ಬಾಬಾ ಬಾಗೇಶ್ವರ ಕಾರ್ಯಕ್ರಮದಲ್ಲಿ ಸಮವಸ್ತ್ರಧಾರಿ ಸೈನಿಕರು!
ಸೇನೆಯ ಜಾತ್ಯತೀತ ತತ್ವಕ್ಕೆ ಧಕ್ಕೆ: ನಿವೃತ್ತ ಸೈನಿಕರಲ್ಲಿ ಆತಂಕ
Photo: X/@Bageshwardham
ಚಂಡೀಗಢ: ಗಣರಾಜ್ಯೋತ್ಸವದ ಕೆಲವೇ ದಿನಗಳ ಮುನ್ನ, ರಾಜಸ್ಥಾನದ ಕೋಟಾದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಸಮವಸ್ತ್ರ ಧರಿಸಿದ ಭಾರತೀಯ ಸೇನಾ ಸಿಬ್ಬಂದಿ ಭಾಗವಹಿಸಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸೇನಾ ವಲಯಗಳಲ್ಲಿ ಗಂಭೀರ ಆತಂಕ ಮತ್ತು ಚರ್ಚೆಗೆ ಕಾರಣವಾಗಿವೆ.
ಸ್ವಯಂ ಘೋಷಿತ ಹಿಂದೂ ದೇವಮಾನವ ಧೀರೇಂದ್ರ ಕೃಷ್ಣ ಶಾಸ್ತ್ರಿ, ಬಾಬಾ ಬಾಗೇಶ್ವರ ಎಂದು ಜನಪ್ರಿಯವಾಗಿ ಕರೆಯಲ್ಪಡುವ ವ್ಯಕ್ತಿಯ ಕಾರ್ಯಕ್ರಮದ ದೃಶ್ಯಗಳು ವೈರಲ್ ಆಗಿವೆ. ಈ ಕಾರ್ಯಕ್ರಮಕ್ಕೆ ಸೇನೆಯ ಯಾವುದೇ ಅಧಿಕೃತ ಅನುಮತಿಯಿರಲಿಲ್ಲ ಎಂದು ತಿಳಿದುಬಂದಿದೆ.
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಕೋಟಾದಲ್ಲಿ ನಿಯೋಜಿತವಾಗಿರುವ 14 ಸಿಖ್ ಘಟಕದ ಸೈನಿಕರು ಈ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಿದ್ದರು. ವೀಡಿಯೊ ದೃಶ್ಯಗಳಲ್ಲಿ, ಸಮವಸ್ತ್ರದಲ್ಲಿರುವ ಸೈನಿಕರು ಮೊದಲು ಬಾಗೇಶ್ವರ ಧಾಮ್ ದೇವಾಲಯದ ಮುಖ್ಯ ಅರ್ಚಕರಾಗಿರುವ ಶಾಸ್ತ್ರಿಗೆ ನಮಸ್ಕರಿಸಿ, ಬಳಿಕ ಅವರ ಪಾದಗಳ ಬಳಿ ಕುಳಿತು ಕಾಣಿಕೆಗಳನ್ನು ಅರ್ಪಿಸಿ, ಕೈಮುಗಿದು ಧರ್ಮೋಪದೇಶವನ್ನು ಆಲಿಸುತ್ತಿರುವುದು ಕಾಣಿಸುತ್ತದೆ. ಘಟಕದ ಕಮಾಂಡಿಂಗ್ ಅಧಿಕಾರಿ ಶಾಸ್ತ್ರಿಯವರನ್ನು ಸೈನ್ಯದ ಪರವಾಗಿ ಸಾರ್ವಜನಿಕವಾಗಿ ಸನ್ಮಾನಿಸಿದ್ದು, ಅದರ ವೀಡಿಯೊ ಕ್ಲಿಪ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಭಾರತೀಯ ಸೇನೆಯ ವಕ್ತಾರರು, ಕೋಟಾದ ಕಾರ್ಯಕ್ರಮದ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಇದು ಸೇನೆಯಿಂದ ‘ಅಧಿಕೃತವಾಗಿ ಆಯೋಜಿಸಲಾದ’ ಕಾರ್ಯಕ್ರಮವಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಸಮವಸ್ತ್ರದಲ್ಲಿರುವ ಸೈನಿಕರು ಪೂಜಾ ಸ್ಥಳಗಳಿಗೆ ಭೇಟಿ ನೀಡುವುದನ್ನು ನಿಯಮಗಳು ಸಂಪೂರ್ಣವಾಗಿ ನಿಷೇಧಿಸುವುದಿಲ್ಲ ಎಂದಿದ್ದಾರೆ. ಆದರೆ, ಸಮವಸ್ತ್ರದಲ್ಲಿರುವ ಸಂಪೂರ್ಣ ಸೇನಾ ಘಟಕದ ಭಾಗವಹಿಸುವಿಕೆ ಮತ್ತು ವೈಯಕ್ತಿಕ ಧಾರ್ಮಿಕ ಭೇಟಿಯ ನಡುವಿನ ವ್ಯತ್ಯಾಸದ ಕುರಿತು ಅವರು ಯಾವುದೇ ಸ್ಪಷ್ಟನೆ ನೀಡಿಲ್ಲ.
