×
Ad

ಚುನಾವಣೆ ಹೊಸ್ತಿಲಲ್ಲಿ ತಮಿಳುನಾಡು ಬಿಜೆಪಿಗೆ ಆಘಾತ; ಜವಾಬ್ದಾರಿಯಿಂದ ಹಿಂದೆ ಸರಿದ ಅಣ್ಣಾಮಲೈ

6 ಕ್ಷೇತ್ರಗಳಿಗೆ ಸೀಮಿತವಾಗಿ ಉಸ್ತುವಾರಿ ನೀಡಿರುವುದಕ್ಕೆ ಅಸಮಾಧಾನ?

Update: 2026-02-03 21:11 IST

ಅಣ್ಣಾಮಲೈ | Photo Credit : PTI

ಚೆನ್ನೈ/ಕೊಯಮತ್ತೂರು, ಫೆ. 3: ತಮಿಳುನಾಡಿನ 6 ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ನೇಮಕಗೊಂಡ ಕೆಲವೇ ದಿನಗಳಲ್ಲಿ ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ. ಈ ಬೆಳವಣಿಗೆ ರಾಜ್ಯ ಬಿಜೆಪಿ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ತಂದೆಯ ಅನಾರೋಗ್ಯವನ್ನು ಕಾರಣವಾಗಿ ಉಲ್ಲೇಖಿಸಿರುವ ಅಣ್ಣಾಮಲೈ, ಕುಟುಂಬದ ಆರೈಕೆಗೆ ಆದ್ಯತೆ ನೀಡಬೇಕಿರುವುದರಿಂದ ಚುನಾವಣಾ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ಪಕ್ಷದ ಹೈಕಮಾಂಡ್‌ಗೆ ತಿಳಿಸಿದ್ದಾರೆ.

“ನನ್ನ ತಂದೆ ಅಸ್ವಸ್ಥರಾಗಿದ್ದಾರೆ. ಅವರನ್ನು ನೋಡಿಕೊಳ್ಳುವುದು ನನ್ನ ಮೊದಲ ಆದ್ಯತೆ. ಆದ್ದರಿಂದ ನೀಡಿದ ಜವಾಬ್ದಾರಿಗಳನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ. ಮುಂದಿನ ದಿನಗಳಲ್ಲಿ ನಾನು ಕೊಯಮತ್ತೂರಿನಲ್ಲಿ ಹೆಚ್ಚಾಗಿ ಇರಬೇಕಾಗುತ್ತದೆ,” ಎಂದು ಅವರು ಹೇಳಿದ್ದಾರೆ.

ಆದರೆ, ಕರ್ನಾಟಕ ಕೇಡರ್‌ನ ಮಾಜಿ ಐಪಿಎಸ್ ಅಧಿಕಾರಿ ಆಗಿರುವ ಅಣ್ಣಾಮಲೈ ಅವರನ್ನು ಕೇವಲ ಆರು ಕ್ಷೇತ್ರಗಳಿಗೆ ಮಾತ್ರ ಸೀಮಿತಗೊಳಿಸಿರುವುದಕ್ಕೆ ರಾಜ್ಯ ನಾಯಕತ್ವದ ವಿರುದ್ಧ ಅಸಮಾಧಾನ ಹೊಂದಿದ್ದಾರೆ ಎಂಬ ಮಾತುಗಳು ಪಕ್ಷದ ಆಂತರಿಕ ವಲಯದಲ್ಲಿ ಕೇಳಿಬರುತ್ತಿವೆ.

ಎಐಎಡಿಎಂಕೆ ಜೊತೆ ಮೈತ್ರಿ ಸಾಧಿಸುವ ಉದ್ದೇಶದಿಂದಲೇ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿತ್ತು ಎನ್ನಲಾಗುತ್ತಿದ್ದು, ನಂತರ ಪಕ್ಷದ ಕಾರ್ಯಕ್ರಮಗಳಲ್ಲಿ ಅವರಿಗೆ ತಕ್ಕ ಪ್ರಾಮುಖ್ಯತೆ ದೊರೆತಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಡಿಸೆಂಬರ್‌ ನಲ್ಲಿ ಬಿಜೆಪಿ ಕೇಂದ್ರ ನಾಯಕರು ಎಎಂಎಂಕೆ ನಾಯಕ ಟಿಟಿವಿ ದಿನಕರನ್ ಅವರನ್ನು ಎನ್‌ಡಿಎ ಒಕ್ಕೂಟಕ್ಕೆ ಮರಳಿ ತರಲು ಚಿಂತನೆ ನಡೆಸಿದ್ದ ಸಂದರ್ಭದಲ್ಲಿ ಕೂಡ ಅಣ್ಣಾಮಲೈ ರಾಜ್ಯ ಘಟಕದ ಹಲವಾರು ಕಾರ್ಯಕ್ರಮಗಳಿಂದ ದೂರ ಉಳಿದಿದ್ದರು ಎನ್ನಲಾಗಿದೆ.

ಎಐಎಡಿಎಂಕೆ ಕುರಿತು ಬಿಜೆಪಿ ನಾಯಕರು ತೋರಿಸುತ್ತಿರುವ ಮೃದು ಧೋರಣೆಯೂ ಅಣ್ಣಾಮಲೈ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ. ತಮಿಳುನಾಡು ಬಿಜೆಪಿಯ ಜನಪ್ರಿಯ ನಾಯಕರಲ್ಲಿ ಒಬ್ಬರಾಗಿರುವ ಅವರು, ರಾಜ್ಯ ಮಟ್ಟದ ಕಾರ್ಯಕ್ರಮಗಳನ್ನು ಹೊರತುಪಡಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸುವ ಬಹುತೇಕ ಕಾರ್ಯಕ್ರಮಗಳಲ್ಲಿ ಮಾತ್ರ ಕಾಣಿಸಿಕೊಂಡಿರುವುದು ಗಮನಾರ್ಹವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News