BBCಯ ಮೂಲಕ ದಶಕಗಳ ಕಾಲ ಭಾರತದ ಕಥನ ಹೇಳಿದ ಪತ್ರಕರ್ತ ಮಾರ್ಕ್ ಟುಲಿ ನಿಧನ
ಮಾರ್ಕ್ ಟುಲ್ಲಿ - Photo Credit : newindianexpress
ಹೊಸದಿಲ್ಲಿ, ಜ. 25: ಭಾರತದ ಕುರಿತು ದಶಕಗಳ ಕಾಲ ಸಮತೋಲಿತ ಮತ್ತು ಆಳವಾದ ಒಳನೋಟದ ವರದಿಗಳ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಹಿರಿಯ ಪತ್ರಕರ್ತ ವಿಲಿಯಂ ಮಾರ್ಕ್ ಟುಲಿ ಅವರು ರವಿವಾರ ಹೊಸದಿಲ್ಲಿಯಲ್ಲಿ 90ನೇ ವಯಸ್ಸಿನಲ್ಲಿ ನಿಧನರಾದರು.
ಸ್ವಲ್ಪಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಒಂದು ವಾರದ ಹಿಂದೆ ಸಾಕೇತ್ ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. BBCಯ ಭಾರತದ ವ್ಯಾಖ್ಯಾನಕಾರಕ ಧ್ವನಿಯಾಗಿ ಗುರುತಿಸಿಕೊಂಡಿದ್ದ ಟುಲಿ, ಭಾರತೀಯ ಪತ್ರಿಕೋದ್ಯಮದಲ್ಲಿ ಅತ್ಯಂತ ಪ್ರಭಾವಶಾಲಿ ಹಾಗೂ ವಿಶ್ವಾಸಾರ್ಹ ವಿದೇಶಿ ಪತ್ರಕರ್ತರಲ್ಲಿ ಒಬ್ಬರಾಗಿದ್ದರು. ಭಾರತ ಮತ್ತು ಪಶ್ಚಿಮ ಜಗತ್ತಿನ ನಡುವಿನ ಅಂತರವನ್ನು ಕಡಿಮೆ ಮಾಡಿದ ಧ್ವನಿಯಾಗಿ ಅವರು ಗುರುತಿಸಲ್ಪಟ್ಟಿದ್ದರು.
1935ರಲ್ಲಿ ಕಲ್ಕತ್ತಾ (ಈಗಿನ ಕೋಲ್ಕತ್ತಾ) ನಗರದ ಟಾಲಿಗಂಜ್ ನಲ್ಲಿ ಶ್ರೀಮಂತ ಬ್ರಿಟಿಷ್ ಕುಟುಂಬದಲ್ಲಿ ಜನಿಸಿದ ಟುಲಿ, ವಸಾಹತುಶಾಹಿ ಸಾಮಾಜಿಕ ಸಂಹಿತೆಗಳು ಭಾರತೀಯರೊಂದಿಗೆ ನಿಕಟ ಸಂವಹನಕ್ಕೆ ಮುಂದಾಗದ ಕಾಲಘಟ್ಟದಲ್ಲಿ ಭಾರತದಲ್ಲೇ ತಮ್ಮ ಬಾಲ್ಯವನ್ನು ಕಳೆದರು. ಬಾಲ್ಯದಲ್ಲಿ ನಿರಾಕರಿಸಲ್ಪಟ್ಟ ಆ ನಿಕಟ ಸಂಪರ್ಕವೇ ಮುಂದಿನ ದಿನಗಳಲ್ಲಿ ಅವರ ಜೀವನದ ಪ್ರಮುಖ ಅನ್ವೇಷಣೆಯಾಗಿ ಪರಿಣಮಿಸಿತು. ಮುಂದಿನ ಆರು ದಶಕಗಳಲ್ಲಿ ಅವರು ಭಾರತದ ಬೀದಿಗಳಲ್ಲಿ ನಡೆದು, ಜನರ ಮಾತುಗಳನ್ನು ಆಲಿಸಿ, ದೇಶದ ವೈವಿಧ್ಯಗಳನ್ನು ಸಹಾನುಭೂತಿ ಮತ್ತು ಸಂಯಮದಿಂದ ದಾಖಲಿಸಿದರು.
ಡಾರ್ಜಿಲಿಂಗ್‌ನ ಬೋರ್ಡಿಂಗ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಅವರು, ನಂತರ ಮಾರ್ಲ್‌ಬರೋ ಕಾಲೇಜು ಹಾಗೂ ಕೇಂಬ್ರಿಡ್ಜ್ ನಲ್ಲಿ ಉನ್ನತ ಶಿಕ್ಷಣ ಪಡೆದರು. ಆ ಅವಧಿಯಲ್ಲಿ ಭಾರತದಿಂದ ದೂರವಿದ್ದ ನೋವನ್ನು ಅವರು ನಂತರದ ವರ್ಷಗಳಲ್ಲಿ ಆಗಾಗ್ಗೆ ವ್ಯಕ್ತಪಡಿಸುತ್ತಿದ್ದರು.
