ಪದ್ಮ ಪ್ರಶಸ್ತಿಗಳಲ್ಲಿ ರಾಜಕೀಯ ವಿಭಿನ್ನ ಸಿದ್ಧಾಂತಗಳಿಗೆ ಕೇಂದ್ರದ ಗೌರವ; ಕೇರಳದ ಮೇಲೆ 'ವಿಶೇಷ' ಗಮನ
5 ಪದ್ಮವಿಭೂಷಣ ಪ್ರಶಸ್ತಿಗಳ ಪೈಕಿ ಮೂರು ಕೇರಳಕ್ಕೆ!
ವಿ.ಎಸ್. ಅಚ್ಯುತಾನಂದನ್ | Photo Credit : indianexpress
ಹೊಸದಿಲ್ಲಿ, ಜ. 25: 2026ರ ಪದ್ಮ ಪ್ರಶಸ್ತಿಗಳ ಪಟ್ಟಿಯಲ್ಲಿ ಸ್ಪಷ್ಟ ರಾಜಕೀಯ, ವಿಭಿನ್ನ ಸೈದ್ಧಾಂತಿಕ ವಲಯಗಳ ನಾಯಕರಿಗೆ ಗೌರವ ಸಲ್ಲಿಸುವ ಮೂಲಕ ಹಾಗೂ ಮುಂಬರುವ ವಿಧಾನಸಭಾ ಚುನಾವಣೆ ಮಸ್ಸೂರಿ ರಾಜ್ಯಗಳ ಮೇಲೆ, ವಿಶೇಷವಾಗಿ ಕೇರಳದ ಮೇಲೆ ಕೇಂದ್ರ ಸರ್ಕಾರದ ಗಮನ ಕೇಂದ್ರೀಕೃತವಾಗಿದೆ ಎಂಬ ಸಂದೇಶವನ್ನು ನೀಡುತ್ತಿದೆ.
ಈ ವರ್ಷದ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಬಿಜೆಪಿ, ಸಿಪಿಐ(ಎಂ) ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಸೇರಿದಂತೆ ರಾಜಕೀಯ ನಾಯಕರು ಸೇರಿದ್ದಾರೆ. ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ, ಬಿಜೆಪಿ ದಿವಂಗತ ನಾಯಕ ವಿ.ಕೆ. ಮಲ್ಹೋತ್ರಾ, ಸಿಪಿಐ(ಎಂ) ದಿವಂಗತ ನಾಯಕ ಹಾಗೂ ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಮತ್ತು ಜೆಎಂಎಂ ಸಂಸ್ಥಾಪಕ ದಿವಂಗತ ಶಿಬು ಸೊರೆನ್ ಅವರು ಸೈದ್ಧಾಂತಿಕವಾಗಿ ಪರಸ್ಪರ ವಿರೋಧಿಗಳಾಗಿದ್ದರೂ, ಈ ಪಟ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯ ಪ್ರಶಸ್ತಿ ಪುರಸ್ಕೃತರು ಆಯ್ಕೆಯಾಗಿರುವುದು ಗಮನ ಸೆಳೆದಿದೆ. ಕೇರಳದಿಂದ ಎಂಟು ಮಂದಿ, ತಮಿಳುನಾಡಿನಿಂದ ಹದಿಮೂರು ಮಂದಿ ಮತ್ತು ಪಶ್ಚಿಮ ಬಂಗಾಳದಿಂದ ಹನ್ನೊಂದು ಮಂದಿ ಈ ಬಾರಿ ಪದ್ಮ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಘೋಷಿಸಲಾದ ಐದು ಪದ್ಮವಿಭೂಷಣ ಪ್ರಶಸ್ತಿಗಳಲ್ಲಿ ಮೂವರು ಕೇರಳದ ವ್ಯಕ್ತಿಗಳಿಗೆ ಲಭಿಸಿರುವುದು ವಿಶೇಷವಾಗಿದೆ.
ಕಳೆದ ವರ್ಷ ನಿಧನರಾದ ವಿ.ಎಸ್. ಅಚ್ಯುತಾನಂದನ್ ಅವರನ್ನು ಮರಣೋತ್ತರವಾಗಿ ನೀಡಲಾಗುತ್ತಿರುವ ಪದ್ಮವಿಭೂಷಣ ಪ್ರಶಸ್ತಿ ಪ್ರಮುಖ ಆಯ್ಕೆಯಾಗಿ ಪರಿಗಣಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರ ಪುತ್ರ ವಿ.ಎ. ಅರುಣ್ ಕುಮಾರ್, ಈ ಗೌರವವನ್ನು “ದೇಶದಿಂದ ದೊರೆತ ಅಮೂಲ್ಯ ಮನ್ನಣೆ” ಎಂದು ವರ್ಣಿಸಿ, ಕುಟುಂಬವು ಹೆಮ್ಮೆಯಿಂದ ಸ್ವೀಕರಿಸುವುದಾಗಿ ತಿಳಿಸಿದ್ದಾರೆ.
