ಜೈಲಿನಲ್ಲಿರುವ ಪಿಎಫ್‌ಐ ನಾಯಕ ಇ. ಅಬೂಬಕರ್ ಆರೋಗ್ಯ ಸ್ಥಿತಿ ಗಂಭೀರ, ಐಸಿಯುನಲ್ಲಿ ಚಿಕಿತ್ಸೆ; ವರದಿ
ಪಿಎಫ್ಐ ನಾಯಕ ಇ ಅಬೂಬಕರ್ (Photo credit: muslimmirror.com)
ಹೊಸದಿಲ್ಲಿ: ಸುಮಾರು ನಾಲ್ಕು ವರ್ಷಗಳಿಂದ ಜೈಲಿನಲ್ಲಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸ್ಥಾಪಕ ಅಧ್ಯಕ್ಷ ಎರಪ್ಪುಂಗಲ್ ಅಬೂಬಕರ್ ಅವರ ಆರೋಗ್ಯ ಹದಗೆಟ್ಟಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬುಧವಾರದಿಂದ ಅವರು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ ಎಂದು maktoobmedia.com ವರದಿ ಮಾಡಿದೆ.
ಓಸೊಫಾಗೋಫಾರಿಂಜಿಯಲ್ ಕಾರ್ಸಿನೋಮಾ ಶಸ್ತ್ರಚಿಕಿತ್ಸೆಯ ನಂತರ ದೀರ್ಘ ವಿಶ್ರಾಂತಿಯಲ್ಲಿದ್ದ ಹಿರಿಯ ಮುಸ್ಲಿಂ ನಾಯಕ ಅಬೂಬಕರ್ ಅವರನ್ನು 2022ರ ಸೆಪ್ಟೆಂಬರ್ 22ರಂದು ಮುಂಜಾನೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅವರ ಮನೆಯಿಂದ ಬಂಧಿಸಿತ್ತು.
ಅವರ ಆರೋಗ್ಯದ ಕುರಿತು ಮಾಹಿತಿ ನೀಡಿದ ಮಗಳು ಲೀನಾ ಥಬಾಸುಮ್, ಕಳೆದ ಎರಡು ದಿನಗಳಿಂದ ಅವರ ಸ್ಥಿತಿಯಲ್ಲಿ ಯಾವುದೇ ಗಮನಾರ್ಹ ಸುಧಾರಣೆ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ.
ಕುಟುಂಬದ ಪ್ರಕಾರ, ಅಬೂಬಕರ್ ಅವರು ಎದೆ ಸೋಂಕು ಹಾಗೂ ತೀವ್ರ ಕೆಮ್ಮಿನಿಂದ ಬಳಲುತ್ತಿದ್ದಾರೆ. ಜೊತೆಗೆ ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಏರಿಳಿತಗಳು ಕಂಡುಬರುತ್ತಿವೆ. ಅವರ ರಕ್ತದಲ್ಲಿನ ಆಮ್ಲಜನಕದ ಮಟ್ಟವೂ ಕುಸಿದಿದ್ದು, ಆರೋಗ್ಯದ ಬಗ್ಗೆ ಕುಟುಂಬದವರಲ್ಲಿ ಆತಂಕ ಮೂಡಿಸಿದೆ.
ಜೈಲು ಅಧಿಕಾರಿಗಳು ಅವರನ್ನು ಹೊಸದಿಲ್ಲಿಯ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಿದ್ದರು. ಅಬೂಬಕರ್ ಅವರ ಅಳಿಯ ಮುನೀಬ್ ಟಿ.ಟಿ. ಅವರ ಹೇಳಿಕೆಯಂತೆ, ಆರೋಗ್ಯ ಸ್ಥಿತಿ ಗಂಭೀರವಾಗಿದ್ದರೂ ಅವರನ್ನು ಶುಕ್ರವಾರ ಐಸಿಯುನಿಂದ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಈ ಬೆಳವಣಿಗೆ ಕುಟುಂಬದಲ್ಲಿ ಮತ್ತಷ್ಟು ಆತಂಕ ಉಂಟುಮಾಡಿದೆ.
ಅವರ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವೈದ್ಯಕೀಯ ಜಾಮೀನು ಕೋರಿ ನ್ಯಾಯಾಲಯವನ್ನು ಸಂಪರ್ಕಿಸಲು ಕುಟುಂಬ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
74 ವರ್ಷದ ಅಬೂಬಕರ್ ಅವರು ವಿಚಾರಣಾಧೀನ ಕೈದಿಯಾಗಿದ್ದು, ಇನ್ನೂ ವಿಚಾರಣೆ ಪ್ರಾರಂಭವಾಗಿಲ್ಲ. ತನಿಖೆ ಮುಂದುವರಿದಿರುವುದಾಗಿ ವರದಿಯಾಗಿದೆ. ತನಿಖಾ ಸಂಸ್ಥೆಯ ಪ್ರಕಾರ, “ಇಲ್ಲಿಯವರೆಗೆ ನಡೆದ ಅತಿದೊಡ್ಡ ತನಿಖಾ ಪ್ರಕ್ರಿಯೆ” ಎಂದು ಹೇಳಲಾದ ಕಾರ್ಯಾಚರಣೆಯಲ್ಲಿ ಅದೇ ದಿನ 10 ರಾಜ್ಯಗಳಲ್ಲಿ ಸುಮಾರು 100 ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಲಾಗಿತ್ತು ಅಥವಾ ವಶಕ್ಕೆ ಪಡೆಯಲಾಗಿತ್ತು.