ಕೇಂಬ್ರಿಡ್ಜ್ ನಂತರ ಟುಲಿ, ಲಿಂಕನ್ ಥಿಯಾಲಜಿಕಲ್ ಕಾಲೇಜಿಗೆ ಸೇರಿದರು. ಆದರೆ ಸೆಮಿನರಿಯ ಶಿಸ್ತುಬದ್ಧ ಜೀವನ ಅವರ ಸ್ವಭಾವಕ್ಕೆ ಹೊಂದಿಕೆಯಾಗಲಿಲ್ಲ. 1964ರಲ್ಲಿ BBC ಅವರನ್ನು ಭಾರತದ ವರದಿಗಾರನಾಗಿ ಹೊಸದಿಲ್ಲಿಗೆ ನಿಯೋಜಿಸಿದಾಗ, ಭಾರತವು ಅವರ ಜೀವನದಲ್ಲಿ ನಿರ್ಣಾಯಕವಾಗಿ ಮರುಪ್ರವೇಶಿಸಿತು. ಮುಂದಿನ 30 ವರ್ಷಗಳ ಅವಧಿಯಲ್ಲಿ BBCಯೊಂದಿಗಿನ ಅವರ ಸಂಬಂಧವು ಅವರನ್ನು ದೇಶದ ಅತ್ಯಂತ ಗುರುತಿಸಲ್ಪಟ್ಟ ಹಾಗೂ ಗೌರವಿಸಲ್ಪಟ್ಟ ವಿದೇಶಿ ಪತ್ರಕರ್ತರನ್ನಾಗಿ ರೂಪಿಸಿತು. 1969ರಲ್ಲಿ ‘ಫ್ಯಾಂಟಮ್ ಇಂಡಿಯಾ’ ಸಾಕ್ಷ್ಯಚಿತ್ರದ ಪ್ರಸಾರಕ್ಕೆ ಸಂಬಂಧಿಸಿದಂತೆ ಭಾರತವು BBCಗೆ ನಿಷೇಧ ಹೇರಿದ ಬಳಿಕ ಅವರು ಲಂಡನ್ ಗೆ ಹಿಂತಿರುಗಬೇಕಾಯಿತು. ಆದರೆ 1971ರಲ್ಲಿ ಅವರು ಮತ್ತೆ ಭಾರತಕ್ಕೆ ಮರಳಿದರು. 1972ರ ವೇಳೆಗೆ ಹೊಸದಿಲ್ಲಿಯಲ್ಲಿ BBCಯ ಬ್ಯೂರೋ ಮುಖ್ಯಸ್ಥರಾಗಿ ನೇಮಕಗೊಂಡ ಅವರು, ದಕ್ಷಿಣ ಏಷ್ಯಾದ ವರದಿಯ ಮೇಲ್ವಿಚಾರಣೆ ಮಾಡಿದರು.
ಸ್ವತಂತ್ರ ಭಾರತದ ಇತಿಹಾಸದ ಅತ್ಯಂತ ಪ್ರಕ್ಷುಬ್ಧ ಘಟ್ಟಗಳಲ್ಲಿ ಟುಲಿಯವರ ಶಾಂತ, ಸಂವೇದನಾಶೀಲ ವರದಿಗಾರಿಕೆ ವಿಶಿಷ್ಟ ಗುರುತು ಪಡೆದಿತ್ತು. 1971ರ ಬಾಂಗ್ಲಾದೇಶ ಯುದ್ಧ, ತುರ್ತು ಪರಿಸ್ಥಿತಿ (1975–77), ಜುಲ್ಫಿಕರ್ ಅಲಿ ಭುಟ್ಟೋ ಅವರ ಮರಣದಂಡನೆ, ಆಪರೇಷನ್ ಬ್ಲೂ ಸ್ಟಾರ್, ಇಂದಿರಾ ಗಾಂಧಿಯವರ ಹತ್ಯೆ, 1984ರ ಸಿಖ್ ವಿರೋಧಿ ಹಿಂಸಾಚಾರ, ರಾಜೀವ್ ಗಾಂಧಿಯವರ ಹತ್ಯೆ, 1992ರ ಬಾಬರಿ ಮಸೀದಿ ಧ್ವಂಸ, ಆರ್ಥಿಕ ಉದಾರೀಕರಣ ಸೇರಿದಂತೆ ಅನೇಕ ಚುನಾವಣೆಗಳು ಮತ್ತು ಸಾಮಾಜಿಕ ಬದಲಾವಣೆಗಳು ಅವರ ವರದಿಗಳ ವ್ಯಾಪ್ತಿಯಲ್ಲಿ ಬಂದಿದ್ದವು.
