×
Ad

ಅಯೋಧ್ಯೆಯ ರಾಮ ಮಂದಿರದ ಹೊರಗಡೆ ಪೂಜಾ ಸಾಮಗ್ರಿ ಮಾರಾಟ ಮಾಡಿದ್ದಕ್ಕೆ ಬೀದಿ ಬದಿ ವ್ಯಾಪಾರಿಗಳಿಗೆ ತಲೆ ಕೆಳಗಾಗಿ ನಿಲ್ಲುವ ಶಿಕ್ಷೆ!

ಪುರಸಭೆಯ ಅಧಿಕಾರಿಗಳ ವಿರುದ್ಧ ಆಂತರಿಕ ತನಿಖೆ

Update: 2025-10-14 12:23 IST

Photo credit: NDTV

ಅಯೋಧ್ಯೆ: ರಾಮ ಮಂದಿರದ ಹೊರಗೆ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದ ಮಾರಾಟಗಾರರಿಗೆ ಪುರಸಭೆಯ ಅಧಿಕಾರಿಗಳು ಸುಡು ಬಿಸಿಲಿನಲ್ಲಿ ಸಾರ್ವಜನಿಕವಾಗಿ ತಲೆ ಕೆಳಗೆ ಮಾಡಿ ನಿಲ್ಲುವ ಶಿಕ್ಷೆ ವಿಧಿಸಿರುವ ಅಮಾನುಷ ಘಟನೆ ಅಯೋಧ್ಯೆಯಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಅಯೋಧ್ಯೆ ಪುರಸಭೆಯ ಅತಿಕ್ರಮಣ ತಡೆ ವಿಭಾಗದ ಅಧಿಕಾರಿಗಳು ಕಾರ್ಯಾಚರಣೆಯ ವೇಳೆ ರಾಮಪಥದ ಪಕ್ಕದಲ್ಲಿ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದ ಎಂಟು ಮಂದಿಯನ್ನು ವಶಕ್ಕೆ ಪಡೆದು ಬಳಿಕ ಅವರನ್ನು ದೀನ್ ದಯಾಳ್ ಉಪಾಧ್ಯಾಯ ಉದ್ಯಾನವನಕ್ಕೆ ಕರೆದೊಯ್ದು ತಲೆ ಕೆಳಗಾಗಿ ನಿಲ್ಲುವಂತೆ ಬಲವಂತಪಡಿಸಲಾಗಿದೆ ಎಂದು ವರದಿಯಾಗಿದೆ. ಪುರಸಭೆಯ ಸಮವಸ್ತ್ರ ಧರಿಸಿದ ಸಿಬ್ಬಂದಿ ಲಾಠಿ ಹಿಡಿದು ನಿಂತು ಈ ದೃಶ್ಯವನ್ನು ವೀಕ್ಷಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

“ಅತಿಕ್ರಮಣ ತಡೆ ತಂಡದ ಕೆಲ ಸದಸ್ಯರ ವರ್ತನೆ ಅತ್ಯಂತ ಗಂಭೀರವಾಗಿದ್ದು, ಈ ಕುರಿತು ಆಂತರಿಕ ತನಿಖೆ ಪ್ರಾರಂಭಿಸಲಾಗಿದೆ. ಸಂತ್ರಸ್ತರಿಂದ ಹೇಳಿಕೆಗಳನ್ನು ದಾಖಲಿಸಲಾಗುತ್ತಿದ್ದು, ಶೀಘ್ರದಲ್ಲೇ ವರದಿ ಸಲ್ಲಿಸಲಾಗುತ್ತದೆ,” ಎಂದು ಅಯೋಧ್ಯೆಯ ಪುರಸಭೆಯ ಆಯುಕ್ತ ಜಯೇಂದ್ರ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಘಟನೆಯನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸಿದ್ದು, “ಅಯೋಧ್ಯಾ ಪೌರ ಅಧಿಕಾರಿಗಳ ಈ ತಾಲಿಬಾನಿ ವರ್ತನೆ ಬಿಜೆಪಿ ಆಡಳಿತದ ಸರ್ವಾಧಿಕಾರಿ ಮನೋಭಾವದ ನಿಜಸ್ವರೂಪವನ್ನು ತೋರಿಸುತ್ತದೆ,” ಎಂದು ಆರೋಪಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News