ಕಾರ್ಯಕ್ರಮದಲ್ಲಿ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಸೇನಾ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಶಾಸ್ತ್ರಿ, ಗಣರಾಜ್ಯೋತ್ಸವದಂದು ದೇಶದ ನಾಗರಿಕರು ಸೈನಿಕರಿಗೆ ನಮಸ್ಕರಿಸಬೇಕು ಎಂದು ಕರೆ ನೀಡಿದರು. ಗಡಿಭಾಗಗಳು ಮತ್ತು ಹಿಮಾಲಯದ ಕಠಿಣ ಪರಿಸ್ಥಿತಿಗಳಲ್ಲಿ ಸೈನಿಕರು ಸಲ್ಲಿಸುತ್ತಿರುವ ತ್ಯಾಗವನ್ನು ಉಲ್ಲೇಖಿಸಿದ ಅವರು, “ಸೈನಿಕರು ನಮ್ಮ ಸುರಕ್ಷತೆಗಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕಾವಲು ಕಾಯುತ್ತಿರುವುದರಿಂದ ನಾವು ರಾತ್ರಿ ಆರಾಮವಾಗಿ ಮಲಗುತ್ತೇವೆ” ಎಂದು ಹೇಳಿದರು. “ಅವರನ್ನು ಸೇವಕರಂತೆ ನೋಡಬಾರದು; ನಮ್ಮ ಭದ್ರತೆಯನ್ನು ಖಾತರಿಪಡಿಸುವ ವೀರರೆಂದು ಅವರನ್ನು ನಾವು ವಂದಿಸಬೇಕು” ಎಂದರು.
ಈ ಘಟನೆಯ ಕುರಿತು ನಿವೃತ್ತ, ಹಿರಿಯ ಸೈನಿಕರು ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೈನಿಕರ ಸೇವೆಯನ್ನು ಪ್ರಶಂಸಿಸಿರುವುದಕ್ಕೆ ಅವರ ತಕರಾರಿಲ್ಲ. ಅದನ್ನು ಅವರು ಪ್ರಶ್ನಿಸುತ್ತಿಲ್ಲ. ಸಮವಸ್ತ್ರ ಧರಿಸಿದ ಸೈನಿಕರು ಶಾಸ್ತ್ರಿಯ ಪಾದಗಳ ಬಳಿ ಕುಳಿತಿದ್ದ ಸಂದರ್ಭದಲ್ಲಿ ಸೈನ್ಯವನ್ನು ಹೊಗಳಿರುವುದು, ನಂಬಿಕೆ–ರಾಷ್ಟ್ರ–ಮಿಲಿಟರಿ ನಡುವಿನ ಸಂಬಂಧದಲ್ಲಿ ಸ್ವಘೋಷಿತ ದೇವಮಾನವನು ತನ್ನನ್ನು ತಾನು ಮಧ್ಯವರ್ತಿಯಂತೆ ಬಿಂಬಿಸುತ್ತಿದ್ದಾರೆ ಎಂಬ ಭಾವನೆ ಹುಟ್ಟುಹಾಕಿರುವುದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಘಟನೆಯನ್ನು ಅನಗತ್ಯ ಪ್ರದರ್ಶನ ಎಂದು ಹೇಳಿರುವ ಮೇಜರ್ ಜನರಲ್ ಎ.