Uttar Pradesh | ತರಗತಿ ಕೊಠಡಿಯಲ್ಲೇ ಶಾಲಾ ಮಕ್ಕಳಿಂದ ಬಾಡಿ ಮಸಾಜ್ ಮಾಡಿಸಿಕೊಂಡ ಮುಖ್ಯೋಪಾಧ್ಯಾಯಿನಿ: ವಿಡಿಯೊ ವೈರಲ್
Screengrab : X
ಚಿತ್ರಕೂಟ್: ಉತ್ತರ ಪ್ರದೇಶದ ಚಿತ್ರಕೂಟ್ ಜಿಲ್ಲೆಯ ಪ್ರಾಥಮಿಕ ಶಾಲೆಯೊಂದರಲ್ಲಿ ಮುಖ್ಯೋಪಾಧ್ಯಾಯಿನಿಯೊಬ್ಬರು ತರಗತಿಯ ಕೊಠಡಿಯಲ್ಲೇ ಶಾಲಾ ವಿದ್ಯಾರ್ಥಿಗಳಿಂದ ಬಾಡಿ ಮಸಾಜ್ ಮಾಡಿಸಿಕೊಂಡಿದ್ದು, ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದರ ಬೆನ್ನಿಗೇ ಶಿಕ್ಷಣ ವ್ಯವಸ್ಥೆಯಲ್ಲಿನ ವರ್ತನೆಯ ಬಗ್ಗೆ ಗಂಭೀರ ಕಳವಳ ವ್ಯಕ್ತವಾಗಿದೆ.
ನಗರಸಭೆ ಒಡೆತನದ ಶಾಲೆಯೊಂದರ ಮುಖ್ಯೋಪಾಧ್ಯಾಯಿನಿಯೊಬ್ಬರು ನೆಲದ ಮೇಲೆ ಮಲಗಿ ಎಳೆಯ ಶಾಲಾ ವಿದ್ಯಾರ್ಥಿಗಳಿಂದ ಬಾಡಿ ಮಸಾಜ್ ಮಾಡಿಸಿಕೊಳ್ಳುತ್ತಿರುವುದು ಹಾಗೂ ಈ ವೇಳೆ ಮೊಬೈಲ್ ಫೋನ್ ಬಳಸುತ್ತಿರುವುದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊ ತುಣುಕಿನಲ್ಲಿ ಸೆರೆಯಾಗಿದೆ. ಈ ಘಟನೆ ಜಿಲ್ಲಾ ಮುಖ್ಯ ಕಚೇರಿಯ ಬಿಆರ್‌ಸಿ ಕ್ಯಾಂಪಸ್‌ನಲ್ಲಿರುವ ನಯಾ ಬಝಾರ್ ಪಾರ್ಟ್-1ನ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಮುಖ್ಯೋಪಾಧ್ಯಾಯಿನಿಗೆ ಮಸಾಜ್ ಮಾಡುವಾಗ ಹಲವಾರು ಎಳೆಯ ಬಾಲಕಿಯರು ಆಕೆಯನ್ನು ಸುತ್ತುವರಿದಿರುವುದನ್ನು ಈ ವಿಡಿಯೊದಲ್ಲಿ ನೋಡಬಹುದಾಗಿದೆ. ಈ ವಿಡಿಯೊ ತುಣುಕಿಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಹಾಗೂ ಸ್ಥಳೀಯ ನಿವಾಸಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಶಾಲಾ ಮಕ್ಕಳ ಸುರಕ್ಷತೆ ಮತ್ತು ಘನತೆಯನ್ನು ಖಾತರಿಗೊಳಿಸಬೇಕಾದ ಶಾಲಾ ವಾತಾವರಣದಲ್ಲಿ ಇಂತಹ ಘಟನೆ ನಡೆದಿರುವುದನ್ನು ಅವರೆಲ್ಲ ಪ್ರಶ್ನಿಸಿದ್ದಾರೆ.
ವಲಯ ಶಿಕ್ಷಣಾಧಿಕಾರಿ (ಬಿಇಒ) ಅತುಲ್ ದತ್ ಕಾರ್ಯನಿರ್ವಹಿಸುವ ಕಚೇರಿ ಇರುವ ಆವರಣದಲ್ಲೇ ಈ ಶಾಲೆಯೂ ಇದ್ದು, ಇದರಿಂದ ಆಡಳಿತಾತ್ಮಕ ಉಪೇಕ್ಷೆಯ ಬಗ್ಗೆ ಮತ್ತಷ್ಟು ಕಳವಳ ವ್ಯಕ್ತವಾಗಿದೆ. ಸೂಕ್ತ ನಿಗಾವಣೆ ಇದ್ದಿದ್ದರೆ ಇಂತಹ ಘಟನೆಗಳು ಗಮನಕ್ಕೆ ಬಾರದೆ ಹೋಗುತ್ತಿವೆಯೇ ಎಂದು ಟೀಕಾಕಾರರು ಪ್ರಶ್ನಿಸಿದ್ದಾರೆ.
ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬೆನ್ನಿಗೇ, ಈ ಘಟನೆಯ ಬಗ್ಗೆ ನಮಗೆ ಅರಿವಿರಲಿಲ್ಲ. ಈ ವಿಷಯ ನಮ್ಮ ಗಮನಕ್ಕೆ ಬಂದ ನಂತರ ಈ ಆರೋಪಗಳ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಜಿಲ್ಲಾ ಪ್ರಾಥಮಿಕ ಶಿಕ್ಷಣಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ಈ ಘಟನೆಯ ಕುರಿತು ವಿಸ್ತೃತ ತನಿಖೆ ನಡೆಸಲಾಗುವುದು ಹಾಗೂ ಆರೋಪಗಳು ನಿಜವೆಂದು ದೃಢಪಟ್ಟರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಈ ನಡುವೆ ಈ ಘಟನೆಯ ಕುರಿತು ಸ್ಥಳೀಯ ನಿವಾಸಿಗಳು ಹಾಗೂ ಪೋಷಕರು ಟೀಕಾಪ್ರಹಾರ ನಡೆಸಿದ್ದು, ಈ ಕುರಿತು ನ್ಯಾಯಯುತ ಮತ್ತು ಪಾರದರ್ಶಕ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಶಾಲಾ ಸ್ಥಳಗಳು ವಿದ್ಯಾರ್ಥಿಗಳ ಪಾಲಿಗೆ ಸುರಕ್ಷಿತವಾಗಿ ಉಳಿಯುವಂತೆ ಹಾಗೂ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುವುದು ಅಧಿಕಾರಿಗಳು ಖಾತರಿಪಡಿಸಬೇಕು ಮತ್ತು ಅವರ ಶೈಕ್ಷಣಿಕ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಎಂದು ಹಲವರು ಆಗ್ರಹಿಸಿದ್ದಾರೆ.