ರನ್ ವೇ ಕಾಣಿಸುತ್ತಿಲ್ಲ ಎಂದು ಸಂದೇಶ ರವಾನಿಸಿದ್ದ ಪೈಲಟ್!
►ಲ್ಯಾಂಡಿಂಗ್ ಅನುಮತಿಯ ರೀಡ್‌ಬ್ಯಾಕ್ ಇರಲಿಲ್ಲ ►ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನದ ಅಂತಿಮ ಕ್ಷಣಗಳು
Photo Credit ; PTI
ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಐವರ ಸಾವಿಗೆ ಕಾರಣವಾದ ಲಿಯರ್ ಜೆಟ್–45 ಖಾಸಗಿ ವಿಮಾನ ಪತನಗೊಂಡ ಬಾರಾಮತಿ ವಿಮಾನ ನಿಲ್ದಾಣವು ನಿಯಂತ್ರಣವಿಲ್ಲದ ವಿಮಾನ ನಿಲ್ದಾಣವಾಗಿದ್ದು, ಇಲ್ಲಿನ ಹಾರಾಟ ಸಂಚಾರದ ಮಾಹಿತಿಯನ್ನು ಸ್ಥಳೀಯ ಹಾರಾಟ ತರಬೇತಿ ಶಾಲೆಗಳ ಪೈಲಟ್‌ಗಳು ನಿಭಾಯಿಸುತ್ತಾರೆ ಎಂದು ಸರಕಾರ ಬುಧವಾರ ತಿಳಿಸಿದೆ.
ವಿಮಾನ ಅಪಘಾತಕ್ಕೆ ಕಾರಣವೇನು ಎಂಬುದರ ಕುರಿತು ನಾಗರಿಕ ವಿಮಾನಯಾನ ಸಚಿವಾಲಯವು ಘಟನಾ ಸನ್ನಿವೇಶಗಳನ್ನು ಮರುಸೃಷ್ಟಿಸಿದ್ದು, ವಿಮಾನ ಭೂಸ್ಪರ್ಶ ಮಾಡುವ ವೇಳೆ ಪೈಲಟ್ ಭೂಸ್ಪರ್ಶ ಅನುಮತಿಯ ಕುರಿತು ರೀಡ್‌ಬ್ಯಾಕ್ ನೀಡದಿರುವುದು ತೀವ್ರ ಕಳವಳಕಾರಿ ಸಂಗತಿಯಾಗಿದೆ. ಅರ್ಥಾತ್, ಭೂಸ್ಪರ್ಶ ಅನುಮತಿಯನ್ನು ಪುನರುಚ್ಚರಿಸುವ ಜಾಗತಿಕ ಶಿಷ್ಟಾಚಾರದ ಯಾವುದೇ ಸಂದೇಶವನ್ನು ನೀಡಿರಲಿಲ್ಲ ಎಂದು ತಿಳಿಸಿದೆ.
►ಏನಾಯಿತು?
ಬೆಳಗ್ಗೆ 8.18 ಗಂಟೆಗೆ ವಿಆರ್‌ಎಸ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಮಾಲಕತ್ವದ, ದಿಲ್ಲಿ ಮೂಲದ ವಿಮಾನ ಹಾರಾಟ ಸಂಸ್ಥೆಗೆ ಸೇರಿದ ಹಾಗೂ ವಿಟಿ–ಎಸ್‌ಎಸ್‌ಕೆ ವಿಮಾನವು ಬಾರಾಮತಿ ವಿಮಾನ ನಿಲ್ದಾಣದೊಂದಿಗೆ ಸಂಪರ್ಕ ಸಾಧಿಸಿದೆ. ಈ ವಿಮಾನವು ಕೆಲವೇ ನಿಮಿಷಗಳ ಮುನ್ನ, ಬೆಳಗ್ಗೆ 8.10ಕ್ಕೆ ಮುಂಬೈನಿಂದ ನಿರ್ಗಮಿಸಿತ್ತು.
ಮುಂಬೈ–ಬಾರಾಮತಿ ನಡುವಿನ ದೂರ 256 ಕಿಮೀ ಆಗಿದ್ದು, ವಿಮಾನ ಹಾರಾಟದ ಅವಧಿ 45 ನಿಮಿಷಕ್ಕಿಂತ ಕಡಿಮೆಯಾಗಿದೆ.
