ಬಿಹಾರ: ಸಹೋದ್ಯೋಗಿಯಿಂದ ಗುಂಡಿಟ್ಟು ಕಾನ್ಸ್ಟೇಬಲ್ ಹತ್ಯೆ
ಸರ್ವಜೀತ ಕುಮಾರ - ಸೋನು ಕುಮಾರ | Photo : NDTV
ಬೆಟ್ಟಿಯಾ: ಪೋಲಿಸ್ ಕಾನಸ್ಟೇಬಲ್ ಓರ್ವರನ್ನು ಸಹೋದ್ಯೋಗಿಯೇ ಗುಂಡಿಟ್ಟು ಕೊಂದಿರುವ ಘಟನೆ ಬಿಹಾರದ ಪಶ್ಚಿಮ ಚಂಪಾರಣ ಜಿಲ್ಲೆಯ ಬೆಟ್ಟಿಯಾದಲ್ಲಿ ನಡೆದಿದೆ.
ಕೈಮೂರ್ ಜಿಲ್ಲೆಯ ನಿವಾಸಿ ಸೋನು ಕುಮಾರ ಮೃತ ಕಾನ್ಸ್ಟೇಬಲ್ ಆಗಿದ್ದು,ಆರೋಪಿ ಭೋಜಪುರ ಜಿಲ್ಲೆಯ ನಿವಾಸಿ ಸರ್ವಜೀತ ಕುಮಾರ್ನನ್ನು ಬಂಧಿಸಲಾಗಿದೆ. ಇಬ್ಬರೂ ಬೆಟ್ಟಿಯಾ ಪೋಲಿಸ್ ಲೈನ್ಸ್ ನಲ್ಲಿ ನಿಯೋಜಿತರಾಗಿದ್ದರು.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಐಜಿ ಹರಕಿಶೋರ ರಾಯ್ ಅವರು, ಶನಿವಾರ ರಾತ್ರಿ ಪೋಲಿಸ್ ಲೈನ್ಸ್ ನಲ್ಲಿ ಈ ಘಟನೆ ನಡೆದಿದೆ. ಯಾವುದೋ ಕ್ಷುಲ್ಲಕ ವಿಷಯದಲ್ಲಿ ಅವರಿಬ್ಬರ ನಡುವಿನ ತೀವ್ರ ವಾಗ್ವಾದ ಘಟನೆಗೆ ಕಾರಣವೆಂದು ಪ್ರಾಥಮಿಕ ತನಿಖೆಯಿಂದ ಕಂಡು ಬಂದಿದೆ. ಸರ್ವಜೀತ್ ತನ್ನ ಸರ್ವಿಸ್ ರಿವಾಲ್ವರ್ ನಿಂದ ಸೋನು ಕುಮಾರ್ ಮೇಲೆ ಗುಂಡು ಹಾರಿಸಿದ್ದು, ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಬಗ್ಗೆ ಮುಂದಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು
ಸೋನು ಕುಮಾರ್ ಹತ್ಯೆಯ ಬಳಿಕ ಆರೋಪಿ ತನ್ನ ಸರ್ವಿಸ್ ರಿವಾಲ್ವರ್ನೊಂದಿಗೆ ಕಟ್ಟಡದ ಛಾವಣಿಯನ್ನು ಹತ್ತಿದ್ದ. ಆದರೆ ಇತರ ಕಾನ್ಸ್ಟೇಬಲ್ ಗಳು ಆತನ ಮೇಲೆ ಮುಗಿಬಿದ್ದು ಹಿಡಿದಿದ್ದರು.
ಒಟ್ಟಿಗೆ ಕೆಲಸ ಮಾಡುತ್ತಿದ್ದ ಸೋನು ಕುಮಾರ್ ಮತ್ತು ಸರ್ವಜೀತ್ ಇತ್ತೀಚಿಗಷ್ಟೇ ಸಿಕ್ತಾ ಪೋಲಿಸ್ ಠಾಣೆಯಿಂದ ಇಲ್ಲಿಗೆ ವರ್ಗಾವಣೆಗೊಂಡಿದ್ದರು.