ಉಪಖಂಡದಾದ್ಯಂತದ ತಲೆಮಾರುಗಳ ಶ್ರೋತೃಗಳು BBC ವರ್ಲ್ಡ್ ಸರ್ವೀಸ್‌ನ ‘ಫ್ರಮ್ ಅವರ್ ಓನ್ ಕರೆಸ್ಪಾಂಡೆಂಟ್’ ಕಾರ್ಯಕ್ರಮದಲ್ಲಿನ ಅವರ ಅಳತೆಯ ಧ್ವನಿಯನ್ನು ಅಪಾರ ನಂಬಿಕೆಯಿಂದ ಕೇಳುತ್ತಿದ್ದರು. “ಮಾರ್ಕ್ ಟುಲಿಯಿಂದ ಕೇಳಿದ ನಂತರವೇ ಆ ಸುದ್ದಿಯನ್ನು ನಂಬಬಹುದು” ಎಂಬಷ್ಟರ ಮಟ್ಟಿಗೆ ಟುಲಿ ಭಾರತೀಯರಿಗೆ ಹತ್ತಿರವಾದರು!
ಆಪರೇಷನ್ ಬ್ಲೂ ಸ್ಟಾರ್ ಮತ್ತು ಪಂಜಾಬ್ ಬಿಕ್ಕಟ್ಟನ್ನು ಆಧರಿಸಿದ Amritsar: Mrs Gandhi’s Last Battle ( (1985) ಎಂಬ ಅವರ ಮೊದಲ ಪ್ರಮುಖ ಕೃತಿ. ಪತ್ರಕರ್ತ ಸತೀಶ್ ಜಾಕೋಬ್ ಅವರೊಂದಿಗೆ ಸಹಲೇಖಕರಾಗಿ ಈ ಕೃತಿ ಪ್ರಕಟವಾಯಿತು. ಅವರ ಅತ್ಯಂತ ಪ್ರಭಾವಶಾಲಿ ಕೃತಿ ‘No Full Stops in India’ (1988)ವು ಎರಡು ದಶಕಗಳ ವರದಿಗಳನ್ನು ಪ್ರಬಂಧಗಳಾಗಿ ಸಂಗ್ರಹಿಸಿ, ಮಹತ್ವದ ಘಟನೆಗಳಾಚೆಗೂ ಹೋಗಿ ಭಾರತೀಯ ಸಮಾಜವನ್ನು ಆಳವಾಗಿ ಅನ್ವೇಷಿಸಿದ ಕೃತಿಯಾಗಿತ್ತು. ರೂಪ್ ಕನ್ವರ್ ಸತಿ ಪ್ರಕರಣದಿಂದ ಕುಂಭಮೇಳದವರೆಗೆ ಹಾಗೂ ದೂರದರ್ಶನದ ‘ರಾಮಾಯಣ’ದಂತಹ ಮಹಾಕಾವ್ಯಗಳಿಂದ ಹಿಡಿದು ಪಾಶ್ಚಿಮಾತ್ಯ ಚೌಕಟ್ಟುಗಳಿಂದ ಉಂಟಾದ ವಕ್ರತೆಗಳವರೆಗೆ ಈ ಕೃತಿ ಬೆಳಕು ಚೆಲ್ಲಿತು.
1994ರಲ್ಲಿ BBCಯನ್ನು ತೊರೆದ ಬಳಿಕ ಟುಲಿ 2019ರವರೆಗೆ BBC ರೇಡಿಯೋ 4ರಲ್ಲಿ ‘Something Understood’ ಎಂಬ ಆಧ್ಯಾತ್ಮಿಕ ಕಾರ್ಯಕ್ರಮವನ್ನು ನಿರೂಪಿಸಿದರು. ಬಳಿಕ ಅವರು ಯಾವುದೇ ಸುದ್ದಿ ಕೋಣೆಗೆ ಔಪಚಾರಿಕವಾಗಿ ಸೇರಿಕೊಳ್ಳದೆ, ದಿಲ್ಲಿಯಲ್ಲಿ ನೆಲೆಸಿರುವ ಸ್ವತಂತ್ರ ಬರಹಗಾರ ಮತ್ತು ನಿರೂಪಕರಾಗಿ ಕಾರ್ಯನಿರ್ವಹಿಸಿದರು.
