ವಿಮಾನ ದುರಂತದಲ್ಲಿ ಅಜಿತ್ ಪವಾರ್ ಮೃತ್ಯು: ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ ಸಂತಾಪ
Photo| indiatoday
ಹೊಸದಿಲ್ಲಿ: ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನಿಧನರಾಗಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, "ಅಜಿತ್ ಪವಾರ್ ಅವರು ಜನ ನಾಯಕರಾಗಿದ್ದರು. ತಳಮಟ್ಟದ ಜನರ ಜೊತೆ ಸಂಪರ್ಕ ಹೊಂದಿದ್ದರು. ಮಹಾರಾಷ್ಟ್ರದ ಜನರಿಗೆ ಸೇವೆ ಸಲ್ಲಿಸುವಲ್ಲಿ ಮುಂಚೂಣಿಯಲ್ಲಿದ್ದ ಕಠಿಣ ಪರಿಶ್ರಮಿ ವ್ಯಕ್ತಿತ್ವ ಎಂದು ಅವರು ಗೌರವಿಸಲ್ಪಟ್ಟಿದ್ದರು. ಆಡಳಿತಾತ್ಮಕ ವಿಷಯಗಳ ಬಗ್ಗೆ ಅವರ ತಿಳುವಳಿಕೆ ಮತ್ತು ಬಡವರು ಮತ್ತು ದೀನದಲಿತರ ಸಬಲೀಕರಣದ ಬಗ್ಗೆ ಅವರಿಗಿದ್ದ ಉತ್ಸಾಹ ಕೂಡ ಗಮನಾರ್ಹವಾಗಿದೆ. ಅವರ ಅಕಾಲಿಕ ನಿಧನವು ಆಘಾತಕಾರಿ ಮತ್ತು ದುಃಖಕರವಾಗಿದೆ. ಅವರ ಕುಟುಂಬ ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ಸಂತಾಪ ಸೂಚಿಸುತ್ತೇನೆ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪವಾರ್ ಅವರೊಂದಿಗೆ ವಿಮಾನದಲ್ಲಿದ್ದ ಇತರರ ನಿಧನಕ್ಕೂ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಘಟನೆ ಬಗ್ಗೆ ಸಂತಾಪ ಸೂಚಿಸಿದ್ದಾರೆ. “ಮಹಾರಾಷ್ಟ್ರದ ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಹಲವರು ಮೃತಪಟ್ಟ ಸುದ್ದಿ ತೀವ್ರ ಹೃದಯವಿದ್ರಾವಕವಾಗಿದೆ. ಅಜಿತ್ ಪವಾರ್ ಅವರ ಅಕಾಲಿಕ ನಿಧನವು ಭರಿಸಲಾಗದ ನಷ್ಟವಾಗಿದೆ. ಮಹಾರಾಷ್ಟ್ರದ ಅಭಿವೃದ್ಧಿಗೆ, ವಿಶೇಷವಾಗಿ ಸಹಕಾರಿ ವಲಯಕ್ಕೆ ಅವರು ನೀಡಿದ ವಿಶೇಷ ಕೊಡುಗೆಗಾಗಿ ಅವರು ಯಾವಾಗಲೂ ಸ್ಮರಿಸಲ್ಪಡುವರು " ಎಂದು ಹೇಳಿದ್ದಾರೆ.