ಪಿ. ಸಿಂಗ್ (ನಿವೃತ್ತ), ಇದು ಸೈನಿಕರನ್ನು ಧಾರ್ಮಿಕ ನಿರೂಪಣೆಯೊಳಗೆ ತರುವ ಕ್ರಮವಾಗಿದ್ದು, ಸೇನೆಯ ಜಾತ್ಯತೀತ ತತ್ವಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಸೇವೆಯಲ್ಲಿರುವ ಸೈನಿಕರು ತಿಲಕಗಳು ಹಾಗೂ ಇತರ ಬಹಿರಂಗ ಧಾರ್ಮಿಕ ಚಿಹ್ನೆಗಳನ್ನು ಪ್ರದರ್ಶಿಸುವುದನ್ನು ಸೇನೆ ಬೆಂಬಲಿಸುವುದಿಲ್ಲ. ಇಂತಹ ಘಟನೆಗಳು ಸೈನಿಕನ ವೈಯಕ್ತಿಕ ನಂಬಿಕೆ ಮತ್ತು ವೃತ್ತಿಪರತೆಯ ನಡುವಿನ ಸೂಕ್ಷ್ಮತೆಯನ್ನು ಮಸುಕುಗೊಳಿಸುತ್ತವೆ” ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಲವಾರು ಹಿರಿಯ ನಿವೃತ್ತ ಸೈನಿಕರು, ಸಮವಸ್ತ್ರದಲ್ಲಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾರ್ವಜನಿಕವಾಗಿ ವಿವಾದಾತ್ಮಕ ಧಾರ್ಮಿಕ ವ್ಯಕ್ತಿಗೆ ನಮಸ್ಕರಿಸುವ ದೃಶ್ಯಗಳು, ಸೇನೆಯನ್ನು ಸಂವಿಧಾನಾತ್ಮಕ ಸಂಸ್ಥೆಯಾಗಿ ನೋಡುವ ಬದಲು ಸಾಂಸ್ಕೃತಿಕ ಅಥವಾ ಧಾರ್ಮಿಕ ಯೋಜನೆಯ ಭಾಗವಾಗಿ ಮರುರೂಪಿಸುವ ಅಪಾಯವನ್ನುಂಟುಮಾಡುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಇಂತಹ ಬಹಿರಂಗ ಧಾರ್ಮಿಕ ಪ್ರದರ್ಶನಗಳು ಸೇನೆಯ ಜಾತ್ಯತೀತ ಅಡಿಪಾಯ ಮತ್ತು ಆಂತರಿಕ ಏಕತೆಗೆ ಧಕ್ಕೆ ತರುತ್ತವೆ ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಗಣರಾಜ್ಯೋತ್ಸವದ ಸಂದರ್ಭದಲ್ಲಿಯೇ ಈ ಕಾರ್ಯಕ್ರಮ ನಡೆದಿರುವುದು ಮತ್ತು ಅದರ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರಗೊಂಡಿರುವುದು ಕಳವಳವನ್ನು ಮತ್ತಷ್ಟು ತೀವ್ರಗೊಳಿಸಿದೆ. ರಾಷ್ಟ್ರೀಯ ಕೃತಜ್ಞತೆಯನ್ನು ವ್ಯಕ್ತಪಡಿಸಲು ಧಾರ್ಮಿಕ ಮಧ್ಯಸ್ಥಿಕೆಯ ಅಗತ್ಯವಿಲ್ಲ; ಭಾರತೀಯ ಸೇನೆಯ ಗೌರವ ಮತ್ತು ನ್ಯಾಯಸಮ್ಮತತೆ ಸಂವಿಧಾನದಿಂದಲೇ ದೊರೆಯುತ್ತದೆ ಎಂಬುದನ್ನು ನಿವೃತ್ತ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.