ಈ ವೇಳೆ ಪುಣೆಯ ಸ್ಥಳೀಯ ವಾಯು ಸಂಚಾರ ನಿಯಂತ್ರಕರಿಗೆ ವಿಮಾನದ ನಿಯಂತ್ರಣವನ್ನು ವಹಿಸಲಾಗಿದ್ದು, ಕ್ಯಾಪ್ಟನ್ ಶಾಂಭವಿ ಪಾಠಕ್ ಅವರಿಗೆ ಹವಾಮಾನ ಪರಿಸ್ಥಿತಿಯ ಕುರಿತು ಸಲಹೆ ನೀಡಲಾಗಿದೆ. ಅವರ ವಿವೇಚನೆಯ ಮೇರೆಗೆ ವಿಮಾನವನ್ನು ಭೂಸ್ಪರ್ಶ ಮಾಡಲು ಸೂಚಿಸಲಾಗಿದೆ.
ಶಾಂಭವಿ ಪಾಠಕ್ ಅವರು ಭೂಸ್ಪರ್ಶ ಮಾಡುವುದಕ್ಕೂ ಮುನ್ನ, ಗ್ರೌಂಡ್ ಸ್ಟಾಫ್ ಅಥವಾ ವಾಯು ಸಂಚಾರ ನಿಯಂತ್ರಕರಿಗೆ ಪೈಲಟ್‌ಗಳು ಸಾಮಾನ್ಯವಾಗಿ ಕೇಳುವ ಗಾಳಿ ಹಾಗೂ ಗೋಚರತೆಯಂತಹ ಪ್ರಮಾಣೀಕೃತ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅವರಿಗೆ ಗೋಚರತೆ 3,000 ಮೀಟರ್ ಅಥವಾ ಮೂರು ಕಿಲೋಮೀಟರ್ ಎಂದು ತಿಳಿಸಲಾಗಿದ್ದು, ಇದು ಬಹುತೇಕ ಪ್ರಮಾಣೀಕೃತವಾಗಿದ್ದು, ಭೂಸ್ಪರ್ಶ ಪ್ರಯತ್ನಕ್ಕೆ ಸಾಕಷ್ಟಾಗಿದೆ ಎಂದು ವಾಯುಯಾನ ತಜ್ಞರು ತಿಳಿಸಿದ್ದಾರೆ.
ಬಳಿಕ, ವಿಮಾನವು ರನ್‌ವೇ–11 ಅನ್ನು ಸಮೀಪಿಸುತ್ತಿರುವುದಾಗಿ ಮಾಹಿತಿ ನೀಡಿದೆ.
ಇದರ ಬೆನ್ನಿಗೇ, ಭೂಸ್ಪರ್ಶ ಮಾಡುವ ರನ್‌ವೇ ಕಣ್ಣಿಗೆ ಕಾಣಿಸುತ್ತಿಲ್ಲ ಎಂದು ಪೈಲಟ್ ತಿಳಿಸಿದ್ದಾರೆ. ಪ್ರಥಮ ಭೂಸ್ಪರ್ಶ ರದ್ದುಗೊಂಡರೆ, ಪ್ರಮಾಣೀಕೃತ ಕಾರ್ಯಾಚರಣೆ ವಿಧಾನದಂತೆ ವಿಮಾನ ಸಂಪೂರ್ಣವಾಗಿ ನಿಲುಗಡೆಗೆ ಬರುವವರೆಗೂ ಆಕಾಶದಲ್ಲಿ ಸುತ್ತಾಡುವಂತೆ ಸೂಚಿಸಲಾಗಿದೆ.
ಆಕಾಶದಲ್ಲಿ ಸುತ್ತಾಡುವಂತೆ ಸೂಚಿಸಿದ ಹೊರತಾಗಿಯೂ, ಪೈಲಟ್ ರನ್‌ವೇ ಸಮೀಪಿಸುತ್ತಿರುವುದಾಗಿ ಕೊನೆಯ ಸಂದೇಶ ರವಾನಿಸಿದ್ದಾರೆ. ರನ್‌ವೇ ಈಗ ಕಾಣಿಸುತ್ತಿದೆ ಎಂದು ಖಚಿತಪಡಿಸಿದ ಬಳಿಕ, ಭೂಸ್ಪರ್ಶ ಮಾಡಲು ಅನುಮತಿ ನೀಡಲಾಗಿದೆ. ಅಂತಿಮವಾಗಿ ಬೆಳಗ್ಗೆ 8.34ಕ್ಕೆ ವಿಮಾನಕ್ಕೆ ಭೂಸ್ಪರ್ಶ ಅನುಮತಿ ನೀಡಲಾಗಿದೆ.
