×
Ad

ಪಠ್ಯಪುಸ್ತಕಗಳಿಂದ ಮೊಘಲರನ್ನು ತೆಗೆಯುವುದು ಅರ್ಥಹೀನ, ಇತಿಹಾಸ ನಿರಂತರವಾಗಿರಬೇಕು: ಇತಿಹಾಸಕಾರ್ತಿ ರೊಮಿಲಾ ಥಾಪರ್

Update: 2026-01-25 22:44 IST

Photo Credit: The Hindu

ಕೋಝಿಕ್ಕೋಡ್ (ಕೇರಳ), ಜ.25: ಇತಿಹಾಸವು ನಿರಂತರ ಪ್ರಕ್ರಿಯೆಯಾಗಿದ್ದು, ಅದನ್ನು ತುಣುಕುಗಳಲ್ಲಿ ಕಲಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಖ್ಯಾತ ಇತಿಹಾಸಕಾರ್ತಿ ರೊಮಿಲಾ ಥಾಪರ್, ಪಠ್ಯಪುಸ್ತಕಗಳಿಂದ ಮೊಘಲರಂತಹ ಇಡೀ ರಾಜವಂಶಗಳನ್ನು ತೆಗೆದುಹಾಕುವ ಪರಿಪಾಠವು ಅರ್ಥಹೀನವಾಗಿದೆ ಎಂದಿದ್ದಾರೆ.

ಇಲ್ಲಿ ನಡೆದ ಕೇರಳ ಸಾಹಿತ್ಯೋತ್ಸವದಲ್ಲಿ ಶನಿವಾರ ಆನ್‌ಲೈನ್‌ನಲ್ಲಿ ಮಾತನಾಡಿದ ಥಾಪರ್, ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚೆಚ್ಚಾಗಿ ಹರಡುತ್ತಿರುವ ಜನಪ್ರಿಯ ಇತಿಹಾಸದಿಂದ ಹಿಡಿದು ಸ್ತ್ರೀವಾದಿ ಇತಿಹಾಸದ ಪ್ರಾಮುಖ್ಯ ಮತ್ತು ಅಸ್ತಿತ್ವದಲ್ಲಿರುವ ಜ್ಞಾನವನ್ನು ಪ್ರಶ್ನಿಸುವಲ್ಲಿ ಶಿಕ್ಷಣದ ಕೇಂದ್ರ ಪಾತ್ರದವರೆಗೆ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿದರು.

‘ಇಂದು ನಡೆಯುತ್ತಿರುವ ಬೆಳವಣಿಗೆಗಳು — ಉದಾಹರಣೆಗೆ ಪಠ್ಯಕ್ರಮದಿಂದ ಇತಿಹಾಸದ ದೊಡ್ಡ ಭಾಗಗಳನ್ನು ತೆಗೆದುಹಾಕುತ್ತಿರುವುದು ಅಥವಾ ನಾವು ಅವುಗಳ ಅಧ್ಯಯನ ಮಾಡುವ ಅಗತ್ಯವಿಲ್ಲ ಎಂದು ಹೇಳುತ್ತಿರುವುದು — ಇವೆಲ್ಲ ಅರ್ಥಹೀನವಾಗಿವೆ. ಇತಿಹಾಸವು ನಿರಂತರ ಪ್ರಕ್ರಿಯೆಯಾಗಿದೆ. ಅದು ಜನರು ಮತ್ತು ಸಂಸ್ಕೃತಿಗಳ, ನಡೆನುಡಿಗಳ ಮತ್ತು ಚಿಂತನೆಯ ವಿಕಸನವಾಗಿದೆ’ ಎಂದು ಹೇಳಿದರು.

‘ಮಹಿಳಾ ಬರವಣಿಗೆ ಇತಿಹಾಸ: ಮೂರು ತಲೆಮಾರುಗಳು’ ವಿಚಾರಗೋಷ್ಠಿಯಲ್ಲಿ ಮಾತನಾಡುತ್ತಿದ್ದ 25ಕ್ಕೂ ಅಧಿಕ ವಿದ್ವತ್ಪೂರ್ಣ ಪುಸ್ತಕಗಳನ್ನು ರಚಿಸಿರುವ ಥಾಪರ್, ‘ಸರಿ, ಈ ರಾಜವಂಶವನ್ನು ತೆಗೆದುಹಾಕೋಣ, ಮೊಘಲರನ್ನು ತೆಗೆಯೋಣ ಎಂದು ಹೇಳುವುದರಿಂದ ಇತಿಹಾಸದ ನಿರಂತರತೆಯನ್ನು ಮುರಿಯಲಾಗುವುದಿಲ್ಲ. ಅದು ಇತಿಹಾಸವನ್ನು ತುಂಡರಿಸುತ್ತದೆ ಮತ್ತು ಅದಕ್ಕೆ ಯಾವುದೇ ಅರ್ಥವಿಲ್ಲ’ ಎಂದು ಹೇಳಿದರು.

