×
Ad

ರಾಷ್ಟ್ರಪತಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆರೋಪ : ಪಶ್ಚಿಮ ಬಂಗಾಳ ಸರಕಾರದಿಂದ ಪ್ರತಿಕ್ರಿಯೆ ಕೋರಿದ ಕೇಂದ್ರ

Update: 2026-03-08 20:44 IST

 ರಾಷ್ಟ್ರಪತಿ ದ್ರೌಪದಿ ಮುರ್ಮು | Photo Credit: PTI 

ಹೊಸದಿಲ್ಲಿ, ಮಾ. 8: ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕಾರ್ಯಕ್ರಮದಲ್ಲಿ ಶಿಷ್ಟಾಚಾರದ ಕೊರತೆಯಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಕೇಂದ್ರ ಸರಕಾರವು ರಾಜ್ಯ ಸರಕಾರದಿಂದ ವರದಿಯೊಂದನ್ನು ಕೋರಿದೆ ಎಂದು ಮೂಲಗಳು ತಿಳಿಸಿವೆ. ರಾಷ್ಟ್ರಪತಿ ಭೇಟಿಯ ವೇಳೆ ಶಿಷ್ಟಾಚಾರ, ಸ್ಥಳ ಮತ್ತು ದಾರಿ ವ್ಯವಸ್ಥೆಗೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆಯಾಗಿದೆ ಎಂಬ ಆರೋಪಗಳ ಬಗ್ಗೆ ರವಿವಾರ ಸಂಜೆ 5 ಗಂಟೆಯ ಒಳಗೆ ವರದಿ ನೀಡುವಂತೆ ಕೇಂದ್ರ ಸರಕಾರವು ರಾಜ್ಯ ಸರಕಾರಕ್ಕೆ ಸೂಚಿಸಿದೆ ಎನ್ನಲಾಗಿದೆ.

ಶಿಷ್ಟಾಚಾರ, ಸ್ಥಳ ಮತ್ತು ದಾರಿ ವ್ಯವಸ್ಥೆಗಳಿಗೆ ಸಂಬಂಧಿಸಿದ ‘ನೀಲಿ ಪುಸ್ತಕ’ ನಿಯಮಗಳ ಉಲ್ಲಂಘನೆಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಸೂಚಿಸಿದ್ದಾರೆ.

ಬಾಗ್‌ಡೋಗ್ರ ವಿಮಾನ ನಿಲ್ದಾಣದ ಸಮೀಪ ನಡೆದ ಬುಡಕಟ್ಟು ಸಮುದಾಯದ ಕಾರ್ಯಕ್ರಮವೊಂದರಲ್ಲಿ ಪ್ರೇಕ್ಷಕರ ಕಡಿಮೆ ಹಾಜರಾತಿಯ ಬಗ್ಗೆ ರಾಷ್ಟ್ರಪತಿ ಮುರ್ಮು ಶನಿವಾರ ಅತೃಪ್ತಿ ವ್ಯಕ್ತಪಡಿಸಿದ್ದರು. ಕಾರ್ಯಕ್ರಮದ ಸ್ಥಳವನ್ನು ಬಿದನ್ನಗರ್‌ನಿಂದ ಸ್ಥಳಾಂತರಿಸುವ ನಿರ್ಧಾರವನ್ನೂ ಅವರು ಪ್ರಶ್ನಿಸಿದ್ದರು. ತನ್ನ ಭೇಟಿಯ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳ ಅನುಪಸ್ಥಿತಿಯ ಬಗ್ಗೆಯೂ ಅವರು ಅತೃಪ್ತಿ ವ್ಯಕ್ತಪಡಿಸಿದ್ದರು.

ಮಮತಾ ಪ್ರತಿಕ್ರಿಯೆ

ರಾಷ್ಟ್ರಪತಿಯವರು ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ, ರಾಷ್ಟ್ರಪತಿಯವರ ಕಾರ್ಯಕ್ರಮ ನಡೆದ ಸ್ಥಳವು ಸೂಕ್ತ ವ್ಯವಸ್ಥೆಯನ್ನು ಹೊಂದಿರಲಿಲ್ಲ ಎನ್ನುವುದನ್ನು ಜಿಲ್ಲಾಡಳಿತವು ಮೊದಲೇ ತಿಳಿಸಿತ್ತು ಎಂದು ಹೇಳಿದ್ದಾರೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯು ತನ್ನ ರಾಜಕೀಯ ಕಾರ್ಯಸೂಚಿಗಾಗಿ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ, ಹಾಗೂ ಆ ಮೂಲಕ ಅಗೌರವ ತೋರಿಸುತ್ತಿದೆ ಎಂಬುದಾಗಿಯೂ ಅವರು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News