ಅಬೂಬಕರ್ ಅವರ ಬಂಧನದ ಒಂದು ವಾರದ ನಂತರ ಭಾರತ ಸರ್ಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಅದರ ಹಲವಾರು ಅಂಗಸಂಸ್ಥೆಗಳನ್ನು ನಿಷೇಧಿಸಿತು. ಇದರಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ರಿಹ್ಯಾಬ್ ಇಂಡಿಯಾ ಫೌಂಡೇಶನ್, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್, ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ಸ್, ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಹಾಗೂ ರಿಹ್ಯಾಬ್ ಫೌಂಡೇಶನ್ ಕೇರಳ ಸೇರಿವೆ.
ದಿಲ್ಲಿ ಹೈಕೋರ್ಟ್ ಹಾಗೂ ಭಾರತದ ಸುಪ್ರೀಂ ಕೋರ್ಟ್ ಎರಡೂ ಈ ಹಿಂದೆ ಅಬೂಬಕರ್ ಅವರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿವೆ.
ಬಂಧನದಲ್ಲಿರುವ ಅವಧಿಯಲ್ಲಿ ಅವರ ಆರೋಗ್ಯ ದಿನೇ ದಿನೇ ಹದಗೆಡುತ್ತಿದೆ ಎಂದು ಕುಟುಂಬ ಹೇಳಿದೆ. “ಅವರು ದಿನದಿಂದ ದಿನಕ್ಕೆ ದುರ್ಬಲರಾಗುತ್ತಿದ್ದಾರೆ. ಅವರ ಆರೋಗ್ಯಕ್ಕೆ ತಕ್ಕ ಆಹಾರ ಲಭ್ಯವಾಗದೆ ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ಸ್ಮರಣಶಕ್ತಿ ನಷ್ಟದ ಸಮಸ್ಯೆಯೂ ಕಾಣಿಸುತ್ತಿದೆ” ಎಂದು ಅವರ ಪತ್ನಿ ಅಮಿನಾ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಅವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಲು ಏಮ್ಸ್ ನಿಂದ 10 ವೈದ್ಯರ ವೈದ್ಯಕೀಯ ಮಂಡಳಿಯನ್ನು ರಚಿಸಲಾಗಿತ್ತು. ಆದರೆ ಮಂಡಳಿ ಸಲ್ಲಿಸಿದ ವರದಿ ಅವರ ನಿಜವಾದ ಆರೋಗ್ಯ ಸ್ಥಿತಿಯನ್ನು ಪ್ರತಿಬಿಂಬಿಸುವುದಿಲ್ಲ ಎಂದು ಕುಟುಂಬ ಆರೋಪಿಸಿದೆ.
ಈ ವರದಿಯನ್ನೇ ಆಧಾರವನ್ನಾಗಿ ಮಾಡಿಕೊಂಡು ಸುಪ್ರೀಂ ಕೋರ್ಟ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ ಎಂದು ಕುಟುಂಬ ಹೇಳಿದೆ. ಬಳಿಕ ದೆಹಲಿಯ ಏಮ್ಸ್ ಆಸ್ಪತ್ರೆಯ ಮೇಲಿನ ವಿಶ್ವಾಸಾರ್ಹತೆಯ ಕೊರತೆಯನ್ನು ವ್ಯಕ್ತಪಡಿಸಿದ ಅಬೂಬಕರ್ ಅವರು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ನೀಡುವಂತೆ ಜೈಲು ಅಧಿಕಾರಿಗಳಿಗೆ ಪತ್ರ ಬರೆದು ಕೆಳ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು ಎಂದು ಕುಟುಂಬ ತಿಳಿಸಿದೆ.
2020ರಲ್ಲಿ ಅಬೂಬಕರ್ ಅವರು ಕ್ಯಾನ್ಸರ್ ಗೆ ಸಂಬಂಧಿಸಿದಂತೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆ ಬಳಿಕ ಅವರು ಹೆಚ್ಚಾಗಿ ಮನೆಯಲ್ಲಿಯೇ ಕುಟುಂಬ ಸದಸ್ಯರ ತೀವ್ರ ನಿಗಾದಲ್ಲಿದ್ದರು ಎನ್ನಲಾಗಿದೆ.
ಕುಟುಂಬದ ಪ್ರಕಾರ, ಅವರಿಗೆ ರೆಟಿನೋಪಥಿಯೊಂದಿಗೆ ಡಯಾಬಿಟಿಕ್ ಮೆಲ್ಲಿಟಸ್, ಅಧಿಕ ರಕ್ತದೊತ್ತಡ, ಇಡಿಯೋಪಥಿಕ್ ಪಾರ್ಕಿನ್ಸನ್ ಕಾಯಿಲೆ, Coronary Artery Disease, ಶಸ್ತ್ರಚಿಕಿತ್ಸೆಯ ನಂತರದ ಅನ್ನನಾಳ ಕ್ಯಾನ್ಸರ್ ಹಾಗೂ ಬೆನಿಗ್ನ್ ಪ್ರಾಸ್ಟೇಟ್ ಹೈಪರ್ಪ್ಲಾಸಿಯಾ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿವೆ.