ಗಲ್ಫ್ ಸಂಘರ್ಷದ ವರದಿ | ನ್ಯೂಸ್ ಚಾನಲ್ ಗಳಲ್ಲಿ ‘ಅನಗತ್ಯ ಯುದ್ಧೋನ್ಮಾದ’: ನಾಲ್ಕು ವಾರ TRP ಸ್ಥಗಿತಕ್ಕೆ ಕೇಂದ್ರ ಆದೇಶ
ಸಾಂದರ್ಭಿಕ ಚಿತ್ರ | Photo Credit : freepik
ಹೊಸದಿಲ್ಲಿ: ಸುದ್ದಿ ವಾಹಿನಿಗಳಲ್ಲಿ ಇಸ್ರೇಲ್–ಇರಾನ್ ನಡುವಿನ ನಡೆಯುತ್ತಿರುವ ಸಂಘರ್ಷದ ವರದಿ ಮಾಡುವ ರೀತಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಸುದ್ದಿ ವಾಹಿನಿಗಳ ಟೆಲಿವಿಶನ್ ರೇಟಿಂಗ್ ಪಾಯಿಂಟ್ ಗಳ (TRP) ಪ್ರಕಟಣೆಯನ್ನು ನಾಲ್ಕು ವಾರಗಳ ಕಾಲ ಸ್ಥಗಿತಗೊಳಿಸಲು BARCಗೆ ನಿರ್ದೇಶನ ನೀಡಿದೆ.
ಶುಕ್ರವಾರ ಹೊರಡಿಸಿದ ಆದೇಶವು ತಕ್ಷಣದಿಂದ ಜಾರಿಗೆ ಬಂದಿದ್ದು, ನಾಲ್ಕು ವಾರಗಳವರೆಗೆ ಅಥವಾ ಮುಂದಿನ ನಿರ್ದೇಶನ ಹೊರಬರುವವರೆಗೆ ಜಾರಿಯಲ್ಲಿರಲಿದೆ ಎಂದು ಸಚಿವಾಲಯ ತಿಳಿಸಿದೆ.
ಕೆಲವು ಸುದ್ದಿ ವಾಹಿನಿಗಳು ‘ಅನಗತ್ಯ ಸಂವೇದನೆ’ ಮತ್ತು ಊಹಾತ್ಮಕ ವಿಷಯಗಳನ್ನು ಪ್ರದರ್ಶಿಸುತ್ತಿವೆ ಎಂದು ಸಚಿವಾಲಯ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಇಂತಹ ವರದಿಗಳು ಸಾರ್ವಜನಿಕರಲ್ಲಿ, ವಿಶೇಷವಾಗಿ ಯುದ್ಧ ದಿಂದ ಸಂತ್ರಸ್ತ ಪ್ರದೇಶಗಳಲ್ಲಿ ವಾಸಿಸುವವರಲ್ಲಿ ಅಥವಾ ಅಲ್ಲಿ ಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು ಹೊಂದಿರುವವರಲ್ಲಿ ಆತಂಕ ಮತ್ತು ಭಯವನ್ನು ಉಂಟುಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಈ ಸಂಬಂಧ ಸಚಿವಾಲಯ ಯಾವುದೇ ನಿರ್ದಿಷ್ಟ ಸುದ್ದಿ ವಾಹಿನಿಯ ಹೆಸರನ್ನು ಉಲ್ಲೇಖಿಸಿಲ್ಲ.
‘ಸಾರ್ವಜನಿಕ ಹಿತಾಸಕ್ತಿಗಾಗಿ’ ಹೊರಡಿಸಲಾದ ಈ ಆದೇಶದಲ್ಲಿ, ನಾಲ್ಕು ವಾರಗಳ ಅವಧಿ ಮುಗಿಯುವ ಮೊದಲು ಅಮಾನತನ್ನು ತೆಗೆದುಹಾಕಲು ಅನುಸರಿಸಬಹುದಾದ ಯಾವುದೇ ಪರಿಶೀಲನಾ ಕ್ರಮ ಅಥವಾ ಮಾನದಂಡಗಳನ್ನು ನಿರ್ದಿಷ್ಟಪಡಿಸಲಾಗಿಲ್ಲ.
ಈ ಕ್ರಮಕ್ಕೆ 2014ರ ಜನವರಿ 16ರಂದು ಹೊರಡಿಸಲಾದ ಭಾರತದಲ್ಲಿನ ಟೆಲಿವಿಶನ್ ರೇಟಿಂಗ್ ಏಜೆನ್ಸಿಗಳಿಗೆ ಸಂಬಂಧಿಸಿದ ನೀತಿ ಮಾರ್ಗಸೂಚಿಗಳ ಷರತ್ತು 24.2 ಅನ್ನು ಆಧಾರವಾಗಿ ಬಳಸಲಾಗಿದೆ. ಅದರ ಪ್ರಕಾರ, BARC ಸಂಸ್ಥೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಕಾಲಕಾಲಕ್ಕೆ ಹೊರಡಿಸುವ ಆದೇಶಗಳು, ನಿಯಮಗಳು, ಮಾರ್ಗಸೂಚಿಗಳು ಮತ್ತು ನಿರ್ದೇಶನಗಳನ್ನು ಪಾಲಿಸಬೇಕಾಗುತ್ತದೆ.
