×
Ad

ಹೋಳಿ ಸಂಭ್ರಮಾಚರಣೆ ವೇಳೆ ವ್ಯಕ್ತಿ ಸಾವು: ದೆಹಲಿಯಲ್ಲಿ ಭುಗಿಲೆದ್ದ ಹಿಂಸಾಚಾರ

Update: 2026-03-07 07:28 IST

PC: screengrab/ x.com/ANI

ಹೊಸದಿಲ್ಲಿ: ನೈರುತ್ಯ ದೆಹಲಿಯ ಉತ್ತಮ್ ನಗರದಲ್ಲಿ ಮಾರ್ಚ್ 4ರಂದು 26 ವರ್ಷದ ವ್ಯಕ್ತಿ ಹೋಳಿ ಸಂಭ್ರಮಾಚರಣೆ ವೇಳೆ ಜೀವ ಕಳೆದುಕೊಂಡ ಹಿನ್ನೆಲೆಯಲ್ಲಿ  ಹಿಂಸಾಚಾರ ಭುಗಿಲೆದ್ದಿದೆ. ಹೋಳಿ ರಂಗಿನಾಟದ ವೇಳೆ ನೆರೆಯವರ ಜತೆ ಆರಂಭವಾದ ವಾಗ್ವಾದ ದಿಢೀರನೇ ಉಲ್ಬಣಿಸಿ ಗುಂಪುಘರ್ಷಣೆಗೆ ಕಾರಣವಾಗಿದೆ. 

ತರುಣ್ (26) ಘಟನೆಯಲ್ಲಿ ಮೃತಪಟ್ಟ ಯುವಕ.  ಸಾವಿನ ಶೋಕದಲ್ಲಿ ಕುಟುಂಬ ಮುಳುಗಿದ್ದರೆ, ಬಜರಂಗದಳ, ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ ಶುಕ್ರವಾರ ನಡೆದ ಬೃಹತ್ ಪ್ರತಿಭಟನೆ ವ್ಯಾಪಕ ಹಿಂಸಾಕೃತ್ಯಗಳಿಗೆ ಸಾಕ್ಷಿಯಾಯಿತು ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಒಂದು ಕಾರು ಹಾಗೂ ಮೋಟರ್ ಸೈಕಲ್ ಗೆ ಉದ್ರಿಕ್ತ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ.

ಬಜರಂಗದಳ ಮತ್ತು ವಿಎಚ್‌ಪಿ ಕಾರ್ಯಕರ್ತರು ಉತ್ತಮ್ ನಗರ ಪೂರ್ವ ಮೆಟ್ರೋ ಸ್ಟೇಷನ್ ಬಳಿ ಪ್ರತಿಭಟನೆ ನಡೆಸಿದರು. ತರುಣ್ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಉಭಯ ಸಂಘಟನೆಗಳು ಆಗ್ರಹಿಸಿವೆ.

ಬುಧವಾರ ಹೋಳಿ ಸಂಭ್ರಮಾಚರಣೆ ವೇಳೆ ಎರಡು ಗುಂಪುಗಳ ನಡುವಿನ ಸಂಘರ್ಷದಲ್ಲಿ ಉಂಟಾದ ಗಾಯದಿಂದ ತರುಣ್ ಮೃತಪಟ್ಟಿದ್ದರು. 11 ವರ್ಷದ ಬಾಲಕಿ ಮನೆಯ ಟೆರೇಸ್ ನಲ್ಲಿ ಬಣ್ಣದ ಆಟವಾಡುತ್ತಾ ಬಣ್ಣದ ನೀರು ತುಂಬಿದ್ದ ಬಲೂನ್ ಗಳನ್ನು ಸಂಬಂಧಿಕರತ್ತ ಎಸೆದಿದ್ದಳು ಎಂದು ಮೃತ ವ್ಯಕ್ತಿಯ ಕುಟುಂಬ ಸದಸ್ಯರು ಹೇಳಿದ್ದಾರೆ.

ಆದರೆ ಬಣ್ಣದ ನೀರು ತುಂಬಿದ್ದ ಬಲೂನ್ ಬೇರೆ ಮಹಿಳೆಯ ಮೇಲೆ ಬಿದ್ದಿದ್ದು, ಎರಡು ಗುಂಪುಗಳ ನಡುವಿನ ಘರ್ಷಣೆಗೆ ಕಾರಣವಾಯಿತು. ವಾಕ್ಸಮರ ದಿಢೀರನೇ ಭೀಕರ ಸಂಘರ್ಷವಾಗಿ ಮಾರ್ಪಟ್ಟು ಎರಡೂ ಕಡೆಗಳ ಹಲವು ಮಂದಿಗೆ ಗಾಯಗಳಾಗಿದ್ದವು. ತೀವ್ರವಾಗಿ ಗಾಯಗೊಂಡಿದ್ದ ತರುಣ್ ಜೀವ ಕಳೆದುಕೊಂಡರು ಎಂದು ಪೊಲೀಸರು ಹೇಳಿದ್ದಾರೆ.




Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News