ಅಚ್ಯುತಾನಂದನ್ ಮತ್ತು ಶಿಬು ಸೊರೆನ್ ಅವರಿಗೆ ನೀಡಲಾಗಿರುವ ಮರಣೋತ್ತರ ಗೌರವಗಳನ್ನು, ಸರ್ಕಾರವು ವಿಭಿನ್ನ ಸೈದ್ಧಾಂತಿಕ ವಲಯಗಳಿಗೆ ಸಂದೇಶ ನೀಡುವ ಪ್ರಯತ್ನದ ಭಾಗವಾಗಿ ನೋಡಲಾಗುತ್ತಿದೆ. ‘ವಿ.ಎಸ್.’ ಎಂದೇ ಜನಪ್ರಿಯರಾಗಿದ್ದ ಅಚ್ಯುತಾನಂದನ್, ಸಿಪಿಐ(ಎಂ) ಒಳಗೆ ಜೀವನಪೂರ್ತಿ ಬಂಡಾಯದ ಧ್ವನಿಯಾಗಿ ಗುರುತಿಸಿಕೊಂಡಿದ್ದರು. ಅವರು ಈಗಿನ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಪಕ್ಷದ ನಾಯಕತ್ವದೊಂದಿಗೆ ಹಲವು ಸಂದರ್ಭಗಳಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದರು. 2007ರಲ್ಲಿ ಅಚ್ಯುತಾನಂದನ್ ಮತ್ತು ವಿಜಯನ್ ಇಬ್ಬರನ್ನೂ ಸಿಪಿಐ(ಎಂ) ಪಾಲಿಟ್‌ಬ್ಯೂರೊದಿಂದ ತೆಗೆದುಹಾಕಿದ ಅಪರೂಪದ ಶಿಸ್ತು ಕ್ರಮ ಹಾಗೂ ಆರು ತಿಂಗಳ ಬಳಿಕ ಮರುನೇಮಕ, ಇವು ಪಕ್ಷದ ಒಳಗಿನ ಸಂಘರ್ಷವನ್ನು ಬಹಿರಂಗಪಡಿಸಿತ್ತು.
ರಾಜಕೀಯವಾಗಿ ಮತ್ತೊಂದು ಗಮನಾರ್ಹ ಆಯ್ಕೆಯಾಗಿ, ಹಿಂದುಳಿದ ಹಿಂದೂ ಈಳವ ಸಮುದಾಯದ ನಾಯಕ ಹಾಗೂ ಶ್ರೀ ನಾರಾಯಣ ಧರ್ಮ ಪರಿಪಾಲನ (ಎಸ್‌ಎನ್‌ಡಿಪಿ) ಯೋಗಂನ ಪ್ರಧಾನ ಕಾರ್ಯದರ್ಶಿ ವೆಲ್ಲಪ್ಪಳ್ಳಿ ನಟೇಶನ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ. ಮುಸ್ಲಿಂ ವಿರೋಧಿ ಹೇಳಿಕೆಗಳ ಮೂಲಕ ನಟೇಶನ್ ಹಲವು ಬಾರಿ ವಿವಾದಕ್ಕೆ ಗುರಿಯಾಗಿದ್ದಾರೆ. ಇತ್ತೀಚೆಗೆ ಅವರು ಕೇರಳದಲ್ಲಿ ಹಿಂದೂ ಏಕತೆಗೆ ಕರೆ ನೀಡಿದ್ದು, ಪಿಣರಾಯಿ ವಿಜಯನ್ ನೇತೃತ್ವದ ಎಡಪಂಥೀಯ ಸರ್ಕಾರಕ್ಕೆ ಸಮೀಪವಾಗಿದ್ದಾರೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ವಿಜಯನ್ ಸತತ ಮೂರನೇ ಅವಧಿಗೆ ಮುಖ್ಯಮಂತ್ರಿ ಆಗಲಿದ್ದಾರೆ ಎಂಬುದನ್ನೂ ಅವರು ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ.