ಆದರೆ, ಈ ದೋಷಪೂರಿತ ಅವಧಿಯಲ್ಲಿ ಭೂಸ್ಪರ್ಶ ಅನುಮತಿಯ ಕುರಿತು ಯಾವುದೇ ರೀಡ್‌ಬ್ಯಾಕ್ ರವಾನಿಸಲಾಗಿಲ್ಲ.
►ನಿಶ್ಯಬ್ದವಾದ ವಿಮಾನ
ಬೆಳಗ್ಗೆ 8.43ಕ್ಕೆ ವಿಮಾನ ನಿಶ್ಯಬ್ದವಾಗಿದೆ ಎಂದು ವರದಿಯಾಗಿದ್ದು, ಅದು ಸ್ವಯಂಚಾಲಿತ ಅವಲಂಬನೆ ನಿಗಾವಣೆ (ADS-B) ಸಂಕೇತಗಳನ್ನು ರವಾನಿಸುವುದನ್ನು ಸ್ಥಗಿತಗೊಳಿಸಿದೆ. ಈ ಸಂಕೇತವು ನಿರಂತರವಾಗಿ ನೈಜ ಸಮಯದ ಸ್ಥಿತಿ, ಎತ್ತರ, ವೇಗ, ಭೂನಿಲ್ದಾಣಗಳು ಹಾಗೂ ಇತರ ಸುಸಜ್ಜಿತ ವಿಮಾನಗಳ ಗುರುತಿಸುವಿಕೆಯ ತರಂಗಾಂತರಗಳನ್ನು ಹೊಮ್ಮಿಸುತ್ತದೆ.
ಈ ಸಂಕೇತಗಳು ಬಾರಾಮತಿ ವಿಮಾನ ನಿಲ್ದಾಣದಿಂದ ಸುಮಾರು 20 ಕಿಮೀ ದೂರದಲ್ಲಿ ಸ್ಥಗಿತಗೊಂಡಿವೆ. ಈ ವೇಳೆ ವಿಮಾನವು ನೆಲಮಟ್ಟದಿಂದ ಒಂದು ಕಿಲೋಮೀಟರ್ ಎತ್ತರದಲ್ಲಿ ಹಾರಾಡುತ್ತಿದ್ದು, ಪ್ರತಿ ಗಂಟೆಗೆ 237 ಕಿಮೀ ವೇಗದಲ್ಲಿ ಸಾಗುತ್ತಿತ್ತು ಎಂದು ತಿಳಿಸಲಾಗಿದೆ.
►ಪತನ ಮತ್ತು ಸ್ಫೋಟ
ಬೆಳಗ್ಗೆ 8.46.02ಕ್ಕೆ ಮಹಾರಾಷ್ಟ್ರದ ಬಾರಾಮತಿ ವಿಮಾನ ನಿಲ್ದಾಣದಿಂದ ಕೂಗಳತೆ ದೂರದಲ್ಲಿ ಬೆಂಕಿಯುಂಡೆ ಹಾಗೂ ದಟ್ಟ ಹೊಗೆ ಹೊಮ್ಮುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತಕ್ಷಣವೇ ತುರ್ತು ಸೇವಾ ತಂಡಗಳು ಸ್ಥಳಕ್ಕೆ ದೌಡಾಯಿಸಿದ್ದು, ರನ್‌ವೇ ಎಡಭಾಗದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿವೆ.
ಸದ್ಯ ಈ ಅಪಘಾತದ ತನಿಖೆಯ ಹೊಣೆಯನ್ನು ವಿಮಾನ ಅಪಘಾತ ತನಿಖಾ ದಳ ತನ್ನ ಹೆಗಲಿಗೇರಿಸಿಕೊಂಡಿದೆ.
ಸೌಜನ್ಯ: ndtv.com