“ಭಾರತೀಯ ಸೇನೆಯು ತನ್ನ ನ್ಯಾಯಸಮ್ಮತತೆಯನ್ನು ಸಂವಿಧಾನದಿಂದ ಪಡೆಯುತ್ತದೆ, ಧಾರ್ಮಿಕ ಅನುಮೋದನೆಯಿಂದಲ್ಲ,” ಎಂದು ನಿವೃತ್ತ ಲೆಫ್ಟಿನೆಂಟ್ ಹೇಳಿದ್ದಾರೆ. ಈ ವ್ಯತ್ಯಾಸದ ಪದರ ತಿಳಿಯಾದಾಗ ಪರಿಣಾಮಗಳು ಒಂದೇ ಘಟನೆಯ ಮಟ್ಟದಲ್ಲೇ ನಿಲ್ಲದೆ, ಮಿಲಿಟರಿಯ ವೃತ್ತಿಪರ ಮೂಲಭೂತ ತತ್ವಗಳನ್ನೇ ಬುಡಮೇಲು ಮಾಡುತ್ತವೆ ಎಂದು ಅವರು ಎಚ್ಚರಿಸಿದ್ದಾರೆ.
ಚಂಡೀಗಢದ ನಿವೃತ್ತ ಸೇನಾ ಬ್ರಿಗೇಡಿಯರ್ ಅಧಿಕಾರಿಯೊಬ್ಬರು, ಸಮವಸ್ತ್ರದಲ್ಲಿರುವ ಸೇನಾ ಸಿಬ್ಬಂದಿ ಇಂತಹ ಹಠಮಾರಿ ಸಾರ್ವಜನಿಕ ಧಾರ್ಮಿಕ ಪ್ರದರ್ಶನಗಳಲ್ಲಿ ತೊಡಗುವುದು ‘ಶೋಚನೀಯ’ ಎಂದು ಅಭಿಪ್ರಾಯಪಟ್ಟಿದ್ದಾರೆ. ದೇವಮಾನವನ ವಿವಾದಾತ್ಮಕ ಹಿನ್ನೆಲೆಯನ್ನು ಗಮನಿಸಿದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುತ್ತದೆ ಎಂದೂ ಅವರು ಹೇಳಿದ್ದಾರೆ.
ಬಾಗೇಶ್ವರ ಧಾಮ್ ಸರ್ಕಾರ್ ಎಂದು ಕರೆಸಿಕೊಳ್ಳವ ಧೀರೇಂದ್ರ ಕೃಷ್ಣ ಶಾಸ್ತ್ರಿಯ ಆಧ್ಯಾತ್ಮಿಕತೆಯು ಪ್ರಾಮಾಣಿಕತೆಗಿಂತ ಪ್ರದರ್ಶನ ಮತ್ತು ವಿವಾದಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂಬ ಆರೋಪವೂ ಇದೆ. ‘ದೈವಿಕ’ ಮನಸ್ಸು–ಓದುವಿಕೆ ಮತ್ತು ಪವಾಡ ಚಿಕಿತ್ಸೆಗಳ ಹಕ್ಕುಗಳ ಮೂಲಕ ಅವರು ದೊಡ್ಡ ಅನುಯಾಯಿಗಳನ್ನು ಬೆಳೆಸಿದ್ದು, ಇದನ್ನು ಮೂಢನಂಬಿಕೆ ಉತ್ತೇಜನವೆಂದು ಹಲವರು ಆರೋಪಿಸಿದ್ದಾರೆ.