ನಟೇಶನ್ ಅವರ ಪುತ್ರ ತುಷಾರ್ ವೆಲ್ಲಪ್ಪಳ್ಳಿ, ಕೇರಳದಲ್ಲಿ ಎನ್‌ಡಿಎ ಘಟಕವಾಗಿರುವ ಎಸ್‌ಎನ್‌ಡಿಪಿ ಯೋಗಂನ ರಾಜಕೀಯ ಅಂಗಸಂಸ್ಥೆಯಾದ ಭಾರತ್ ಧರ್ಮ ಜನ ಸೇನಾದ ಅಧ್ಯಕ್ಷರಾಗಿದ್ದಾರೆ. ಗಮನಾರ್ಹವಾಗಿ, ನಟೇಶನ್ ಈ ಹಿಂದೆ ಪದ್ಮ ಪ್ರಶಸ್ತಿಗಳು ತಮ್ಮ ಮಹತ್ವವನ್ನು ಕಳೆದುಕೊಂಡಿವೆ ಎಂದು ಟೀಕಿಸಿದ್ದರು.
ಹಿರಿಯ ಆರೆಸ್ಸೆಸ್ ನಾಯಕ ಪಿ. ನಾರಾಯಣನ್ (90) ಅವರಿಗೆ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪದ್ಮವಿಭೂಷಣ ಪ್ರಶಸ್ತಿ ಲಭಿಸಿದೆ. ಉತ್ತರ ಕೇರಳದಲ್ಲಿ ದೀರ್ಘಕಾಲ ಪ್ರಚಾರಕರಾಗಿದ್ದ ಅವರು, ಸಂಘ ಪರಿವಾರ ಬೆಂಬಲಿತ ಮಲಯಾಳಂ ದಿನಪತ್ರಿಕೆ ‘ಜನ್ಮಭೂಮಿ’ಯ ಮುಖ್ಯ ಸಂಪಾದಕರಾಗಿಯೂ, ಸ್ವದೇಶಿ ಜಾಗರಣ್ ಮಂಚ್‌ನ ರಾಜ್ಯ ಸಂಚಾಲಕರಾಗಿಯೂ ಕಾರ್ಯನಿರ್ವಹಿಸಿದ್ದರು.
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಜೈಲು ಶಿಕ್ಷೆಗೆ ಒಳಗಾದ ಸುಮಾರು ಎರಡು ವರ್ಷಗಳ ನಂತರ, ಅವರ ತಂದೆ ದಿವಂಗತ ಶಿಬು ಸೊರೆನ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಿಸಲಾಗಿದೆ.ಶಿಬು ಸೊರೆನ್ ಆಗಸ್ಟ್ 2025ರಲ್ಲಿ ನಿಧನರಾದರು.
ಜನಸಂಘ ಯುಗದ ಹಿರಿಯ ನಾಯಕ, ಐದು ಬಾರಿ ಸಂಸದ ಹಾಗೂ 1999ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಸೋಲಿಸಿದ್ದ ಬಿಜೆಪಿ ನಾಯಕ ವಿ.ಕೆ. ಮಲ್ಹೋತ್ರಾ ಅವರಿಗೆ ಮರಣೋತ್ತರವಾಗಿ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ. ಅವರು ಸೆಪ್ಟೆಂಬರ್ 2025ರಲ್ಲಿ ನಿಧನರಾದರು.
ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹಾಗೂ ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರಿಗೆ ಕೂಡ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ. 2022ರಲ್ಲಿ ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನಗೊಂಡು ಬಿಜೆಪಿ–ಶಿವಸೇನೆ ನೇತೃತ್ವದ ಮಹಾಯುತಿ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಅವರು ರಾಜ್ಯಪಾಲರಾಗಿದ್ದರು.
ರಾಜಕೀಯ ಸಂದೇಶವು ಕೇವಲ ರಾಜಕೀಯ ನಾಯಕರಿಗೆ ಮಾತ್ರ ಸೀಮಿತವಾಗಿಲ್ಲ. ಮಾಜಿ ಬಿಜೆಪಿ ಸಂಸದ ಹಾಗೂ ಹಿರಿಯ ಹಿಂದಿ ಚಲನಚಿತ್ರ ನಟ ಧರ್ಮೇಂದ್ರ ಅವರಿಗೆ ಮರಣೋತ್ತರವಾಗಿ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ. ನಟನಾಗಿ ಪಡೆದ ಜನಪ್ರಿಯತೆಯನ್ನು ಮೀರಿ, ಪಂಜಾಬ್ ಹಾಗೂ ಹರಿಯಾಣ, ಪಶ್ಚಿಮ ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಜಾಟ್ ಸಮುದಾಯಗಳಲ್ಲಿ ಅವರಿಗೆ ಮಹತ್ತರ ಸ್ಥಾನಮಾನವಿದೆ. ರೈತ ಚಳವಳಿ ಹಾಗೂ ಕಳೆದ ವರ್ಷ ಉಪಾಧ್ಯಕ್ಷ ಜಗದೀಪ್ ಧಂಖರ್ ರಾಜೀನಾಮೆಯ ನಂತರ ಬಿಜೆಪಿ ಸವಾಲುಗಳನ್ನು ಎದುರಿಸುತ್ತಿರುವ ಈ ಪ್ರದೇಶಗಳಲ್ಲಿ ಈ ಆಯ್ಕೆಗೆ ರಾಜಕೀಯ ಅರ್ಥವಿದೆ ಎನ್ನಲಾಗುತ್ತಿದೆ.
ಇಂತಹ ವಿಭಿನ್ನ ಸೈದ್ಧಾಂತಿಕ ಸಮತೋಲನದ ಗೌರವಗಳು ಹೊಸದೇನಲ್ಲ. 2024ರ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಅವಧಿಯ ಅಂತ್ಯದ ಹಂತದಲ್ಲಿ, ಕೇಂದ್ರ ಸರ್ಕಾರ ರಾಜಕೀಯ ಗಡಿಗಳನ್ನು ಮೀರಿ ಹಲವು ಭಾರತ ರತ್ನ ಪ್ರಶಸ್ತಿಗಳನ್ನು ಘೋಷಿಸಿತ್ತು. ರಾಮ ಮಂದಿರ ಉದ್ಘಾಟನೆ ಹಂತದಲ್ಲಿ ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರಿಗೆ ಈ ಗೌರವ ನೀಡಲಾಗಿತ್ತು. ಜೊತೆಗೆ, ಮಾಜಿ ಕಾಂಗ್ರೆಸ್ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಘೋಷಿಸಲಾಗಿದ್ದು, ಕಾಂಗ್ರೆಸ್ ತನ್ನ ಪರಂಪರೆಯನ್ನು ಕಡೆಗಣಿಸಿದೆ ಎಂಬ ಸಂದೇಶವಾಗಿ ಇದನ್ನು ವ್ಯಾಪಕವಾಗಿ ಅರ್ಥೈಸಲಾಗಿತ್ತು.
ಅದೇ ರೀತಿಯಲ್ಲಿ, ರೈತ ಪ್ರತಿಭಟನೆಗಳ ಬಳಿಕ ಜಾಟ್ ಸಮುದಾಯ ಬಿಜೆಪಿ ವಿರುದ್ಧ ತಿರುಗಿದೆ ಎಂಬ ಅಭಿಪ್ರಾಯಗಳ ನಡುವೆಯೇ, ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರಿಗೆ ಭಾರತ ರತ್ನ ನೀಡಲಾಯಿತು. ಸ್ವಲ್ಪ ಸಮಯದ ಬಳಿಕ, ಅವರ ಮೊಮ್ಮಗ ಹಾಗೂ ರಾಷ್ಟ್ರೀಯ ಲೋಕದಳ ನಾಯಕ ಜಯಂತ್ ಚೌಧರಿ 2024ರ ಲೋಕಸಭಾ ಚುನಾವಣೆಗೆ ಮುನ್ನ ಎನ್‌ಡಿಎಗೆ ಸೇರ್ಪಡೆಯಾದರು.
ವಿರೋಧ ಪಕ್ಷಗಳು ಜಾತಿ ಜನಗಣತಿಗೆ ಒತ್ತಾಯಿಸುತ್ತಿರುವ ಹಾಗೂ ಬಿಜೆಪಿ ಮೀಸಲಾತಿ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸುತ್ತಿರುವ ಸಂದರ್ಭದಲ್ಲಿ, ಸಾಮಾಜಿಕ ನ್ಯಾಯದ ಪ್ರತೀಕ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡಲಾಯಿತು. ಇದರ ಕೆಲವೇ ದಿನಗಳಲ್ಲಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಎನ್‌ಡಿಎಗೆ ಮರಳಿದ್ದು, ಸಾಮಾಜಿಕ ನ್ಯಾಯದ ರಾಜಕೀಯವನ್ನು ಕೇಂದ್ರವಾಗಿಟ್ಟುಕೊಂಡ ಹೊಸ ರಾಜಕೀಯ ಧಾಟಿಗೆ ಮುಂದಾದರು.
ಸೌಜನ್ಯ: indianexpress.com