×
Ad

ದೇಶಾದ್ಯಂತ ಇರುವ ಬಂದರುಗಳ ಭದ್ರತೆಯ ಮೇಲೆ CISF ನಿಗಾ ವಹಿಸಲಿದೆ: ಅಮಿತ್ ಶಾ

Update: 2026-03-06 22:13 IST

ಅಮಿತ್ ಶಾ | Photo Credit : PTI 

ಮುಂಬೈ: ದೇಶಾದ್ಯಂತ ಇರುವ ವಿವಿಧ ಸಾಗರ ಬಂದರುಗಳ ಭದ್ರತೆಯ ಮೇಲ್ವಿಚಾರಣೆಯನ್ನು ಇನ್ನು ಮುಂದೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ನೋಡಿಕೊಳ್ಳಲಿದೆ ಎಂದು ಶುಕ್ರವಾರ ಅಮಿತ್ ಶಾ ಘೋಷಿಸಿದರು.

ಇಲ್ಲಿ ಆಯೋಜಿಸಲಾಗಿದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ 57ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಕೈಗಾರಿಕಾ ಭದ್ರತಾ ಪಡೆ 71 ವಿಮಾನ ನಿಲ್ದಾಣಗಳು, ಸಂಸತ್ ಸಂಕೀರ್ಣ ಹಾಗೂ ಗುಜರಾತ್‌ನ ಕೆವಾಡಿಯಾ ಬಳಿ ಇರುವ ಐಕ್ಯತೆಯ ಪ್ರತಿಮೆ ಸೇರಿದಂತೆ 361 ಮಹತ್ವದ ಸಂಸ್ಥೆಗಳನ್ನು ಈಗಾಗಲೇ ರಕ್ಷಿಸುತ್ತಿದೆ ಎಂದು ಹೇಳಿದರು.

“ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಇಂತಹ ವಿಭಿನ್ನ ಸವಾಲುಗಳನ್ನು ಕೈಗೆತ್ತಿಕೊಳ್ಳಲಿದೆ. ನೀವು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಭವ್ಯ ಸ್ಮಾರಕವನ್ನು ರಕ್ಷಿಸುತ್ತಿದ್ದೀರಿ. ನೀವು ನಮ್ಮ ದೇಶದ ಪ್ರಜಾಪ್ರಭುತ್ವದ ಬೃಹತ್ ಪಂಚಾಯಿತಿಯಾದ ಸಂಸತ್ ಸಂಕೀರ್ಣವನ್ನು ರಕ್ಷಿಸುತ್ತಿದ್ದೀರಿ. ಹಾಗೆಯೇ ಬೇರೆಡೆ ಅಣೆಕಟ್ಟುಗಳು ಹಾಗೂ ಮಹತ್ವದ ರೈಲ್ವೆ ಸಂಸ್ಥೆಗಳನ್ನು ರಕ್ಷಿಸುತ್ತಿದ್ದೀರಿ” ಎಂದು ಅವರು ಶ್ಲಾಘಿಸಿದರು.

ಈ ಸಾಂಸ್ಥಿಕ ಪಾತ್ರಗಳೊಂದಿಗೆ ದೇಶದ ಬಂದರುಗಳನ್ನು ರಕ್ಷಿಸುವ ಹೊಣೆಗಾರಿಕೆಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯನ್ನು ಸೇರ್ಪಡೆ ಮಾಡಲು ಸರ್ಕಾರ ಕೆಲಸ ಮಾಡಿದೆ ಎಂದು ಹೇಳುವ ಮೂಲಕ ಸಾಗರ ಹಾಗೂ ವಾಯು ರಕ್ಷಣೆಯಲ್ಲಿ ಆಗಿರುವ ವ್ಯೂಹಾತ್ಮಕ ಸ್ಥಿತ್ಯಂತರದ ಕುರಿತು ಅವರು ವಿವರಿಸಿದರು.

ಇದೇ ವೇಳೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯನ್ನು ಡ್ರೋನ್ ಭದ್ರತೆಯ ನೋಡಲ್ ಏಜೆನ್ಸಿಯಾಗಿ ನಿಯೋಜಿಸಲಾಗಿದೆ ಎಂದು ಘೋಷಿಸಿದ ಅಮಿತ್ ಶಾ, ಈ ಉದ್ದೇಶಕ್ಕಾಗಿ ಹೊಸ ಲಂಬ ವ್ಯವಸ್ಥೆಯನ್ನು ಸೃಷ್ಟಿಸಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ ಎಂದೂ ಪ್ರಕಟಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News