TRPಗಳು ಟೆಲಿವಿಶನ್ ವೀಕ್ಷಕರ ಪ್ರಮಾಣವನ್ನು ಅಳೆಯಲು ಹಾಗೂ ಜಾಹೀರಾತು ದರಗಳನ್ನು ನಿರ್ಧರಿಸಲು ಬಳಸುವ ಪ್ರಮುಖ ಮಾನದಂಡವಾಗಿದೆ. ಆದ್ದರಿಂದ TRP ವರದಿ ಪ್ರಕಟಣೆಯನ್ನು ಸ್ಥಗಿತಗೊಳಿಸುವುದು ನ್ಯೂಸ್ ಚಾನಲ್ ಗಳ ವಾಣಿಜ್ಯ ಸ್ಥಾನಮಾನಕ್ಕೂ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಜಾಹೀರಾತುಗಳನ್ನು ಆಕರ್ಷಿಸಲು ಮತ್ತು ಸ್ಪರ್ಧಿ ವಾಹಿನಿಗಳ ವಿರುದ್ಧ ಪ್ರೇಕ್ಷಕರ ಪಾಲನ್ನು ತೋರಿಸಲು ಪ್ರಸಾರ ಸಂಸ್ಥೆಗಳು TRP ಅಂಕಿಅಂಶಗಳನ್ನು ಪ್ರಮುಖ ಸಾಧನವಾಗಿ ಬಳಸುತ್ತವೆ.
2020ರಲ್ಲಿ ಮುಂಬೈ ಪೊಲೀಸರು ನಡೆಸಿದ ತನಿಖೆಯಲ್ಲಿ ಕೆಲವು ಪ್ರಸಾರಕರ ವಿರುದ್ಧ ಡೇಟಾ ತಿರುಚಿದ ಆರೋಪಗಳು ಕೇಳಿಬಂದ ಸಂದರ್ಭದಲ್ಲೂ ಕೇಂದ್ರ ಸರ್ಕಾರ ಇದೇ ರೀತಿಯಲ್ಲಿ ಕೆಲವು ವಾರಗಳ ಕಾಲ ಸುದ್ದಿ ವಾಹಿನಿಗಳ TRP ಪ್ರಕಟಣೆಯನ್ನು ಸ್ಥಗಿತಗೊಳಿಸಿತ್ತು.
2010ರಲ್ಲಿ ಟೆಲಿವಿಶನ್ ಪ್ರಸಾರಕ ಉದ್ಯಮದ ಆಶ್ರಯದಲ್ಲಿ ಸ್ಥಾಪನೆಯಾದ BARC, ಭಾರತದಲ್ಲಿ ಟೆಲಿವಿಶನ್ ಪ್ರೇಕ್ಷಕರ ಡೇಟಾವನ್ನು ಅಳೆಯುವ ಮತ್ತು ಪ್ರಕಟಿಸುವ ಏಕೈಕ ಸಂಸ್ಥೆಯಾಗಿದೆ. ಇದರ ರೇಟಿಂಗ್‌ಗಳ ಆಧಾರದಲ್ಲೇ ಉದ್ಯಮದಲ್ಲಿ ಬಹುಕೋಟಿ ಮೌಲ್ಯದ ಜಾಹೀರಾತು ಒಪ್ಪಂದಗಳು ನಿರ್ಧಾರವಾಗುತ್ತವೆ.
ಇಸ್ರೇಲ್ ಮತ್ತು ಇರಾನ್ ನಡುವಿನ ಸರಣಿ ದಾಳಿ ಹಾಗೂ ಪ್ರತಿದಾಳಿಗಳ ಬಳಿಕ ಸಂಘರ್ಷ ತೀವ್ರಗೊಂಡಿದ್ದು, ಭಾರತೀಯ ಸುದ್ದಿ ಪ್ರಸಾರದಲ್ಲಿ ಈ ವಿಷಯ ಪ್ರಾಬಲ್ಯ ಸಾಧಿಸಿದೆ. ಹಲವು ವಾಹಿನಿಗಳು ನಿರಂತರ ಪ್ರಸಾರ ನಡೆಸುತ್ತಿವೆ. ಇಸ್ರೇಲ್ ಮತ್ತು ಗಲ್ಫ್ ಪ್ರದೇಶದ ಕೆಲ ಭಾಗಗಳಲ್ಲಿ ಭಾರತವು ಗಮನಾರ್ಹ ವಲಸಿಗರನ್ನು ಹೊಂದಿರುವುದರಿಂದ ಈ ಬೆಳವಣಿಗೆಗಳು ಮಹತ್ವ ಪಡೆದಿವೆ.
ಸೌಜನ್ಯ: ThePrint.in