ಅಜಿತ್ ಪವಾರ್ ಜೊತೆಗೆ ವಿಮಾನ ಅಪಘಾತದಲ್ಲಿ ಮಡಿದವರು ಯಾರ್ಯಾರು?
ಪ್ರಯಾಣಕ್ಕೆ ಮೊದಲು ತಾಯಿಗೆ ಕರೆ ಮಾಡುತ್ತಿದ್ದ ಗಗನಸಖಿ ಪಿಂಕಿ, ಅಪಘಾತ ಸಂಭವಿಸಿದ ದಿನ ಕರೆ ಮಾಡಿರಲಿಲ್ಲ!
Photo Credit : PTI
ಹೊಸದಿಲ್ಲಿ/ಬಾರಾಮತಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರನ್ನು ಹೊತ್ತೊಯ್ಯುತ್ತಿದ್ದ ಚಾರ್ಟರ್ಡ್ ಲಿಯರ್‌ಜೆಟ್–45 ವಿಮಾನವು ಬುಧವಾರ ಬೆಳಿಗ್ಗೆ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಅಪಘಾತಕ್ಕೀಡಾಗಿ, ವಿಮಾನದಲ್ಲಿದ್ದ ಐವರು ಮೃತಪಟ್ಟಿದ್ದಾರೆ.
ಮುಂಬೈನಿಂದ ಬಾರಾಮತಿಗೆ ತೆರಳುತ್ತಿದ್ದ ಈ ವಿಮಾನವು ಲ್ಯಾಂಡಿಂಗ್ ವೇಳೆ ನಿಯಂತ್ರಣ ಕಳೆದುಕೊಂಡು ರನ್‌ವೇ ಸಮೀಪ ಪತನಗೊಂಡು ಬೆಂಕಿ ಹೊತ್ತಿಕೊಂಡಿದೆ. ಅಪಘಾತದ ತೀವ್ರತೆಗೆ ವಿಮಾನ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಯಾರೂ ಬದುಕುಳಿದಿಲ್ಲ ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಮೃತಪಟ್ಟ ಅಜಿತ್ ಪವಾರ್ (66) ಮಹಾರಾಷ್ಟ್ರ ರಾಜಕಾರಣದಲ್ಲಿ ದೀರ್ಘ ಅನುಭವ ಹೊಂದಿದ್ದ ಹಿರಿಯ ನಾಯಕರು. ನ್ಯಾಷನಲಿಷ್ಟ್ ಕಾಂಗ್ರೆಸ್ ಪಾರ್ಟಿಯ ಪ್ರಮುಖ ಮುಖವಾಗಿದ್ದ ಅವರು, ಪ್ರಸ್ತುತ ಅವರು ಮಹಾರಾಷ್ಟ್ರ ಸರಕಾರದ ಆಡಳಿತ ಮೈತ್ರಿಕೂಟದ ಭಾಗವಾಗಿ, ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಸ್ಥಳೀಯ ಚುನಾವಣೆಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಬಾರಾಮತಿಗೆ ಪ್ರಯಾಣಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಅಜಿತ್ ಪವಾರ್ | Photo Credit : PTI
ಪವಾರ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿ (ಪಿಎಸ್‌ಒ) ವಿದೀಪ್ ಜಾಧವ್ ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಥಾಣೆಯ ವಿಟಾವಾದ ನಿವಾಸಿಯಾಗಿದ್ದ ಜಾಧವ್, ವಯಸ್ಸಾದ ಪೋಷಕರು, ಒಂಭತ್ತು ವರ್ಷದ ಪುತ್ರ ಹಾಗೂ 14 ವರ್ಷದ ಪುತ್ರಿಯನ್ನು ಅಗಲಿದ್ದಾರೆ.
ವಿದೀಪ್ ಜಾಧವ್ |Photo Credit ; X
ವಿಮಾನದಲ್ಲಿದ್ದ ಗಗನಸಖಿ ಪಿಂಕಿ ಮಾಲಿ ಸಹ ಈ ದುರಂತದಲ್ಲಿ ಮೃತಪಟ್ಟಿದ್ದಾರೆ. ಅಧಿಕೃತ ಪ್ರವಾಸಗಳಲ್ಲಿ ಪವಾರ್ ಅವರೊಂದಿಗೆ ನಿಯಮಿತವಾಗಿ ಪ್ರಯಾಣಿಸುತ್ತಿದ್ದ ಅವರು, ಅಪಘಾತದ ಹಿಂದಿನ ದಿನ ತಮ್ಮ ಪ್ರಯಾಣದ ಕುರಿತು ಕುಟುಂಬದವರೊಂದಿಗೆ ಮಾತನಾಡಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ.