ಎನ್‌ಸಿಇಆರ್‌ಟಿ 2025–26ನೇ ಶೈಕ್ಷಣಿಕ ವರ್ಷದಿಗಾಗಿ ತನ್ನ ಏಳನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕವನ್ನು ಪರಿಷ್ಕರಿಸಿದ್ದು, ದಿಲ್ಲಿಯ ಸುಲ್ತಾನರು ಮತ್ತು ಮೊಘಲರ ಕುರಿತ ಅಧ್ಯಾಯಗಳನ್ನು ತೆಗೆದುಹಾಕಿದೆ ಎಂದು ಹೇಳಲಾಗಿದೆ.

ಎನ್‌ಸಿಇಆರ್‌ಟಿ ಈಗ ಮೌರ್ಯರು, ಶುಂಗರು, ಶಾತವಾಹನರಂತಹ ಪ್ರಾಚೀನ ಭಾರತೀಯ ರಾಜವಂಶಗಳ ಜೊತೆಗೆ ವಿವಿಧ ಧಾರ್ಮಿಕ ಪರಂಪರೆಗಳ ಸಾಂಸ್ಕೃತಿಕ ಆಚರಣೆಗಳು ಮತ್ತು ಪವಿತ್ರ ಸ್ಥಳಗಳ ಮೇಲೆ ಕೇಂದ್ರೀಕರಿಸಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚುತ್ತಿರುವ ‘ಜನಪ್ರಿಯ ಇತಿಹಾಸ’ದ ಪ್ರಭಾವದ ಬಗ್ಗೆ ಕಳವಳ ವ್ಯಕ್ತಪಡಿಸಿದ 93ರ ಹರೆಯದ ಥಾಪರ್, ಅದು ಮಾಹಿತಿಪೂರ್ಣ ಪಾಂಡಿತ್ಯ ಮತ್ತು ವೈಯಕ್ತಿಕ ಅಭಿಪ್ರಾಯದ ನಡುವಿನ ರೇಖೆಯನ್ನು ಮಸುಕುಗೊಳಿಸುತ್ತಿದೆ ಎಂದರು.

ಭೂತಕಾಲದ ಘಟನೆಗಳ ಕುರಿತು ನಿಖರವಾದ ವಿವರಣೆಗಳನ್ನು ತಿಳಿದುಕೊಳ್ಳಲು ವೃತ್ತಿಪರ ಇತಿಹಾಸಕಾರರ ಹೇಳಿಕೆಗಳನ್ನು ಅವಲಂಬಿಸುವಂತೆ ಅವರು ಜನರನ್ನು ಆಗ್ರಹಿಸಿದರು.

ಇಂದು ಜನಪ್ರಿಯ ಇತಿಹಾಸ ಮತ್ತು ವೃತ್ತಿಪರ ಇತಿಹಾಸಕಾರರ ಬರವಣಿಗೆಯ ನಡುವೆ ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಯಾವುದೇ ಐತಿಹಾಸಿಕ ಹೇಳಿಕೆಯನ್ನು ಉಲ್ಲೇಖಿಸುವಾಗ ಅದರ ಮೂಲ ವೃತ್ತಿಪರ ಇತಿಹಾಸಕಾರರ ಬರವಣಿಗೆಯೇ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಲಾದ ಅಭಿಪ್ರಾಯವೇ ಎನ್ನುವುದನ್ನು ತಿಳಿದಿರಬೇಕು ಎಂದು ಥಾಪರ್ ವಿವರಿಸಿದರು.

ಇತಿಹಾಸಕಾರ್ತಿಯಾಗಿ ತನ್ನ ಸ್ವಂತ ಪಯಣದ ಕುರಿತು ಮಾತನಾಡಿದ ಅವರು, ತನ್ನ ವೃತ್ತಿಜೀವನದುದ್ದಕ್ಕೂ ಮಹಿಳೆಯ ದೃಷ್ಟಿಕೋನದಿಂದ ತಾನು ಪ್ರಜ್ಞಾಪೂರ್ವಕವಾಗಿ ಇತಿಹಾಸವನ್ನು ಬರೆದಿಲ್ಲದಿರಬಹುದು, ಆದರೆ ಸಾಧ್ಯವಾದಲ್ಲೆಲ್ಲ ಸ್ತ್ರೀವಾದಿ ಒಳನೋಟಗಳನ್ನು ಬಿಂಬಿಸಲು ನಿರಂತರವಾಗಿ ಯತ್ನಿಸಿದ್ದೇನೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News