Assam SIR: ಮಿಯಾಗಳಿಗೆ ಮಾತ್ರ ನೋಟಿಸ್ ನೀಡಲಾಗುತ್ತಿದೆ, ಹಿಂದುಗಳಿಗಲ್ಲ: ಸಿಎಂ ಹಿಮಂತ ಬಿಸ್ವ ಶರ್ಮಾ
ಹಿಮಂತ ಬಿಸ್ವ ಶರ್ಮಾ (Photo: PTI)
ಗುವಾಹಟಿ, ಜ.25: ರಾಜ್ಯದಲ್ಲಿ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆಯಡಿ ಮಿಯಾಗಳಿಗೆ ಮಾತ್ರ ನೋಟಿಸ್‌ಗಳನ್ನು ನೀಡಲಾಗುತ್ತಿದೆ, ಹಿಂದುಗಳು ಅಥವಾ ಅಸ್ಸಾಮಿ ಮುಸ್ಲಿಮರಿಗೆ ಅಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶರ್ಮಾ, ‘ವಿಶೇಷ ಪರಿಷ್ಕರಣೆ ಕುರಿತು ಯಾವುದೇ ವಿವಾದವಿಲ್ಲ. ಯಾವ ಹಿಂದು ನೋಟಿಸ್ ಪಡೆದಿದ್ದಾನೆ? ಯಾವ ಅಸ್ಸಾಮಿ ಮುಸ್ಲಿಂ ನೋಟಿಸ್ ಪಡೆದಿದ್ದಾನೆ? ಮಿಯಾಗಳು ಮತ್ತು ಅಂತಹ ಜನರಿಗೆ ನೋಟಿಸ್ ನೀಡಲಾಗಿದೆ. ಇಲ್ಲದಿದ್ದರೆ ಅವರು ನಮ್ಮ ತಲೆಯ ಮೇಲೆ ಹತ್ತಿ ಕುಳಿತುಕೊಳ್ಳುತ್ತಾರೆ’ ಎಂದು ಹೇಳಿದರು.
‘ಮಿಯಾ’ ಎನ್ನುವುದು ಬಂಗಾಳಿ ಮಾತನಾಡುವ ಮುಸ್ಲಿಮರನ್ನು ಉದ್ದೇಶಿಸಿ ಬಳಸುವ ಅವಹೇಳನಕಾರಿ ಪದವಾಗಿದೆ. ಅಸ್ಸಾಮಿನ ಆಡಳಿತಾರೂಢ ಪಕ್ಷ ಬಿಜೆಪಿ ಈ ಸಮುದಾಯಕ್ಕೆ ‘ನುಸುಳುಕೋರರು’ ಎಂಬ ಹಣೆಪಟ್ಟಿ ಕಟ್ಟಿದ್ದು, ಅವರು ಸ್ಥಳೀಯ ಜನರ ಸಂಪನ್ಮೂಲಗಳು, ಉದ್ಯೋಗಗಳು ಮತ್ತು ಭೂಮಿಯನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದೆ.
ತನ್ನ ಆಡಳಿತದಲ್ಲಿ ಮಿಯಾಗಳು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬ ತನ್ನ ಹಿಂದಿನ ಹೇಳಿಕೆಗಳನ್ನು ಉಲ್ಲೇಖಿಸಿದ ಶರ್ಮಾ, ‘ಇಲ್ಲಿ ಮುಚ್ಚಿಡುವಂಥದ್ದೇನೂ ಇಲ್ಲ. ನಾವು ಅವರಿಗೆ ತೊಂದರೆ ನೀಡುತ್ತಿದ್ದೇವೆ. ವಿಶೇಷ ಪರಿಷ್ಕರಣೆಯಡಿ ಅವರಿಗೆ ನೋಟಿಸ್‌ಗಳನ್ನು ನೀಡುತ್ತಿರುವುದು ಅವರನ್ನು ಒತ್ತಡದಲ್ಲಿರಿಸಲು ಒಂದು ಮಾರ್ಗವಾಗಿದೆ’ ಎಂದು ಹೇಳಿದರು.