ಧರ್ಮವನ್ನು ಮೀರಿ ಅವರ ಪ್ರಭಾವ ರಾಜಕೀಯ ವಲಯಕ್ಕೂ ವಿಸ್ತರಿಸಿರುವುದು ಗಮನಾರ್ಹ. ಭಾರತವನ್ನು “ಹಿಂದೂ ರಾಷ್ಟ್ರ”ವೆಂದು ಘೋಷಿಸಬೇಕೆಂಬ ಕರೆಗಳು, ಧಾರ್ಮಿಕ ಮತಾಂತರ ವಿರೋಧಿ ಅಭಿಯಾನಗಳಲ್ಲಿ ಸಕ್ರಿಯ ಪಾತ್ರ, ಹಾಗೂ ರಾಜಕೀಯದೊಂದಿಗೆ ಹೊಂದಿರುವ ಸಮೀಪತೆ ಅವರನ್ನು ವಿವಾದಗಳ ಸುಳಿಯಲ್ಲಿ ಸುತ್ತಿಸಿವೆ. 2023ರ ಜನವರಿಯಲ್ಲಿ ಅವರನ್ನು ದೈವಿಕ ಹಕ್ಕುಗಳ ಕುರಿತ ಪ್ರಶ್ನೆಗಳನ್ನು ಎದುರಿಸಿದಾಗ ವಿಚಾರವಾದಿಗಳೊಂದಿಗೆ ಚರ್ಚೆಯಿಂದ ಹಿಂದೆ ಸರಿದದ್ದಕ್ಕಾಗಿ ಅವರು ಟೀಕೆಗೆ ಗುರಿಯಾಗಿದ್ದರು. ಬಾಲಿವುಡ್ ಚಿತ್ರ ಪಠಾಣ್ ವಿರೋಧಿಸಿ ನೀಡಿದ ಹೇಳಿಕೆಗಳೂ ವಿವಾದದ ಕಿಡಿ ಹೊತ್ತಿಸಿದ್ದವು.
ಶಾಸ್ತ್ರಿ ತಮ್ಮ ಭಾಷಣಗಳಲ್ಲಿ ಹಿಂದೂ ಧಾರ್ಮಿಕತೆಯನ್ನು ರಾಷ್ಟ್ರೀಯತೆಯೊಂದಿಗೆ ಬೆಸೆದು, “ಸನಾತನ ಜಾಗೃತಿ”ಯನ್ನು ನಾಗರಿಕ ಕರ್ತವ್ಯವೆಂದು ಬಿಂಬಿಸುತ್ತಾರೆ. ತಮ್ಮ ವಿಮರ್ಶಕರನ್ನು ‘ರಾಷ್ಟ್ರವಿರೋಧಿಗಳು’ ಎಂದು ತಳ್ಳಿಹಾಕುವ ಪ್ರವೃತ್ತಿಯೂ ಅವರಲ್ಲಿ ಕಂಡುಬರುತ್ತದೆ ಎಂಬ ಆರೋಪಗಳಿವೆ.
“ಸಮವಸ್ತ್ರದಲ್ಲಿರುವ ಸೈನಿಕರು ಇಂತಹ ವ್ಯಕ್ತಿಯೊಂದಿಗೆ ಸಾರ್ವಜನಿಕವಾಗಿ ಸಂಬಂಧ ಹೊಂದಿರುವುದು ಕಳವಳಕಾರಿ,” ಎಂದು ನಿವೃತ್ತ ಕರ್ನಲ್ ಒಬ್ಬರು ಹೇಳಿದ್ದಾರೆ. ಇದು ವೈಯಕ್ತಿಕ ನಂಬಿಕೆ, ರಾಷ್ಟ್ರೀಯ ರಾಜಕೀಯ ಮತ್ತು ಸೈನಿಕ ಸಮವಸ್ತ್ರದ ನಡುವಿನ ಗಡಿಗಳನ್ನು ಅಪಾಯಕಾರಿ ರೀತಿಯಲ್ಲಿ ಮಸುಕುಗೊಳಿಸುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಗಣರಾಜ್ಯೋತ್ಸವವು ಧಾರ್ಮಿಕ ಕಾರ್ಯಕ್ರಮವಲ್ಲ. ಅದು ಸಾಂವಿಧಾನಿಕ ಮೌಲ್ಯಗಳನ್ನು ಸ್ಮರಿಸಲು ಮೀಸಲಾದ ದಿನ. ಇಂತಹ ಸಂದರ್ಭದಲ್ಲಿ ಸೈನಿಕರು ಧಾರ್ಮಿಕ ವೇದಿಕೆಗಳಲ್ಲಿ ಕಾಣಿಸಿಕೊಳ್ಳುವುದರಿಂದ ಅಲ್ಪಸಂಖ್ಯಾತ ಸಿಬ್ಬಂದಿಯನ್ನು ದೂರವಿಡುವ, ಆಂತರಿಕ ಏಕತೆಯನ್ನು ದುರ್ಬಲಗೊಳಿಸುವ ಮತ್ತು ಸೇನೆಯಲ್ಲಿ ರಾಜಕೀಯ ಉತ್ತೇಜಿಸುವ ಅಪಾಯವಿದೆ ಎಂದು ನಿವೃತ್ತ ಸೈನಿಕರು ಅಭಿಪ್ರಾಯಪಟ್ಟಿದ್ದಾರೆ.