ಗಗನಸಖಿ ಪಿಂಕಿ ಮಾಲಿ | Photo Credit : X
ವಿಮಾನದ ಪೈಲಟ್ ಕ್ಯಾಪ್ಟನ್ ಸುಮಿತ್ ಕಪೂರ್ 16,500 ಕ್ಕೂ ಹೆಚ್ಚು ಗಂಟೆಗಳ ಹಾರಾಟದ ಅನುಭವ ಹೊಂದಿದ್ದ ಹಿರಿಯ ಪೈಲಟ್ ಆಗಿದ್ದರು. ಸಹ–ಪೈಲಟ್ ಹಾಗೂ ಫಸ್ಟ್ ಆಫೀಸರ್ ಆಗಿದ್ದ ಶಾಂಭವಿ ಪಾಠಕ್ ಸೇನಾಧಿಕಾರಿಯ ಪುತ್ರಿಯಾಗಿದ್ದು, ವಾಯುಪಡೆಯ ಬಾಲ ಭಾರತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ನಂತರ ಅವರು ಮುಂಬೈ ವಿಶ್ವವಿದ್ಯಾಲಯದಲ್ಲಿ ವೈಮಾನಿಕ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪದವಿ ಪಡೆದು, ನ್ಯೂಝಿಲ್ಯಾಂಡ್‌ನ ಅಂತರರಾಷ್ಟ್ರೀಯ ವಾಣಿಜ್ಯ ಪೈಲಟ್ ಅಕಾಡೆಮಿಯಲ್ಲಿ ವಿಮಾನ ತರಬೇತಿ ಪಡೆದಿದ್ದರು.
ಶಾಂಭವಿ ಪಾಠಕ್| Photo Credit : X
ಗಗನಸಖಿ ಪಿಂಕಿ ಮಾಲಿ ಉತ್ತರ ಪ್ರದೇಶದ ಜಾನ್ಪುರ್ ಜಿಲ್ಲೆಯ ಕೇರಕತ್ ತಾಲೂಕಿನ ಭಯನ್ಸಾ ಗ್ರಾಮದ ನಿವಾಸಿಯಾಗಿದ್ದರು. ಕಳೆದ ಎಂಟು ವರ್ಷಗಳಿಂದ ಚಾರ್ಟರ್ಡ್ ವಿಮಾನಗಳಲ್ಲಿ ಗಗನಸಖಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು, ನಾಲ್ಕು ವರ್ಷಗಳ ಹಿಂದಷ್ಟೇ ವಿವಾಹವಾಗಿದ್ದರು. ಪ್ರತಿದಿನ ಪ್ರಯಾಣಕ್ಕೆ ಮೊದಲು ತಾಯಿಗೆ ಕರೆ ಮಾಡುತ್ತಿದ್ದ ಪಿಂಕಿ, ಅಪಘಾತ ಸಂಭವಿಸಿದ ದಿನ ಕರೆ ಮಾಡಿರಲಿಲ್ಲ ಎಂದು ಅವರ ತಾಯಿ ದುಃಖ ವ್ಯಕ್ತಪಡಿಸಿದ್ದಾರೆ.
VT–SSK ನೋಂದಣಿ ಹೊಂದಿದ್ದ Bombardier Learjet 45 ವಿಮಾನವನ್ನು ದಿಲ್ಲಿ ಮೂಲದ VSR ವೆಂಚೂರ್ಸ್ ನಿರ್ವಹಿಸುತ್ತಿತ್ತು. ಮಧ್ಯಮ ಗಾತ್ರದ ಈ ಕಮರ್ಷಿಯಲ್ ಜೆಟ್ ಅನ್ನು ಚಾರ್ಟರ್ ಹಾಗೂ ಅಧಿಕೃತ ಪ್ರಯಾಣಗಳಿಗೆ ಬಳಸಲಾಗುತ್ತಿತ್ತು. ವಿಮಾನದಲ್ಲಿ ಅಜಿತ್ ಪವಾರ್, ಅವರ ಸಹಾಯಕ ಸಿಬ್ಬಂದಿ, ಇಬ್ಬರು ಪೈಲಟ್‌ಗಳು ಹಾಗೂ ಒಬ್ಬ ಗಗನಸಖಿ ಸೇರಿ ಐವರು ಪ್ರಯಾಣಿಸುತ್ತಿದ್ದರು.
ಅಪಘಾತದ ನಿಖರ ಕಾರಣ ಪತ್ತೆಹಚ್ಚಲು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತನಿಖೆಗೆ ಆದೇಶಿಸಿದೆ. ತಾಂತ್ರಿಕ ದೋಷ, ಹವಾಮಾನ ಪರಿಸ್ಥಿತಿ ಸೇರಿದಂತೆ ವಿವಿಧ ಅಂಶಗಳ ಕುರಿತು ಸಮಗ್ರ ಪರಿಶೀಲನೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.