ವಂಚನೆ ಪ್ರಕರಣ| ಶಾದಿ ಡಾಟ್ ಕಾಂ ಸಂಸ್ಥಾಪಕ ಅನುಪಮ್ ಮಿತ್ತಲ್‌ಗೆ ಸುಪ್ರೀಂ ರಕ್ಷಣೆ
ಸುಪ್ರೀಂ ಕೋರ್ಟ್ | Photo Credit : PTI
ಹೊಸದಿಲ್ಲಿ, ಫೆ. 2: ಪ್ರಸಿದ್ಧ ಮ್ಯಾಟ್ರಿಮೋನಿಯಲ್ ವೆಬ್ಸೈಟ್ ಶಾದಿ ಡಾಟ್ ಕಾಂ ವಿರುದ್ಧ ದಾಖಲಾದ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಸಂಸ್ಥಾಪಕ ಅನುಪಮ್ ಮಿತ್ತಲ್ ಹಾಗೂ ಇತರ ಇಬ್ಬರಿಗೆ ಸುಪ್ರೀಂ ಕೋರ್ಟ್ ಮಂಗಳವಾರ 2 ವಾರಗಳ ಕಾಲ ಬಂಧನದಿಂದ ರಕ್ಷಣೆ ನೀಡಿದೆ.
ಮಿತ್ತಲ್ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಲು ನಿರಾಕರಿಸಿ ತೆಲಂಗಾಣ ಉಚ್ಚ ನ್ಯಾಯಾಲಯ ನೀಡಿದ ಆದೇಶವನ್ನು ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಹಾಗೂ ಎನ್.ವಿ. ಅಂಜಾರಿಯಾ ಅವರ ಪೀಠ ಬದಿಗಿರಿಸಿದೆ. ಅಲ್ಲದೆ, ಈ ಪ್ರಕರಣವನ್ನು ಹೊಸ ಪರಿಶೀಲನೆಗೆ ಮತ್ತೆ ಉಚ್ಚ ನ್ಯಾಯಾಲಯಕ್ಕೆ ಕಳುಹಿಸಿದೆ. ಮಧ್ಯಂತರ ಜಾಮೀನಿಗೆ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಕೂಡ ಸುಪ್ರೀಂ ಕೋರ್ಟ್ ಮಿತ್ತಲ್‌ಗೆ ತಿಳಿಸಿದೆ.
ತೆಲಂಗಾಣ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಿತ್ತಲ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಶಾದಿ ಡಾಟ್ ಕಾಂನಲ್ಲಿ ನಕಲಿ ವ್ಯಕ್ತಿ ವಿವರ ಬಳಸಿ ವ್ಯಕ್ತಿಯೋರ್ವ ತನಗೆ 11 ಲಕ್ಷ ರೂ. ವಂಚಿಸಿದ್ದಾನೆ. ಶಾದಿ ಡಾಟ್ ಕಾಂ ಬಳಕೆದಾರರ ವಿವರಗಳನ್ನು ಸರಿಯಾಗಿ ಪರಿಶೀಲಿಸಲು ವಿಫಲವಾಗಿದೆ ಎಂದು ಹೈದರಾಬಾದ್‌ನ ಮಹಿಳೆಯೋರ್ವರ ಆರೋಪದ ಹಿನ್ನೆಲೆಯಲ್ಲಿ ಈ ಪ್ರಕರಣ ದಾಖಲಾಗಿದೆ.