ಇದಕ್ಕಿಂತಲೂ ಕಳವಳಕಾರಿ ಸಂಗತಿಯೆಂದರೆ, ಇಂತಹ ಘಟನೆಗಳಿಗೆ ಸಂಬಂಧಿಸಿದಂತೆ ತಕ್ಷಣದ ಸರಿಪಡಿಸುವ ಕ್ರಮ ಅಥವಾ ಸ್ಪಷ್ಟ ಹೊಣೆಗಾರಿಕೆಯ ಕೊರತೆ. “ಸೇನಾ ನಿಯಮಗಳು ಮತ್ತು ದೀರ್ಘಕಾಲೀನ ಮಾನದಂಡಗಳು ಇಂತಹ ಪ್ರಸಂಗಗಳನ್ನು ತಡೆಗಟ್ಟಲು ಅಸ್ತಿತ್ವದಲ್ಲಿವೆ. ಅವುಗಳ ಕೊರತೆಯು ಸಾಂಸ್ಥಿಕ ದಿಕ್ಕು ತಪ್ಪುವ ಸೂಚನೆ,” ಎಂದು ನಿವೃತ್ತ ಕರ್ನಲ್ ಹೇಳಿದ್ದಾರೆ.
ಈ ಚರ್ಚೆಯ ನಡುವೆ, ನಿವೃತ್ತ ಲೆಫ್ಟಿನೆಂಟ್ ಜನರಲ್ ಡಿ.ಎಸ್. ಹೂಡಾ ಅವರು ಕಳೆದ ಡಿಸೆಂಬರ್‌ನಲ್ಲಿ ದಿ ಟ್ರಿಬ್ಯೂನ್ನಲ್ಲಿ ಬರೆದ ಲೇಖನದಲ್ಲಿ, ಹಿರಿಯ ಅಧಿಕಾರಿಗಳು ಖಾಸಗಿಯಾಗಿ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಬಹುದು; ಆದರೆ ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಧಿಕೃತವಾಗಿ ಪ್ರದರ್ಶಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು.
ಅವರ ಈ ಮಾತುಗಳು, ಉಜ್ಜಯಿನಿಯ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಾಲಯದಲ್ಲಿ ಕೇಸರಿ ಉಡುಪಿನಲ್ಲಿ ಪ್ರಾರ್ಥನೆ ಸಲ್ಲಿಸಿದ್ದ ಸೇನಾ ಮುಖ್ಯಸ್ಥ ಮನೋಜ್ ದ್ವಿವೇದಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ದೃಶ್ಯಗಳಿಗೆ ಸಂಬಂಧಿಸಿದೆ. ಆ ಘಟನೆಯನ್ನು ಬಿಜೆಪಿ ಸಮರ್ಥಿಸಿದರೆ, ವಿರೋಧ ಪಕ್ಷಗಳು ತೀವ್ರ ಟೀಕೆ ನಡೆಸಿದ್ದವು.
