20 ವರ್ಷಗಳ ಹಿಂದಿನ ಮಾನನಷ್ಟ ಪ್ರಕರಣ: ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಖುಲಾಸೆ
Photo Credit: PTI
ಹೊಸದಿಲ್ಲಿ, ಜ.25: ದಿಲ್ಲಿಯ ಉಪರಾಜ್ಯಪಾಲ ವಿ.ಕೆ. ಸಕ್ಸೇನಾ ಅವರು ದಾಖಲಿಸಿದ್ದ 20 ವರ್ಷಗಳಷ್ಟು ಹಳೆಯ ಮಾನನಷ್ಟ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರನ್ನು ಇಲ್ಲಿಯ ಸಾಕೇತ್ ನ್ಯಾಯಾಲಯವು ಶನಿವಾರ ಖುಲಾಸೆಗೊಳಿಸಿದೆ.
ಎಪ್ರಿಲ್ 2006ರಲ್ಲಿ ಟಿವಿ ಕಾರ್ಯಕ್ರಮವೊಂದರಲ್ಲಿ ಪಾಟ್ಕರ್ ತಮ್ಮ ವಿರುದ್ಧ ಅವಮಾನಕಾರಿ ಹೇಳಿಕೆಗಳನ್ನು ನೀಡಿದ್ದರು ಎನ್ನುವುದನ್ನು ಸಾಬೀತುಗೊಳಿಸುವಲ್ಲಿ ಸಕ್ಸೇನಾ ವಿಫಲಗೊಂಡಿದ್ದಾರೆ ಎಂದು ನ್ಯಾ. ರಾಘವ್ ಶರ್ಮಾ ತೀರ್ಪಿನಲ್ಲಿ ಹೇಳಿದ್ದಾರೆ.
ಆಗ ಅಹಮದಾಬಾದ್‌ನ ಎನ್‌ಜಿಒ ‘ನ್ಯಾಷನಲ್ ಕೌನ್ಸಿಲ್ ಫಾರ್ ಸಿವಿಲ್ ಲಿಬರ್ಟೀಸ್’ನ ಮುಖ್ಯಸ್ಥರಾಗಿದ್ದ ಸಕ್ಸೇನಾ ಈ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದರು. ಟಿವಿ ಕಾರ್ಯಕ್ರಮವೊಂದರಲ್ಲಿ ಪಾಟ್ಕರ್ ಎನ್‌ಜಿಒ ಸಿವಿಲ್ ಗುತ್ತಿಗೆಗಳನ್ನು ಪಡೆಯುತ್ತಿರುವ ಬಗ್ಗೆ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದ್ದ ಸಕ್ಸೇನಾ, ಅವುಗಳನ್ನು ತಿರಸ್ಕರಿಸಿದ್ದರು.
ಟಿವಿ ಕಾರ್ಯಕ್ರಮದಲ್ಲಿ ಪಾಟ್ಕರ್ ಖುದ್ದಾಗಿ ಭಾಗವಹಿಸಿರಲಿಲ್ಲ ಮತ್ತು ಅವರ ಹಿಂದೆ ರೆಕಾರ್ಡ್ ಆಗಿದ್ದ ವೀಡಿಯೊ ಕ್ಲಿಪ್‌ನ್ನು ಮಾತ್ರ ತೋರಿಸಲಾಗಿತ್ತು ಎನ್ನುವುದನ್ನು ನ್ಯಾಯಾಲಯವು ಗಮನಿಸಿದೆ.
ಆಡಿಯೊ-ವೀಡಿಯೊವನ್ನು ರೆಕಾರ್ಡ್ ಮಾಡಿದ್ದ ವರದಿಗಾರನನ್ನು ಅಥವಾ ಆರೋಪಿಯು ವಿವಾದಿತ ಹೇಳಿಕೆಗಳನ್ನು ನೀಡಿದ್ದನ್ನು ನೋಡಿದ್ದ ಯಾವುದೇ ವ್ಯಕ್ತಿಯನ್ನು ಸಾಕ್ಷಿಯಾಗಿ ವಿಚಾರಣೆಗೆ ಒಳಪಡಿಸಿಲ್ಲ ಎನ್ನುವುದನ್ನು ಗಮನಿಸುವುದು ಮುಖ್ಯವಾಗಿದೆ. ಕಾರ್ಯಕ್ರಮದಲ್ಲಿ ಪ್ರಸಾರವಾಗಿದ್ದ ವೀಡಿಯೊ ಪಾಟ್ಕರ್ ಅವರ ಸಂದರ್ಶನದ ಅಥವಾ ಅವರು ನಡೆಸಿದ್ದ ಸುದ್ದಿಗೋಷ್ಠಿಯ ಭಾಗವಾಗಿದ್ದಂತೆ ಕಂಡು ಬರುತ್ತದೆ. ನ್ಯಾಯಾಲಯದಲ್ಲಿ ಏನನ್ನಾದರೂ ಸಾಬೀತುಪಡಿಸಲು ಸುದ್ದಿಗೋಷ್ಠಿಯ ಸಂಪೂರ್ಣ ವೀಡಿಯೊ ಮತ್ತು ಆಡಿಯೊವನ್ನು ಸಲ್ಲಿಸುವುದು ಅತ್ಯಗತ್ಯವಾಗಿದೆ ಎಂದು ನ್ಯಾಯಾಧೀಶರು ಹೇಳಿದರು.
ಸಕ್ಸೇನಾ ಮೂಲ ವೀಡಿಯೊ ದೃಶ್ಯಾವಳಿಯನ್ನು ಅಥವಾ ಆರೋಪಿತ ಮಾನಹಾನಿಕರ ಹೇಳಿಕೆಗಳನ್ನು ರೆಕಾರ್ಡ್ ಮಾಡಿದ್ದ ಸಾಧನವನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲು ವಿಫಲಗೊಂಡಿದ್ದಾರೆ. ಹೀಗಾಗಿ ಅವರು ಮಾಡಿರುವ ಆರೋಪಗಳು ಸಾಬೀತಾಗಿಲ್ಲ ಎಂದೂ ನ್ಯಾ. ಶರ್ಮಾ ಹೇಳಿದರು.