ಟುಲಿ ಒಟ್ಟು 10 ಪುಸ್ತಕಗಳನ್ನು ಬರೆದಿದ್ದು, ಅವೆಲ್ಲವೂ ಭಾರತಕ್ಕೆ ಸಂಬಂಧಿಸಿದ್ದೇ ಆಗಿದೆ. ಗಿಲಿಯನ್ ರೈಟ್ ಅವರೊಂದಿಗೆ ಬರೆದ ‘India in Slow Motionʼ(2002) ಕೃತಿಯು ಭಯೋತ್ಪಾದನೆ, ಕಾಶ್ಮೀರ, ಕೃಷಿ, ಭ್ರಷ್ಟಾಚಾರ ಮತ್ತು ಅತೀಂದ್ರಿಯತೆಯಂತಹ ವಿಷಯಗಳೆಡೆ ಬೆಳಕು ಚೆಲ್ಲಿದೆ. ‘The Heart of India’ (1995) ಮತ್ತು ‘Upcountry Talesʼ(2017) ಕೃತಿಗಳು ದೈನಂದಿನ ಭಾರತೀಯ ಬದುಕನ್ನು ಪ್ರೀತಿ ಮತ್ತು ಶಾಂತ ವಾಸ್ತವಿಕತೆಯಿಂದ ಚಿತ್ರಿಸುತ್ತವೆ. ‘India’s Unending Journey’ (2008) ಮತ್ತು ‘India: The Road Ahead ’ (2011) ಕೃತಿಗಳು ದೇಶದ ಭವಿಷ್ಯದತ್ತ ಅವರ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ.
ಅವರ ಸೇವೆಯನ್ನು ಗುರುತಿಸಿ 1992ರಲ್ಲಿ ಪದ್ಮಶ್ರೀ, 2002ರಲ್ಲಿ ಯುಕೆಯ ನೈಟ್ ಪದವಿ ಹಾಗೂ 2005ರಲ್ಲಿ ಪದ್ಮಭೂಷಣ ಪ್ರಶಸ್ತಿಗಳನ್ನು ನೀಡಿ ಪ್ರದಾನಿಸಲಾಯಿತು. ಬ್ರಿಟನ್ ಮತ್ತು ಭಾರತ ಎರಡೂ ದೇಶಗಳಿಂದ ಅಧಿಕೃತ ಗೌರವ ಪಡೆದ ಅಪರೂಪದ ವ್ಯಕ್ತಿಗಳಲ್ಲಿ ಅವರು ಒಬ್ಬರಾಗಿದ್ದರು.
ಟುಲಿ ತಮ್ಮ ಜೀವನದ ಬಹುಭಾಗವನ್ನು ಹೊಸದಿಲ್ಲಿ ಮತ್ತು ಮ್ಯಾಕ್‌ಲಿಯೋಡ್ ಗಂಜ್‌ನಲ್ಲಿ ಕಳೆದರು. ಪ್ರತಿದಿನ ಸಾಮಾನ್ಯ ನಾಗರಿಕರೊಂದಿಗೆ ಸಂವಾದ ನಡೆಸಿ, ಭಾರತದ ಸಾಮಾಜಿಕ ಹಾಗೂ ರಾಜಕೀಯ ಲಯಗಳ ಕುರಿತು ಆಳವಾದ ಆಸಕ್ತಿ ಉಳಿಸಿಕೊಂಡಿದ್ದರು. ಧರ್ಮನಿಷ್ಠ ಆಂಗ್ಲಿಕನ್ ಆಗಿದ್ದ ಅವರು, ತಮ್ಮ ನಂಬಿಕೆ ಮತ್ತು ಭಾರತದ ಜೀವಂತ ಬಹುತ್ವದ ನಡುವಿನ ಅನುರಣನದ ಬಗ್ಗೆ ಆಗಾಗ್ಗೆ ಮಾತನಾಡುತ್ತಿದ್ದರು.
ಕಳೆದ ಅಕ್ಟೋಬರ್‌ನಲ್ಲಿ ಅವರ 90ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ಅವರ ಪುತ್ರ ಸ್ಯಾಮ್ ಟುಲಿ ಯುಕೆ–ಭಾರತ ಸಂಬಂಧಗಳಲ್ಲಿ ತಮ್ಮ ತಂದೆಯ ವಿಶಿಷ್ಟ ಸ್ಥಾನವನ್ನು ಪ್ರತಿಬಿಂಬಿಸುತ್ತಾ, “ದಿಲ್ ಹೈ ಹಿಂದೂಸ್ತಾನಿ, ಮಗರ್ ತೋಡ ಅಂಗ್ರೇಜಿ ಭಿ”, ಎಂದು ಬರೆದಿದ್ದರು.