ನಂತರ, ಮೇ ಅಂತ್ಯದಲ್ಲಿ, ಜನರಲ್ ದ್ವಿವೇದಿ ಅವರು ಚಿತ್ರಕೂಟದಲ್ಲಿರುವ ಆಶ್ರಮದಲ್ಲಿ ಆಧ್ಯಾತ್ಮಿಕ ನಾಯಕ ಜಗದ್ಗುರು ರಾಮಭದ್ರಾಚಾರ್ಯರನ್ನು ಭೇಟಿಯಾಗಿ ಅದನ್ನೂ ಸಾರ್ವಜನಿಕವಾಗಿ ಪ್ರಚಾರ ಮಾಡಿದರು. ಈ ಸಂದರ್ಭದಲ್ಲಿ ರಾಮಭದ್ರಾಚಾರ್ಯರು ಪಿಟಿಐಗೆ, ಸೇನಾ ಮುಖ್ಯಸ್ಥರಿಗೆ ರಾಮಮಂತ್ರ ದೀಕ್ಷೆ ನೀಡಿದ್ದಾಗಿ ಹೇಳಿದ್ದು, ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ‘ದಕ್ಷಿಣೆ’ಯಾಗಿ ಕೇಳಿದ್ದಾಗಿ ಹೇಳಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಯಿತು.
ಈ ಎಲ್ಲ ಹಿನ್ನೆಲೆಯಲ್ಲೇ, ಅನೇಕ ನಿವೃತ್ತ ಸೈನಿಕರು ಕೋಟಾದ ಇತ್ತೀಚಿನ ಘಟನೆಯನ್ನು ಏಕೈಕ ತಪ್ಪಾಗಿ ಅಲ್ಲ, ಬದಲಾಗಿ ಬಹುಸಂಖ್ಯಾತ ಧಾರ್ಮಿಕ ದೃಷ್ಟಿಕೋನವನ್ನು ಸಹಿಸುವ ಮತ್ತು ನಿಯಮಗಳನ್ನು ಬೇಕಾದ ಹಾಗೆ ಬದಲಾಯಿಸುವ ದೀರ್ಘ ಪ್ರವೃತ್ತಿಯ ಭಾಗವಾಗಿ ನೋಡುತ್ತಿದ್ದಾರೆ. ಇಂತಹ ಘಟನೆಗಳು ತಕ್ಷಣದ ಬಿಕ್ಕಟ್ಟನ್ನು ಉಂಟುಮಾಡದಿದ್ದರೂ, ಸೇನೆಯ ನೈತಿಕತೆ ಮತ್ತು ವಿಶ್ವಾಸವನ್ನು ನಿಧಾನವಾಗಿ ಆದರೆ ಗಂಭೀರವಾಗಿ ಕುಂದಿಸುತ್ತವೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.
ಭಾರತೀಯ ಸೇನೆಯ ಬಲವು ವೈಯಕ್ತಿಕ ಗುರುತುಗಳನ್ನು ಮೀರಿ, ನಿಷ್ಠೆಯಿಂದ ದೇಶ ಸೇವೆ ಸಲ್ಲಿಸುವ ಸಾಮರ್ಥ್ಯದಲ್ಲೇ ಅಡಕವಾಗಿದೆ ಎಂದು ನಿವೃತ್ತ ಅಧಿಕಾರಿಗಳು ಒತ್ತಿ ಹೇಳಿದ್ದಾರೆ. ಇಂತಹ ಘಟನೆಗಳನ್ನು ನಿರ್ಲಕ್ಷಿಸಿದರೆ, ಸ್ವಾತಂತ್ರ್ಯೋತ್ತರ ಕಾಲದಿಂದ ಸೇನೆ ನಿಂತಿರುವ ಜಾತ್ಯತೀತ, ರಾಜಕೀಯೇತರ ಮತ್ತು ವೃತ್ತಿಪರ ಅಡಿಪಾಯಗಳು ನಿಧಾನವಾಗಿ ಶಿಥಿಲಗೊಳ್ಳುವ ಅಪಾಯವಿದೆ ಎಂದು ಅವರು ಎಚ್ಚರಿಸಿದ್ದಾರೆ.
ಕೃಪೆ: thewire.in