‘ಯಾವುದೋ ಹಂತದಲ್ಲಿ ಅಸ್ಸಾಮಿನ ಜನರು ತಮ್ಮನ್ನು ವಿರೋಧಿಸುತ್ತಿದ್ದಾರೆ ಎನ್ನುವುದನ್ನು ಅವರು ಅರ್ಥಮಾಡಿಕೊಳ್ಳಬೇಕು. ಇಲ್ಲದಿದ್ದರೆ ಅವರು ಮುಕ್ತವಾಗಿ ಮುನ್ನಡೆಯುತ್ತಾರೆ. ಇದಕ್ಕಾಗಿಯೇ ಕೆಲವರಿಗೆ ತೆರವು ಕಾರ್ಯಾಚರಣೆಗಾಗಿ, ಕೆಲವರಿಗೆ ಗಡಿ ಪೊಲೀಸರಿಂದ ನೋಟಿಸ್‌ಗಳು ಬರುತ್ತವೆ. ನಾವು ಕೊಂಚ ಕಿಡಿಗೇಡಿತನವನ್ನು, ಅದೂ ಕಾನೂನಿನ ವ್ಯಾಪ್ತಿಯಲ್ಲಿ ಮಾಡುತ್ತೇವೆ. ನಾವು ಬಡವರು ಮತ್ತು ಶೋಷಿತರ ಜೊತೆಯಲ್ಲಿದ್ದೇವೆ, ಆದರೆ ನಮ್ಮ ಸಮುದಾಯವನ್ನು ನಾಶಗೊಳಿಸಲು ಬಯಸುವವರ ಜೊತೆಯಲ್ಲಲ್ಲ’ ಎಂದರು.
ಅಸ್ಸಾಂನಲ್ಲಿ ವಿಶೇಷ ಪರಿಷ್ಕರಣೆಯಡಿ ಮನೆ-ಮನೆ ಪರಿಶೀಲನೆಯ ಬಳಿಕ 10 ಲಕ್ಷಕ್ಕೂ ಅಧಿಕ ಮತದಾರರ ಹೆಸರುಗಳನ್ನು ಅಳಿಸಲು ಗುರುತಿಸಲಾಗಿದೆ ಎಂದು ಚುನಾವಣಾ ಆಯೋಗವು ಡಿ.27ರಂದು ತಿಳಿಸಿತ್ತು. ಅಂತಿಮ ಪಟ್ಟಿಯು ಫೆ.10ರಂದು ಪ್ರಕಟಗೊಳ್ಳಲಿದೆ.
12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (ಎಸ್ಐಆರ್) ಬದಲಾಗಿ ಅಸ್ಸಾಂನಲ್ಲಿ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆಯನ್ನು ನಡೆಸಲಾಗುತ್ತಿದೆ. ಈ ಪ್ರಕ್ರಿಯೆಯು ಎಸ್ಐಆರ್‌ನಂತೆ ದಾಖಲೆಗಳ ಪರಿಶೀಲನೆಯನ್ನು ಒಳಗೊಂಡಿಲ್ಲ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳು ಮಾರ್ಚ್–ಎಪ್ರಿಲ್‌ನಲ್ಲಿ ನಡೆಯುವ ನಿರೀಕ್ಷೆಯಿದೆ.
ವಿಶೇಷ ಪರಿಷ್ಕರಣೆಯ ಮೂಲಕ ಬಿಜೆಪಿಯು ಹೆಚ್ಚಿನ ಸಂಖ್ಯೆಯ ನೈಜ ಮತದಾರರ ಹೆಸರುಗಳನ್ನು ಅಳಿಸಲು ಹುನ್ನಾರ ನಡೆಸಿದೆ ಎಂದು ಹಲವಾರು ಪ್ರತಿಪಕ್ಷಗಳು ಆರೋಪಿಸಿದ್ದು, ಪೊಲೀಸ್ ದೂರುಗಳನ್ನೂ ದಾಖಲಿಸಿವೆ.