ಮಾಡಿದ್ದಾರೆಂದು ಹೇಳುವುದಲ್ಲ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜಯಮಲ್ಯ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠವೂ ಹೇಳಿತು.
ಅಂತರ್‌ರಾಷ್ಟ್ರೀಯ ನಾಗರಿಕ ವಾಯುಯಾನ ಮಾನದಂಡಗಳಂತೆ ತನಿಖೆ ನಡೆಸಲಾಗುತ್ತಿದೆ ಎಂದು ಕೇಂದ್ರ ಸರಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.
ವಿಮಾನ ದುರಂತದಲ್ಲಿ ಮೃತಪಟ್ಟ ಕ್ಯಾಪ್ಟನ್ ಸುಮೀತ್ ಸಭರ್ವಾಲ್‌ರ ತಂದೆ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿತ್ತು. ತನಿಖೆಯು ವಿಮಾನ ಅಪಘಾತದ ಹೊಣೆಯನ್ನು ಪೈಲಟ್‌ಗಳ ಮೇಲೆ ಹೊರಿಸುವ ಸಾಧ್ಯತೆ ಇದೆ ಎಂದು ಆರೋಪಿಸಿರುವ ತಂದೆ, ಅಂತಾರಾಷ್ಟ್ರೀಯ ಪರಿಣತರನ್ನು ಒಳಗೊಂಡ ತಾಂತ್ರಿಕ ಸಮಿತಿಯೊಂದನ್ನು ತನಿಖೆಗೆ ನಿಯೋಜಿಸಬೇಕು ಎಂದು ಕೋರಿದ್ದರು.
ಈ ಸಂಬಂಧ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ನೋಟಿಸ್ ನೀಡಿತ್ತು. ಕೇಂದ್ರ ಸರಕಾರವು ಈಗ ನೋಟಿಸ್‌ಗೆ ಈ ರೀತಿಯಾಗಿ ಉತ್ತರಿಸಿದೆ.